ADVERTISEMENT

ಕಲಬುರಗಿ | ಮುಂಗಾರು ವಿಳಂಬ; ಬಿತ್ತನೆ ಕ್ಷೇತ್ರ ಕುಸಿತ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 4:31 IST
Last Updated 19 ಜೂನ್ 2023, 4:31 IST
ಚಿಂಚೋಳಿ ಪಟ್ಟಣದಲ್ಲಿ ಬಿತ್ತನೆ ಬೀಜ ಖರೀದಿಗೆ ನೆರೆದ ಜನ
ಚಿಂಚೋಳಿ ಪಟ್ಟಣದಲ್ಲಿ ಬಿತ್ತನೆ ಬೀಜ ಖರೀದಿಗೆ ನೆರೆದ ಜನ   

ಓಂಕಾರ ಬಿರಾದಾರ

ಅಫಜಲಪುರ, ಜೇವರ್ಗಿ, ಆಳಂದ, ಸೇಡಂ, ವಾಡಿ, ಚಿತ್ತಾಪುರ, ಶಹಾಬಾದ್, ಕಮಲಾಪುರ ಭಾಗದಲ್ಲಿ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಜೂನ್‌ 1 ರಿಂದ 16 ರವರೆಗೆ 64.6 ಮಿ.ಮೀ ಮಳೆಯಾಗಬೇಕಿತ್ತು. ಆದರೆ 20.7 ಮಿ.ಮೀ ಮಾತ್ರ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಶೇ 68 ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಕಲಬುರಗಿ: ಜಿಲ್ಲೆಯಲ್ಲಿ ಇಷ್ಟೊತ್ತಿಗೆ ಮಳೆ ಸುರಿದು ಬಿತ್ತನೆ ಆರಂಭವಾಗಬೇಕಿತ್ತು. ಇದೀಗ ಜೂನ್‌ ಅರ್ಧ ತಿಂಗಳು ಮುಗಿದರೂ ನಿರೀಕ್ಷಿತ ಮಳೆಯಾಗಿಲ್ಲ. ಜಮೀನು ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡ ರೈತರಲ್ಲಿ ಆತಂಕ ಮೂಡಿದೆ.

ಜಿಲ್ಲೆಯಲ್ಲಿ ಒಟ್ಟು 8.91 ಲಕ್ಷ ಹೆಕ್ಟೇರ್‌ ನಿವ್ವಳ ಬಿತ್ತನೆ ಕ್ಷೇತ್ರ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುವ ಗುರಿ ಇದೆ.

ADVERTISEMENT

2022–23 ಸಾಲಿನಲ್ಲಿ 6,230 ಕ್ವಿಂಟಲ್‌ ತೊಗರಿ ಬೀಜ ಮಾರಾಟವಾಗಿ 5.30 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. 2023–24 ನೇ ಸಾಲಿನಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ 7.87 ಲಕ್ಷದಷ್ಟು ಬಿತ್ತನೆ ಗುರಿ ಹೊಂದಲಾಗಿದ್ದು, ಇಲಾಖೆ ವತಿಯಿಂದ ಜಿಲ್ಲೆ ಹಾಗೂ ತಾಲ್ಲೂಕು ಪ್ರದೇಶದ ಗೋದಾಮುಗಳಲ್ಲಿ 6,334 ಕ್ವಿಂಟಲ್‌ ತೊಗರಿ ಬೀಜ ಸಂಗ್ರಹಿಸಲಾಗಿದೆ. ರೈತರು ಬೀಜ ಖರೀದಿ ಮಾಡುತ್ತಿದ್ದಾರೆ. ಮಳೆ ಬಾರದಿದ್ದರೆ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತವಾಗಿ ತೊಗರಿ ಕ್ಷೇತ್ರ ಕಡಿಮೆಯಾಗುವ ಸಾಧ್ಯತೆ ಇದೆ.

