ADVERTISEMENT

ರಟಕಲ್ ಸೇತುವೆ ಬಳಿ ಚೀಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2020, 10:50 IST
Last Updated 22 ಆಗಸ್ಟ್ 2020, 10:50 IST
ಕಲಬುರ್ಗಿಯಲ್ಲಿ ಪತ್ತೆಯಾದ ಹೆಣ್ಣು ಶಿಶು
ಕಲಬುರ್ಗಿಯಲ್ಲಿ ಪತ್ತೆಯಾದ ಹೆಣ್ಣು ಶಿಶು   

ಕಾಳಗಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ರಟಕಲ್ ಗ್ರಾಮದ ಕಲಬುರ್ಗಿ ಮಾರ್ಗದ ಬಸ್ ತಂಗುದಾಣದ ಬಳಿ ಸೇತುವೆ ಬದಿಯಲ್ಲಿ ಶನಿವಾರ ನಸುಕಿನ ವೇಳೆಗೆ ಕೈ ಚೀಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.

ವಿವರ: ರಟಕಲ್ ಗ್ರಾಮದ ಯುವ ಮುಖಂಡ ರೇವಣಸಿದ್ದಪ್ಪ ಬಡಾ ಅವರು ಬೆಳಿಗ್ಗೆ 5.40ಕ್ಕೆ ಹಾಲು ತರಲು ತಮ್ಮ ತೋಟಕ್ಕೆ ತೆರಳುವಾಗ ಹಸುಗೂಸು ಅಳುವುದು ಕೇಳಿಬಂದಿದೆ. ಆಗ ಸೇತುವೆ ಬಳಿ ಬಿದ್ದಿದ್ದ ನೀಲಿ ಬಣ್ಣದ ಕೈಚೀಲ ನೋಡಿದ್ದಾಗ ಒಳಗಡೆ ಬಟ್ಟೆ ಸುತ್ತಿದ್ದ ನವಜಾತ ಹೆಣ್ಣು ಶಿಶು ಇರುವುದು ಕಂಡು ಬಂದಿದೆ.

ಇದೇ ವೇಳೆಗೆ ಆ ಮಾರ್ಗದಲ್ಲಿ ಓಡಾಡಿಕೊಂಡು ಬರುತ್ತಿದ್ದ ಗ್ರಾಮದ ಇಸ್ಮಾಯಿಲ್ ಸಾಬ್ ಖುರೇಷಿ, ಮಲ್ಲಪ್ಪ ಮರಗುತ್ತಿ, ಗೌರಿಶಂಕರ ಕಿಣ್ಣಿ ಸಹ ರೇವಣಸಿದ್ದಪ್ಪ ಬಡಾ ಅವರ ಬಳಿಗೆ ಬಂದು ಕೈ ಚೀಲದಲ್ಲಿ ಶಿಶು ಇರುವುದು ನೋಡಿ ಎಲ್ಲರು ಕೂಡಿ ಶಿಶುವನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೈಚೀಲ ಸಮೇತ ಹೊತ್ತು ತಂದಿದ್ದಾರೆ.

ADVERTISEMENT

ಆಸ್ಪತ್ರೆ ಸಿಬ್ಬಂದಿ ಶಿಶುವಿಗೆ ಅಗತ್ಯ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ. ಶಿಶು 3 ಕೆಜಿ ತೂಕ ಹೊಂದಿದ್ದು ಆರೋಗ್ಯಯುತವಾಗಿದೆ. ಬಳಿಕ ಚಿಂಚೋಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡಿ ಶಿಶು ಪಡೆದು ಪೋಷಣೆ ಮಾಡಲು ತಿಳಿಸಿದ್ದಾರೆ.

ಅದರಂತೆ ಸ್ಥಳಕ್ಕೆ ಬಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಶಿಶುವನ್ನು ಆರೈಕೆಗಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡರು.

ಈ ಮಧ್ಯೆ ಪೊಲೀಸರು ಮತ್ತು ಕೆಲ ಮುಖಂಡರು ಈ ನವಜಾತ ಶಿಶು ಯಾರದು? ಎಲ್ಲಿಂದ ಬಂತು? ಎಂದು ಪತ್ತೆ ಹಚ್ಚಲು ಪ್ರಯತ್ನಿಸಿದರಾದರೂ ನಿಖರವಾದ ಸುಳಿವು ದೊರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.