ADVERTISEMENT

ಕಲಬುರಗಿ: ರನ್‌ವೇ ಘರ್ಷಣೆ ಗುಣಾಂಕ ಪರೀಕ್ಷೆ ಯಶಸ್ವಿ

₹30 ಕೋಟಿ ವೆಚ್ಚದಲ್ಲಿ ರಿಕಾರ್ಪೆಟಿಂಗ್: ರನ್‌ವೇ ಮೊದಲ ಪದರು ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 15:40 IST
Last Updated 10 ಅಕ್ಟೋಬರ್ 2023, 15:40 IST
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರನ್‌ವೇ ರಿಕಾರ್ಪೆಟಿಂಗ್ ಬಳಿಕದ ರನ್‌ವೇ ಘರ್ಷಣೆ ಗುಣಾಂಕ ಪರೀಕ್ಷಿಸಿದ ಚೆನ್ನೈ ತಂಡ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರನ್‌ವೇ ರಿಕಾರ್ಪೆಟಿಂಗ್ ಬಳಿಕದ ರನ್‌ವೇ ಘರ್ಷಣೆ ಗುಣಾಂಕ ಪರೀಕ್ಷಿಸಿದ ಚೆನ್ನೈ ತಂಡ   

ಕಲಬುರಗಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ತಂಡವು ಕಲಬುರಗಿ ವಿಮಾನ ನಿಲ್ದಾಣದ ರನ್‌ವೇ ಮರುರಚನೆ(ರಿಕಾರ್ಪೆಟಿಂಗ್) ಬಳಿಕದ ರನ್‌ವೇ ಘರ್ಷಣೆ ಗುಣಾಂಕ ಪರೀಕ್ಷೆಯನ್ನು ಮಂಗಳವಾರ ನಡೆಸಿತು.

2019ರ ನವೆಂಬರ್ 22ರಂದು ವಿಮಾನ ಹಾರಾಟಕ್ಕೆ ತೆರೆದುಕೊಂಡ ನಿಲ್ದಾಣದ ರನ್‌ವೇಗೆ ಇದೇ ನ.22ಕ್ಕೆ ನಾಲ್ಕು ವರ್ಷ ತುಂಬಲಿದೆ. ವಿಮಾನವು ಸುರಕ್ಷಿತವಾಗಿ ಇಳಿಯಲು ಮತ್ತು ಹಾರಲು ₹30 ಕೋಟಿ ವೆಚ್ಚದಲ್ಲಿ ಎಎಐ ಮಾನದಂಡ ಅನುಸಾರ ರನ್‌ವೇ ಅನ್ನು ರಿಕಾರ್ಪೆಟಿಂಗ್ ಮಾಡಲಾಗುತ್ತಿದೆ.

ನಿಲ್ದಾಣದ ಎಂಜಿನಿಯರ್‌ಗಳು ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 2.7 ಕಿ.ಮೀ. ಉದ್ದದ ರನ್‌ವೇ ಮೇಲೆ ಮೊದಲ ಪದರಿನ ರಿಕಾರ್ಪೆಟಿಂಗ್ ಪೂರ್ಣಗೊಳಿಸಿದ್ದಾರೆ. ಮೊದಲ ಹಂತದ ಪರೀಕ್ಷೆ ಯಶಸ್ವಿಯಾಗಿದ್ದು, ಈಗ ಎರಡನೇ ಪದರಿನ ಕಾಮಗಾರಿಗೆ ಅಣಿಯಾಗಿದ್ದಾರೆ.

ADVERTISEMENT

ಎಎಐ ಒಡೆತನದ ಸರ್ಸಿಸ್ (ಎಸ್‌ಎಆರ್‌ಎಸ್‌ವೈಎಸ್‌) ಸರ್ಫೇಸ್ ವೋಲ್ವೋ ಫ್ರಿಕ್ಷನ್ ಟೆಸ್ಟರ್ (ಎಸ್‌ವಿಎಫ್‌ಟಿ) ವಾಹನ ಬಳಸಿಕೊಂಡು ರನ್‌ವೇ ಘರ್ಷಣೆ ಪರೀಕ್ಷೆಯನ್ನು ನಡೆಸಿತ್ತು. ಚೆನ್ನೈನಿಂದ ಬಂದಿದ್ದ ಪರಿಣಿತರ ತಂಡವು ₹2 ಕೋಟಿ ಮೊತ್ತದ ಸರ್ಸಿಸ್ ವಾಹನದೊಂದಿಗೆ ಬಂದು ಪರೀಕ್ಷೆ ನಡೆಸಿ ತೆರಳಿದೆ.