ಅಫಜಲಪುರ, ಜೇವರ್ಗಿ, ಆಳಂದ, ಸೇಡಂ, ವಾಡಿ, ಚಿತ್ತಾಪುರ, ಶಹಾಬಾದ್, ಕಮಲಾಪುರ ಭಾಗದಲ್ಲಿ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಜೂನ್‌ 1 ರಿಂದ 16 ರವರೆಗೆ 64.6 ಮಿ.ಮೀ ಮಳೆಯಾಗಬೇಕಿತ್ತು. ಆದರೆ 20.7 ಮಿ.ಮೀ ಮಾತ್ರ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಶೇ 68 ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ನೆಟೆರೋಗ ತಡೆಯಲು ಟಿಎಸ್3 ಆರ್ ತಳಿ ಬದಲಿಗೆ ಪರ್ಯಾಯ ತಳಿಯಾಗಿ ಜಿಆರ್‌ 811 ಜಿಆರ್‌ಜಿ 52 ತಳಿಯ ಬೀಜಗಳನ್ನು ನೀಡಲಾಗುತ್ತಿದೆ. ಅದನ್ನು ಬಳಕೆ ಮಾಡಬೇಕು.
ಕಾಶಿನಾಥ ದಂಡೋತಿ, ಕೃಷಿ ಅಧಿಕಾರಿ ಶಹಾಬಾದ್

ಮುಂಗಾರು ಹಂಗಾಮಿನಲ್ಲಿ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಸೋಯಾಬಿನ್‌ ಈಗಾಗಲೇ ಬಿತ್ತನೆ ಮಾಡಬೇಕಿತ್ತು. ಮಳೆ ಕೊರತೆಯಿಂದ ಬಿತ್ತನೆ ಸಾಧ್ಯವಾಗಿಲ್ಲ. ಈ ವಾರದಲ್ಲಿ ಬಿತ್ತನೆ ಮಾಡಬೇಕು. ಇಲ್ಲವಾದರೆ ಅಲ್ಪಾವಧಿ ಬೆಳೆಗೆ ಹಿನ್ನೆಡೆಯಾಗಲಿದೆ ಎನ್ನುತ್ತಾರೆ ರೈತರೊಬ್ಬರು.

ಚಿಂಚೋಳಿ ತಾಲ್ಲೂಕು ಕೇಂದ್ರದ ಅರ್ಧ ಭಾಗದಲ್ಲಿ ಮಳೆ ಸುರಿದಿದೆ. ಇಲ್ಲಿ ಹೆಸರು, ಉದ್ದು, ಸೋಯಾಬಿನ್‌, ತೊಗರಿ ಸೇರಿದಂತೆ ಶೇ 10 ರಿಂದ 15 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿಗೆ ಹೋಲಿಕೆ ಮಾಡಿದರೆ ಶೇ 2 ರಷ್ಟು ಮಾತ್ರ ಬಿತ್ತನೆ ಆಗಿದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.

ತೊಗರಿ ನೆಟೆ ರೋಗದಿಂದ ಹಾಳಾದರೇ ಏನು ಮಾಡುವುದು ಎನ್ನುವ ಆತಂಕದಲ್ಲಿ ರೈತರು ಹತ್ತಿ ಬೇಸಾಯದ ಕಡೆ ಮುಖ ಮಾಡುತ್ತಿದ್ದಾರೆ. ‌
ಶರಣಬಸಪ್ಪ ಮಮಶೆಟ್ಟಿ, ರೈತ ಮುಖಂಡ

ಜಿಲ್ಲಾ ಕೃಷಿ ಇಲಾಖೆ ಮಾಹಿತಿ ಅನ್ವಯ, ಜೂನ್‌ 16ಕ್ಕೆ ಕೊನೆಗೊಂಡಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೃಷಿ ಕೇಂದ್ರಗಳಲ್ಲಿ 583.21 ಕ್ವಿಂಟಲ್‌ ತೊಗರಿ ಮಾರಾಟವಾಗಿದೆ. ಸೇಡಂ– 158 ಕ್ವಿಂಟಲ್‌, ಆಳಂದ– 121.49, ಚಿತ್ತಾಪುರ– 106.19, ಕಾಳಗಿಯಲ್ಲಿ 50.9 ಕ್ವಿಂಟಲ್ ಮಾರಾಟವಾಗಿದೆ.

