ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಬುಧವಾರ ನಿರೀಕ್ಷೆಯಂತೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನಗರದ ಇಂದಿರಾ ಸ್ಮಾರಕ ಭವನದಲ್ಲಿ ಮೇಯರ್ ಯಲ್ಲಪ್ಪ ನಾಯ್ಕೋಡಿ ಹಾಗೂ ಉಪಮೇಯರ್ ಹೀನಾ ಬೇಗಂ ಸಮ್ಮುಖದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಒಂದೊಂದೇ ಸಮಿತಿಯ ಅಧ್ಯಕ್ಷರ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸುವಂತೆ ಆಕಾಂಕ್ಷಿಗಳನ್ನು ಮೇಯರ್ ನಾಯ್ಕೋಡಿ ಆಹ್ವಾನಿಸಿದರು. ಒಬ್ಬೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಎಂದು ಘೋಷಿಸಲಾಯಿತು.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್ ನಂ. 44ರ ಸದಸ್ಯ ಸಚಿನ್ ಶಿರವಾಳ, ನಗರ ಯೋಜನೆ ಸುಧಾರಣೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್ ನಂ.22 ಸದಸ್ಯ ಮೊಹಮ್ಮದ್ ಅಜಿಮೋದ್ದಿನ್, ತೆರಿಗೆ ನಿಗದಿ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್ ನಂ.19ರ ಸದಸ್ಯೆ ಪರವೀನ್ ಬೇಗಂ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್ ನಂ.41ರ ಸದಸ್ಯೆ ಇರ್ಫಾನಾ ಪರವೀನ್ ಆಯ್ಕೆಯಾದರು.
ಆಯ್ಕೆಯ ಬಳಿಕ ಮೇಯರ್– ಉಪಮೇಯರ್, ಕುಡಾ ಅಧ್ಯಕ್ಷ ಮಜರ್‌ಆಲಂ ಖಾನ್ ಸೇರಿದಂತೆ ಹಲವು ಮುಖಂಡರು ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.