‘ಘರ್ಷಣೆ ಗುಣಾಂಕವು (ಫ್ರಿಕ್ಷನ್ ಕೊಎಫಿಸೆಂಟ್‌) ರನ್‌ವೇ ಮೇಲೆ ವಿಮಾನವು ಜಾರಿ ಹೋಗದಂತೆ ಎಷ್ಟರ ಮಟ್ಟಿಗೆ ತಡೆಯುತ್ತದೆ ಎಂಬುದರ ಮಾಪನವಾಗಿದೆ. ವಿಮಾನವು ರನ್‌ವೇ ಮೇಲಿಂದ ಸುರಕ್ಷಿತವಾಗಿ ಇಳಿಯಲು ಮತ್ತು ಹಾರಲು ಮಧ್ಯಮ ಘರ್ಷಣೆಯ ಗುಣಾಂಕ ಪ್ರಮುಖವಾಗುತ್ತದೆ. ಕಡಿಮೆ ಘರ್ಷಣೆ ಗುಣಾಂಕವು ವಿಮಾನವನ್ನು ರನ್‌ವೇ ಆಚೆಗೆ ಇಲ್ಲವೇ ಎಡ ಅಥವಾ ಬಲಕ್ಕೆ ಎಳೆದೊಯ್ಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ಘರ್ಷಣೆ ಗುಣಾಂಕವನ್ನು ಮಧ್ಯದ ಮಾಪನದಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ವಿಮಾನ ನಿಲ್ದಾಣ ನಿರ್ದೇಶಕ ಚಿಲಕಾ ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಸಿಸ್ ವಾಹನದ ಚಕ್ರಗಳು ವಿಮಾನದ ಚಕ್ರದಂತೆ ಇದ್ದು, ತೊಯ್ದ ಸ್ಥಿತಿಯಲ್ಲಿ ರನ್‌ವೇ ಪರೀಕ್ಷೆ ಮಾಡಲಾಯಿತು. ಗಾಲಿಯ ಮೇಲೆ ನೀರು ಬಿಟ್ಟು ಸ್ಪೋಟ ತಡೆಯುವ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು. ನಿಲ್ದಾಣದ ಎಂಜಿನಿಯರ್‌ಗಳ ರಿಕಾರ್ಪೆಟಿಂಗ್ ಕಾಮಗಾರಿಗೆ ಚೆನ್ನೈ ತಂಡ ಮೆಚ್ಚಿಗೆ ವ್ಯಕ್ತಪಡಿಸಿದೆ. ಒಂದು ತಿಂಗಳಲ್ಲಿ ಎರಡನೇ ಪದರಿನ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.

ಅವಧಿಗೂ ಮುನ್ನ ರಿಕಾರ್ಪೆಟಿಂಗ್: ‘ಸುಮಾರು 10 ವರ್ಷ ಬಾಳಿಕೆ ಬರಬೇಕಿದ್ದ ರನ್‌ವೇ 4 ವರ್ಷಗಳ ಪೂರೈಸುವ ಮುನ್ನವೇ ರಿಕಾರ್ಪೆಟಿಂಗ್‌ಗೆ ಬಂದಿದೆ. ರಾಜ್ಯ ಸರ್ಕಾರದಿಂದ ಗುತ್ತಿಗೆ ಪಡೆದಿದ್ದವರು ರನ್‌ವೇ ನಿರ್ಮಾಣದ ವೇಳೆ ಎಎಐ ಮಾನದಂಡಗಳನ್ನು ಪಾಲಿಸಿಲ್ಲ. ಹೀಗಾಗಿ, ಅವಧಿಗೂ ಮುನ್ನವೇ ರಿಕಾರ್ಪೆಟಿಂಗ್ ಮಾಡಲಾಗುತ್ತಿದೆ’ ಎಂದು ವಿಮಾನ ನಿಲ್ದಾಣದ ಮತ್ತೊಬ್ಬ ಅಧಿಕಾರಿ ಹೇಳಿದರು.

‘ಈಚೆಗೆ ವಿಮಾನ ಸೇವೆ ನೀಡಲು ಮುಂದೆ ಬರುವ ವಿಮಾನ ಸಂಸ್ಥೆಗಳು ರನ್‌ವೇ ಗುಣಮಟ್ಟ ಹಾಗೂ ಅಳವಡಿಸಿಕೊಂಡ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕೇಳುತ್ತವೆ. ಹೀಗಾಗಿ, ಇಂತಹ ಕಾಮಗಾರಿ ಹೆಚ್ಚಿನ ವಿಮಾನಗಳನ್ನು ಕಲಬುರಗಿಗೆ ಕರೆತರಲು ನೆರವಾಗುತ್ತವೆ’ ಎಂದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ರನ್‌ವೇ ರಿಕಾರ್ಪೆಟಿಂಗ್ ಬಳಿಕದ ರನ್‌ವೇ ಘರ್ಷಣೆ ಗುಣಾಂಕ ಪರೀಕ್ಷೆ ದೃಶ್ಯ

ಪ್ರಧಾನಿಯ ವಿಮಾನಕ್ಕಾಗಿ ರನ್‌ವೇ ತಿರುವು ವಿಸ್ತರಣೆ

ಪ್ರಧಾನಿ ನರೇಂದ್ರ ಮೋದಿ ಅವರು ದೇಶ–ವಿದೇಶದ ಪ್ರಯಾಣಕ್ಕೆ ಬಳಸುವ ಅತ್ಯಾಧುನಿಕ ಬೊಯಿಂಗ್–777 ಏರ್ ಇಂಡಿಯಾ ವಿಮಾನಕ್ಕಾಗಿ ರನ್‌ವೇ ತಿರುವಿನ ಎರಡು ಬದಿಯನ್ನು ವಿಸ್ತರಿಸಲಾಗಿದೆ. ರನ್‌ವೇನ ಎರಡೂ ಬದಿಯಲ್ಲಿ ತಿರುವಿನ ವಿಸ್ತರಣೆ 45 ಮೀಟರ್ ಇತ್ತು. ಈಗ ಅದನ್ನು 75 ಮೀಟರ್‌ಗೆ ವಿಸ್ತರಿಸಲಾಗಿದೆ. ಬೊಯಿಂಗ್–777 ಏರ್ ಇಂಡಿಯಾ ವಿಮಾನವು ಸುಲಲಿತವಾಗಿ 180 ಡಿಗ್ರಿ ತಿರುಗಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.