1,234.61 ಕ್ವಿಂಟಲ್‌ ಸೋಯಾಬಿನ್‌ ಬಿತ್ತನೆ ಬೀಜ ಮಾರಾಟವಾಗಿದ್ದು, ಆಳಂದ– 736.05 ಕ್ವಿಂಟಲ್‌, ಕಮಲಾಪುರ–362.63, ಕಾಳಗಿಯಲ್ಲಿ 111.93 ಕ್ವಿಂಟಲ್‌ ಮಾರಾಟವಾಗಿದೆ. ಈ ಮೂರು ತಾಲ್ಲೂಕುಗಳಲ್ಲಿ ಸೋಯಾಬಿನ್‌ ಬೀಜ ಹೆಚ್ಚು ಮಾರಾಟವಾಗಿದೆ. ಕೆಲ ಕಡೆ ಬಾರಕೋಡ್‌ ಸಮಸ್ಯೆಯಿಂದ ವಿತರಣೆಯಲ್ಲಿ ವಿಳಂಬವಾಗಿ ಅಂಕಿ ಅಂಶಗಳು ದಾಖಲಾಗಿಲ್ಲ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ ಎಂದು ಕೃಷಿ ಇಲಾಖೆ ಅಧಿಕಾಯೊಬ್ಬರು ತಿಳಿಸಿದರು.

ತಟ್ಟಿದ ಬೆಲೆ ಏರಿಕೆ ಬಿಸಿ

ರಾಜ್ಯದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ರೈತರಿಗೂ ತಟ್ಟಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಖಾಸಗಿ ಅಂಗಡಿಗಳಲ್ಲಿ ವಿವಿಧ ಬೀಜಗಳಾದ ತೊಗರಿ, ಹತ್ತಿ, ಹೆಸರು, ಉದ್ದು, ಮೆಕ್ಕೆಜೋಳ ದರ ಏರಿಕೆಯಾಗಿದೆ. ರಸಗೊಬ್ಬರ ದರ ಹಾಗೂ ಕೀಟನಾಶಕಗಳ ಬೆಲೆಯೂ ಸಹ ಏರಿಕೆಯಾಗಿದ್ದು, ರೈತರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

2022–23 ನೇ ಅವಧಿಗೆ ಹೋಲಿಸಿದರೆ ಈ ಬಾರಿ ಬೀಜ ಹಾಗೂ ರಸಗೊಬ್ಬರ ದರಗಳಲ್ಲಿ ಏರಿಕೆಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ವರ್ತಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯೂರಿಯಾ ಸೇರಿ ಹೆಚ್ಚು ಬೇಡಿಕೆ ಇರುವ ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದರ ಬಗ್ಗೆ ಕೃಷಿ ಇಲಾಖೆ ಗಮನಹರಿಸಬೇಕು.
ಭೀಮರಾವ ಗೌರ, ಗೌರ (ಬಿ) ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಅಫಜಲಪುರ

ಉತ್ತಮ ಗುಣಮಟ್ಟದ ತೊಗರಿ ಬೀಜದ 5 ಕೆಜಿ ಪ್ಯಾಕೇಟ್‌ಗೆ ಕಳೆದ ಬಾರಿ ₹800 ದರ ಇತ್ತು, ಈಗ ₹850ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ₹950 ಇದ್ದ ಹೆಸರು ಬೀಜದ ದರ ₹1,150ಕ್ಕೆ ಏರಿಕೆಯಾಗಿದೆ. ಒಂದು ಸಾವಿರಕ್ಕೆ ಸಿಗುತ್ತಿದ್ದ ಉದ್ದಿನ ಬೀಜ ಈಗ ₹1,050 ಏರಿಕೆಯಾಗಿದೆ. ಮೆಕ್ಕೆಜೋಳ ₹350 ದರ ಸ್ಥಿರವಾಗಿದೆ ಎಂದರು.

5,531 ಮಾದರಿಯ ಮೆಣಸಿನ ಬೀಜಗಳನ್ನು ಕಳೆದ ವರ್ಷ ₹500 ಪ್ಯಾಕೆಟ್‌ನಂತೆ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ₹700ಕ್ಕೆ ದರ ಏರಿಕೆಯಾಗಿದೆ. ಖಾಸಗಿ ಕಂಪನಿಗಳ ಹತ್ತಿ ಬೀಜ ಕಳೆದ ವರ್ಷ ₹700 ರಿಂದ ₹800 ಕ್ಕೆ ಮಾರಾಟವಾಗಿತ್ತು. ಈ ಬಾರಿ ₹800 ರಿಂದ ₹900 ರವರೆಗೆ ಮಾರಾಟವಾಗುತ್ತಿದೆ. ತಳಿ ಹಾಗೂ ಬೀಜ ಗುಣಮಟ್ಟದ ಮೇಲೆ ಬೆಲೆ ಏರಿಳಿತವಾಗಿದೆ.

