ಯಡ್ರಾಮಿ: ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಭಾವೈಕ್ಯದ ಪ್ರತೀಕ, ತತ್ವಪದ ಸಾಹಿತ್ಯದ ಅಗ್ರಪಂಕ್ತಿಯ ಗುರುವಾದ ಕಡಕೋಳ ಮಡಿವಾಳಪ್ಪನವರ ಜಾತ್ರೆಯ ರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.
ಜಾತ್ರೆಯ ಅಂಗವಾಗಿ ಡಿಸೆಂಬರ್ 27ರಿಂದ ಶುರುವಾದ ಪುರಾಣ ಪ್ರವಚನ ಜನವರಿ 2ರಂದು ಸಂಪನ್ನಗೊಂಡಿತ್ತು. ಜನವರಿ 3ರಂದು ಮಡಿವಾಳೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿದವು. ಸಂಜೆ ಅಯ್ಯಾಚಾರ ಭಕ್ತರಿಗೆ ಶಿವದೀಕ್ಷಾ, ಲಿಂಗಧಾರಣೆ ನಡೆಯಿತು. ರಾತ್ರಿ ವೇಳೆ ನಡೆದ ಧರ್ಮಸಭೆಯಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡು ಆಶೀರ್ವಚನ ನೀಡಿದರು.
ರಥೋತ್ಸವದ ದಿನದಂದು ಮಡಿವಾಳಪ್ಪನವರ ಗದ್ದುಗೆಗೆ ನಸುಕಿನಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ವಿವಿಧ ಅಭಿಷೇಕಗಳನ್ನು ಮಾಡಿದ ಬಳಿಕ ಜನರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಮಡಿವಾಳಪ್ಪ ಮತ್ತು ಗುರು ಮಾಂತೇಶ್ವರರ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು.
ಪಲ್ಲಕ್ಕಿಯ ಮೆರವಣಿಗೆಯು ದೇವಸ್ಥಾನದ ದ್ವಾರದಿಂದ ಹೊರ ಬರುತ್ತಿದ್ದಂತೆ ಒಂದು ಗಂಟೆ ಕಾಲ ಪುರವಂತರು ಸಾಹಸ ಮರೆದರು. ಹಿತ್ತಾಳೆ ತಂತಿಯನ್ನು ಬಾಯಲ್ಲಿ ತೂರಿಸಿ, ಅದರ ಜೊತೆಗೆ ಹತ್ತಾರು ಮೀಟರ್ ಉದ್ದದ ದಾರ ಹಾಕಿ ಎಳೆಯುವ ಮೂಲಕ ಭಕ್ತಿ ಪ್ರದರ್ಶಿಸಿದರು. ನೆರೆದಿದ್ದ ಸಾವಿರಾರು ಭಕ್ತರು ಕೈಮುಗಿದು ಚಪ್ಪಾಳೆ ತಟ್ಟಿದರು.
ಪಲ್ಲಕ್ಕಿಯು ಅಗ್ನಿ ಕುಂಡದ ಬಳಿ ಬರುತ್ತಿದ್ದಂತೆ ರಥದ ಮೇಲೆ ಕಳಸ ಏರಿಸಿ ಕೂರಿಸಲಾಯಿತು. ಪುರವಂತರು, ಪೂಜಾರಿಗಳು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ ಕಡಕೋಳ ಮಡಿವಾಳಪ್ಪನಿಗೆ ಜೈಕಾರ ಹಾಕುತ್ತಾ ಪುರವಂತರು, ರುದ್ರಮುನಿ ಶಿವಾಚಾರ್ಯರು, ಪಲ್ಲಕ್ಕಿ ಹೊತ್ತವರು, ಕಳಸ ಹಿಡಿದ ಮಹಿಳೆಯರು, ಹರಕೆ ಹೊತ್ತ ನೂರಾರು ಭಕ್ತರು ಪವಿತ್ರ ಅಗ್ನಿ ಕುಂಡ ಹಾಯ್ದರು. ಅಗ್ನಿ ಕುಂಡದ ಮುಂದಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯು ದೇವಸ್ಥಾನಕ್ಕೆ ಮರುಳಿತ್ತು.
ಪಲ್ಲಕ್ಕಿ ಮುಗಿದ ಬೆನ್ನಲ್ಲೇ ಕಡಕೋಳ ಮಡಿವಾಳಪ್ಪನವರ ಭವನದ ಆವರಣದಲ್ಲಿ ಸಾವಿರಾರು ಭಕ್ತರು ಜಾತ್ರೆಯ ವೈಶಿಷ್ಟ್ಯತೆಯ ‘ಭಜ್ಜಿ’ ಮಹಾಪ್ರಸಾದ ಸವಿದರು.
ಸಾವಿರಾರು ಭಕ್ತರು ಮಡಿವಾಳಪ್ಪನ ದಾಸೋಹಕ್ಕಾಗಿ ನೀಡಿದ್ದ ನಾನಾ ಬಗೆಯೆ ದವಸ ಧಾನ್ಯಗಳು, ತರಹೇವಾರಿ ತರಕಾರಿಗಳ ಮಿಶ್ರಣದ ಎರಡು ದೊಡ್ಡ ಪಾತ್ರೆಗಳಲ್ಲಿ ಭಜ್ಜಿ ಪಲ್ಯ ತಯಾರಿಸಲಾಗಿತ್ತು. ಸಾವಿರಾರು ರೊಟ್ಟಿಗಳನ್ನು ರಾಶಿ ಹಾಕಲಾಗಿತ್ತು. ಜಾತ್ರೆಗೆ ಬಂದಿದ್ದ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸರ್ವ ಧರ್ಮದವರು ಸಮೂಹ ಭೋಜನ ಮಾಡಿದರು. ಕೆಲವರು ಪಾತ್ರೆಗಳಲ್ಲಿ ಮನೆಯ ಸದಸ್ಯರಿಗೆ ತೆಗೆದುಕೊಂಡು ಹೋದರು.
ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ಸಿಂಗ್ ಅವರು ಮಡಿವಾಳಪ್ಪನವರ ಗದ್ದುಗೆಗೆ ನಮಿಸಿ, ರುದ್ರಮುನಿ ಶಿವಚಾರ್ಯರ ಆಶೀರ್ವಾದ ಪಡೆದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಪುರಾಣಿಕ್, ಖಾಸಿಂ ಪಟೇಲ್, ಸಿದ್ದಣ್ಣ ಕವಾಲದಾರ್, ಬಸನಗೌಡ ಮಾಲಿ ಪಾಟೀಲ, ಚಂದ್ರಕಾಂತಗೌಡ ಮಾಗಣಗೇರಾ, ಅಯ್ಯಪ್ಪ ಮಾಣಶಿವಣಗಿ, ಶರಣು ಸಹುಕಾರ, ಹಳ್ಳೆಪ್ಪಗೌಡ ಜಂಬೇರಾಳ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.