ಕಲಬುರಗಿ: ಚಿತ್ತಾಪುರದಲ್ಲಿ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಕಮಲಾಪುರದ ಕಿಣ್ಣಿ ಸಡಕ್ ಬಳಿ ಬುಧವಾರ ಮಧ್ಯರಾತ್ರಿ ಪೊಲೀಸರು ತಡೆಯೊಡ್ಡಿ ವಾಪಸ್ ಕಳುಹಿಸಿದರು.
ಬೀದರ್ ಜಿಲ್ಲೆಯ ಭಾಲ್ಕಿಯಿಂದ ಕಲಬುರಗಿ ಹೊರಟಿದ್ದರು. ಸೂಲಿಬೆಲೆ ಅವರ ಪ್ರಚೋದನಕಾರಿ ಭಾಷಣದಿಂದ ಶಾಂತಿಗೆ ಧಕ್ಕೆ ಬರುವ ಸಾಧ್ಯತೆಯ ಕಾರಣಕ್ಕೆ ಪ್ರವೇಶ ನಿರ್ಬಂಧಿಸಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಅವರು ಆದೇಶ ಹೊರಡಿಸಿದ್ದರು.
ಮಧ್ಯರಾತ್ರಿ 12 ಗಂಟೆಗೆ ಸುಮಾರಿಗೆ ಸೂಲಿಬೆಲೆ ಅವರನ್ನು ತಡೆದ ಕಮಲಾಪೂರ ಪೊಲೀಸರು, ಆದೇಶದ ಹಿನ್ನಲೆಯಲ್ಲಿ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡದೆ ಮರಳಿ ಬೀದರ್ ಕಡೆಗೆ ಕಳುಹಿಸಿದರು. ಈ ವೇಳೆ ಪೊಲೀಸರು ಮತ್ತು ಸೂಲಿಬೆಲೆ ನಡುವೆ ತೀವ್ರ ವಾಗ್ವಾದ ನಡೆಯಿತು.
ಸುಮಾರು 2 ಗಂಟೆಗಳ ಕಾಲ ಸೂಲಿಬೆಲೆ ಮತ್ತು ಪೊಲೀಸರ ನಡುವೆ ವಾದ-ವಿವಾದ ನಡೆಯಿತು. ಕೊನೆಗೆ ಅವರನ್ನು ಒಳಗೆ ಬಿಡದೆ ವಾಪಸ್ ಕಳುಹಿಸಿದರು. ರಾತ್ರಿ 2 ಗಂಟೆ ಆಗಿದ್ದರಿಂದ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಕೆ) ಗ್ರಾಮದಲ್ಲಿ ವಿಶ್ರಾಂತಿ ಪಡೆದರು.
ನಾಳೆ(ಫೆ.29) ಚಿತ್ತಾಪುರದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮ ಆಯೋಜಿಸಲಾಗಿತ್ತು. 11 ಗಂಟೆಗೆ ಅನುಮತಿಯನ್ನು ರದ್ದುಗೊಳಿಸಿದರು. ಕಲಬುರಗಿ ಜಿಲ್ಲೆಗೆ ಪ್ರವೇಶ ಮಾಡದಂತೆ ಕೋರಿದರು. ಸಚಿವ ಪ್ರಿಯಾಂಕ್ ಖರ್ಗೆ ಒಬ್ಬ ಫೈಟರ್. ಆದರೆ, ಅವರು ನಿಜವಾದ ಹಿಟ್ ಆ್ಯಂಡ್ ರನ್ ಮಾಸ್ಟರ್ ಎಂದು ನಾನು ಭಾವಿಸಿದ್ದೇನೆ. ಕೂಟದ ಮುಂದೆ ಮಾತನಾಡುವುದು ಸುಲಭ. ಆದರೆ, ಸಮೂಹವನ್ನು ಎದುರಿಸುವುದು ಕಷ್ಟ ಎಂದು ಸೂಲಿಬೆಲೆ 'ಎಕ್ಸ್' ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.