ನೀರಾವರಿ ಪ್ರದೇಶದಲ್ಲಿ ಕಬ್ಬು ವಿವಿಧ ಬೆಳೆಗಳಿಗೆ ಬಳಸುವ ಕಳೆನಾಶಕ ಕಳೆದ ವರ್ಷದಲ್ಲಿ ಎಕರೆ ಪ್ರದೇಶ ಸಿಂಪಡಣೆ ಮಾಡಲು ₹1,000 ದರ ಇತ್ತು. ಉತ್ಕೃಷ್ಟ ಕಳೆನಾಶಕ ಹೆಸರಿನಲ್ಲಿ ಈ ಬಾರಿ ದರ ₹1,700 ಹೆಚ್ಚಿಸಲಾಗಿದೆ.

ಅಫಜಲಪುರ: ಬಾರದ ಮಳೆ ಬಿತ್ತನೆಗೆ ಹಿನ್ನಡೆ

ಪ್ರಸ್ತುತ ವರ್ಷ ರೈತರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಬಿತ್ತನೆ ಬೀಜಗಳ ಮತ್ತು ರಸಗೊಬ್ಬರಗಳ ಬೆಲೆಗಳು ಗಗನಕ್ಕೇರಿವೆ. ಮಳೆ ಬರುವ ನಿರೀಕ್ಷೆಯಲ್ಲಿ ಬಿತ್ತನೆ ಬೀಜ ರಸಗೊಬ್ಬರ ಖರೀದಿ ಮಾಡಿದ್ದಾರೆ. ಮಳೆ ಬಾರದೆ ರೈತರು ನಿರಾಶರಾಗಿದ್ದಾರೆ.

ಮುಂಗಾರು ಹಂಗಾಮಿಗೆ ಬೇಕಾಗುವ ಬೀಜ ಹಾಗೂ ರಸಗೊಬ್ಬರ ತಾಲ್ಲೂಕಿನ ಸಂಪರ್ಕ ಕೇಂದ್ರಗಳಾದ ಅತನೂರು, ಕರಜಗಿ, ಅಫಜಲಪುರ ಕೇಂದ್ರಗಳಲ್ಲಿ ಸಂಗ್ರಹಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ಮೂರಿನಿಂದ ಚಿಂಚೋಳಿ ರೈತ ಸಂಪರ್ಕ ಕೇಂದ್ರ 40-45 ಕೀ.ಮೀ ದೂರವಿದೆ. ಕುಂಚಾವರಂಗೆ ರೈತ ಸಂಪರ್ಕ ಕೇಂದ್ರ ಮಂಜೂರು ಮಾಡಿ ಇಲ್ಲಿಯೇ ಬೀಜ ವಿತರಣೆ ವ್ಯವಸ್ಥೆ ಮಾಡಬೇಕು.
ತುಕಾರಾಮ‌ ಪವಾರ, ರೈತ ಮೋತಿಮೋಕ ತಾಂಡಾ

ಜಿಆರ್‌ಜಿ– 811 ಮತ್ತು 152 ತೊಗರಿ ತಳಿ ಬೀಜಗಳು ಲಭ್ಯವಿವೆ. ಖಾಸಗಿ ಅಗ್ರೋ ಕೇಂದ್ರಗಳಲ್ಲಿ ರೈತರಿಗೆ ಬೇಡಿಕೆ ತಕ್ಕಂತೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ರೈತರು ಕಡ್ಡಾಯವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿ ಮಾಡುವಾಗ ರಸೀದಿ ಕಡ್ಡಾಯವಾಗಿ ಪಡೆಯಬೇಕು ಎಂದರು.

ಚಿಂಚೋಳಿ: ಬಾಡುತ್ತಿರುವ ಬೆಳೆಗಳು

ಚಿಂಚೋಳಿ ತಾಲ್ಲೂಕಿನಲ್ಲಿ ಮೊದಲ ಸುರಿದ ಮಳೆಯಿಂದ ಅಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿತ್ತು, ಆದರೆ, ಈಗ ಮಳೆ ಕೊರತೆಯಿಂದ ಬಿತ್ತನೆ ಸ್ಥಗಿತಗೊಂಡಿದೆ.

ತಾಲ್ಲೂಕಿನ ದೇಗಲಮಡಿ, ಐನೊಳ್ಳಿ, ಕೊಳ್ಳೂರು ಮೊದಲಾದ ಕಡೆ ಮಾತ್ರ ಬಿತ್ತನೆ ಮುಂದುವರೆದಿದೆ. ಚಿಂಚೋಳಿ ತಾಲ್ಲೂಕಿನಲ್ಲಿ ಮಾತ್ರ ಒಂದಿಷ್ಟು ಮಳೆ ಸುರಿದಿದೆ. ಹೀಗಾಗಿ ರೈತರು ವರುಣನ ಮೇಲೆ ಭರವಸೆ ಇಟ್ಟು ಬಿತ್ತನೆ ಮುಂದುವರೆಸಿದ್ದರು. ಬಿತ್ತನೆ ಮಾಡಿ ಮೊಳಕೆ ಒಡೆದ ಸಸಿಗಳ ಬಾಡುತ್ತಿವೆ.

ಶಹಾಬಾದ್: ಬಾರದ ಮಳೆ ಅಲ್ಪಾವಧಿ ಬೆಳೆಗೆ ಹಿನ್ನಡೆ

ರೈತರು ಜಮೀನು ಹದಮಾಡಿಕೊಂಡು ಬೀಜ, ಗೊಬ್ಬರ ಖರೀದಿ ಮಾಡಿ ಬಿತ್ತನೆಗೆ ಮಳೆಗಾಗಿ ಮುಗಿಲು ನೋಡುತ್ತಾ ಕುಳಿತಿದ್ದಾರೆ. ಸಮಯಕ್ಕೆ ಮಳೆಯಾದರೆ ಉದ್ದು, ಹೆಸರು ಬೆಳೆಯುವ ಯೋಚನೆಯಲ್ಲಿದ್ದ ಅನ್ನದಾತರಿಗೆ ಮಳೆ ಬಾರದಿರುವುದು ಅಲ್ಪಾವಧಿ ಬೆಳೆಗೆ ಹಿನ್ನಡೆಯಾಗಿದೆ.

ನೆಟೆರೋಗದ ಆತಂಕದಲ್ಲಿರುವ ರೈತರು ಈ ಬಾರಿ ರೈತ ಸಂಪರ್ಕ ಕೇಂದ್ರದ ಮೊರೆ ಹೋಗದೇ ಖಾಸಗಿ ಬೀಜ ಮತ್ತು ಗೊಬ್ಬರದ ಅಂಗಡಿಗೆ ಹೋಗಿ ದುಬಾರಿ ದರದಲ್ಲಿ ಬೀಜ ಗೊಬ್ಬರವನ್ನು ಖರೀದಿಸುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಈ ಬಾರಿ ಟಿಎಸ್3ಆರ್ ಪರ್ಯಾಯವಾಗಿ ನೆಟೆರೋಗ ತಡೆಯಲು ಜಿಆರ್‌ಜಿ 811, ಜಿಆರ್‌ಜಿ 152 ಬೀಜಗಳನ್ನು ವಿತರಿಸುತ್ತಿದ್ದಾರೆ.

ಯಡ್ರಾಮಿ: ಬೀಜ, ರಸಗೊಬ್ಬರ ಸಮಸ್ಯೆ ಇಲ್ಲ

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕಳೆದ ಬಾರಿಗಿಂತ ಬೀಜ, ಗೊಬ್ಬರ ಹೆಚ್ಚು ದಾಸ್ತಾನು ಮಾಡಲಾಗಿದೆ ಎಂದು ರೈತ ಸಂಪರ್ಕ ಕೇಂದ್ರ ಅಧಿಕಾರಿ ತಿಳಿಸಿದರು.

ಕಳೆದ ಬಾರಿ ತೊಗರಿ ಬೆಳೆಗೆ ನೆಟೆರೋಗದಿಂದಾಗಿ ಈ ಬಾರಿ ರೈತರು ಬೇರೆ ಬೆಳೆಗತ್ತ ಒಲವು ತೋರಿಸುತ್ತಿದ್ದಾರೆ. ನೆಟರೋಗ ಬರದಂತೆ ಬೇರೆ ತಳಿಯ ಬೀಜ ಅಭಿವೃದ್ಧಿ ಪಡಿಸಲಾಗಿರುವ ಬೀಜ ವಿತರಣೆ ಮಾಡಲಾಗುತ್ತಿದೆ ಎಂದರು.

ಅಗತ್ಯ ಬೀಜ ರಸಗೊಬ್ಬರ ಪೂರೈಕೆ

ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಬಿತ್ತನೆ ಬೀಜದ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಇಲಾಖೆಯಿಂದ ಈ ವರ್ಷದ ಅವಧಿಯಲ್ಲಿ ಬೆಲೆ ಏರಿಕೆಯಾಗಿಲ್ಲ. ಬೀಜಗಳಲ್ಲಿ ತರಾವರಿ ಪ್ರಕಾರಗಳಿರುವುದರಿಂದ ಬೆಲೆ ಹೆಚ್ಚು ಕಡಿಮೆ ಇರುತ್ತದೆ. ಜಿಲ್ಲೆಯಲ್ಲಿ ಚಿಂಚೋಳಿ ಹೊರತು ಪಡಿಸಿ ವಿವಿಧ ತಾಲ್ಲೂಕು ಪ್ರದೇಶಗಳಲ್ಲಿ ಮಳೆ ಕೊರತೆಯಾಗಿದೆ ಇದರಿಂದ ಬಿತ್ತನೆಗೆ ಹಿನ್ನೆಡೆಯಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರ ನಿಗದಿ ಮಾಡಿದ ದರಪಟ್ಟಿ ಗೊಬ್ಬರ ಹೆಸರು; ಪ್ರಸಕ್ತ ವರ್ಷದ ದರ (₹ ಗಳಲ್ಲಿ)

ಡಿಎಪಿ ;1350

ಎಂಒಪಿ ;1700

ಎನ್‌ಪಿಕೆ 20:20:13 ;1475

ಎಸ್‌ಎಸ್‌ಪಿ ; 600

ಅಮೋನಿಯಂ ಸಲ್ಫೇಟ್‌:100 16:20:0:13; 1350 / 10:26:26; 1470 / 9:24:24; 1900 / 24:24:0; 1700 / 15:15:15: 1470 / 16:16:16; 1470 / 17:17:17; 1250

(ಆಧಾರ– ಕೃಷಿ ಇಲಾಖೆ)

ಮುಂಗಾರು ಬಿತ್ತನೆ ಬೀಜದ ದರ ಪಟ್ಟಿ (ಕೆಜಿ/ದರ ₹ ಗಳಲ್ಲಿ)

ತೊಗರಿ;130

ಹೆಸರು;125.25

ಉದ್ದು;114

ಸೋಯಾಬಿನ್‌;79

ಸೂರ್ಯಕಾಂತಿ;600

ಮೆಕ್ಕೆಜೋಳ;108.15

(ಆಧಾರ: ಕೃಷಿ ಇಲಾಖೆ)

ಪೂರಕ ಮಾಹಿತಿ: ಜಗನ್ನಾಥ ಶೇರಿಕಾರ, ಮಂಜುನಾಥ ದೊಡ್ಡಮನಿ, ಶಿವಾನಂದ ಹಸರಗುಂಡಗಿ, ರಘುವೀರಸಿಂಗ್ ಠಾಕೂರ್‌.

ಶಹಾಬಾದ್‌ ಸಮೀಪದ ಜಮೀನೊಂದರಲ್ಲಿ ರೈತ ಜಮೀನು ಹದಗೊಳಿಸುತ್ತಿರುವುದು
ಅಫಜಲಪುರ ಪಟ್ಟಣದ ರೈತ ಸಂಪರ್ಕ ಕೇಂದ್ರದ ಗೋದಾಮಿನಲ್ಲಿ ಬಿತ್ತನೆ ಬೀಜ ಗೊಬ್ಬರ ಸಂಗ್ರಹಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.