ADVERTISEMENT

ಕಲಬುರಗಿ: ದುಃಸ್ವಪ್ನದಂತೆ ಕಾಡುವ ಪ್ರವಾಹ ಭೀತಿ...

ಪ್ರತಿ ಮಳೆಗಾಲದಲ್ಲಿ ತುಂಬಿ ಹರಿಯುವ ಭೀಮಾ, ಮುಲ್ಲಾಮಾರಿ, ಕಾಗಿಣಾ ನದಿಗಳು; ಗ್ರಾಮಸ್ಥರಿಗೆ ಸಂಕಟ

ಮನೋಜ ಕುಮಾರ್ ಗುದ್ದಿ
Published 24 ಜೂನ್ 2024, 5:02 IST
Last Updated 24 ಜೂನ್ 2024, 5:02 IST
ಚಿಂಚೋಳಿ ತಾಲ್ಲೂಕು ಗಾರಂಪಳ್ಳಿ ಸೇತುವೆಯ ಮೇಲಿನಿಂದ ಶವ ಹೊತ್ತ ವಾಹನ ಸಾಗುತ್ತಿರುವುದು (ಸಂಗ್ರಹ ಚಿತ್ರ)
ಚಿಂಚೋಳಿ ತಾಲ್ಲೂಕು ಗಾರಂಪಳ್ಳಿ ಸೇತುವೆಯ ಮೇಲಿನಿಂದ ಶವ ಹೊತ್ತ ವಾಹನ ಸಾಗುತ್ತಿರುವುದು (ಸಂಗ್ರಹ ಚಿತ್ರ)   

ಕಲಬುರಗಿ: ರಾತ್ರೋ ರಾತ್ರಿ ರಸ್ತೆಯಲ್ಲೇ ಭೋರ್ಗರೆವ ನೆರೆ ನೀರು, ಸಾಮಾನು, ಸರಂಜಾಮುಗಳನ್ನು ಸಾಗಿಸಲಿಕ್ಕೂ ಬಿಡದ ಮಳೆಯ ಆರ್ಭಟ, ಗಂಜಿ ಅನ್ನ ಮಾಡಿಕೊಳ್ಳಲೂ ಸಾಧ್ಯವಾಗದಷ್ಟು ಆವರಿಸಿಕೊಳ್ಳುವ ನೀರು, ಮಳೆಗಾಲ ಮುಗಿದ ಬಳಿಕ ಪುನರ್ವಸತಿಯನ್ನು ಮರೆತೇ ಬಿಡುವ ಸರ್ಕಾರ.

ಹತ್ತಾರು ನದಿ, ಹಳ್ಳಗಳನ್ನು ಹೊಂದಿರುವ ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಪರಿಸ್ಥಿತಿ ಇದು.

ಉತ್ತರ ಭಾರತದಲ್ಲಿ ಗಂಗಾ, ಯಮುನಾ, ಕೋಶಿ ನದಿಗಳು ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿದು ಜನವಸತಿಗಳಿಗೆ ನುಗ್ಗುವ ಮೂಲಕ ಅಲ್ಲಿನ ರಾಜ್ಯಗಳ ಜನತೆಯ ಪಾಲಿಗೆ ಕಣ್ಣೀರಿನ ನದಿಗಳಾಗುತ್ತವೆ. ಅದೇ ರೀತಿ ಜಿಲ್ಲೆಯ ಭೀಮಾ, ಕಾಗಿಣಾ, ಮುಲ್ಲಾಮಾರಿ, ಕಮಲಾವತಿ, ಅಮರ್ಜಾ, ಬೋರಿಹಳ್ಳ ನದಿಗಳು ತಾವು ಹರಿವ ಗ್ರಾಮಗಳ ಜನರನ್ನು ಇನ್ನಿಲ್ಲದಂತೆ ಕಾಡಿಸುತ್ತವೆ. 

ADVERTISEMENT

2019, 2020 ಹಾಗೂ 2022ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾವಳಿಯಿಂದಾಗಿ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದರು. ಅಲ್ಲದೇ, ಪ್ರಮುಖ ಬೆಳೆಯಾದ ತೊಗರಿಯು ನೀರುಪಾಲಾಗಿದ್ದರಿಂದ ಇದನ್ನೇ ನಂಬಿಕೊಂಡಿದ್ದ ರೈತರು ಬಿತ್ತನೆಗೆ ಮಾಡಿದ ಖರ್ಚು ಕೂಡಾ ಹುಟ್ಟದೇ ನಷ್ಟಕ್ಕೀಡಾಗಿದ್ದರು. ನಂತರ ರಾಜ್ಯ ಸರ್ಕಾರ ನೆರೆ ಪರಿಹಾರ ನೀಡಿತ್ತು.

ಭೀಮಾ ನದಿ ಪಾತ್ರದ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲ್ಲೂಕುಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿತ್ತು. ನೂರಾರು ಮನೆಗಳು ಹಾನಿಗೀಡಾಗಿದ್ದವು. ದನ, ಕರುಗಳು ಕೊಚ್ಚಿಕೊಂಡು ಹೋಗಿದ್ದವು. 2020ರ ಮಧ್ಯಭಾಗದಲ್ಲಿ ಸುರಿದಿದ್ದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಜಿಲ್ಲೆಯಾದ್ಯಂತ 163 ಕಾಳಜಿ ಕೇಂದ್ರಗಳನ್ನು ತೆರೆದು, ಇದರಲ್ಲಿ 28,737 ಜನರಿಗೆ ಆಶ್ರಯ ಒದಗಿಸಲಾಗಿತ್ತು.

ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ನದಿಗಳು, ಹಳ್ಳ–ಕೊಳ್ಳಗಳು ಮೈತುಂಬಿಕೊಂಡು ಹರಿಯಲಾರಂಭಿಸಿವೆ. ಆಗಸ್ಟ್ ವೇಳೆಗೆ ಮಳೆ ಸುರಿಯಲಾರಂಭಿಸಿದರೆ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತವಾಗುವ ಸಾಧ್ಯತೆ ಇದೆ. ಚಿತ್ತಾಪುರ ತಾಲ್ಲೂಕಿನ ವಾಡಿ ಸಮೀಪದ ಭೀಮಾ ನದಿ ಬ್ಯಾರೇಜ್ ಪಕ್ಕದಲ್ಲಿರುವ ಬುದ್ಧ ಸ್ಮಾರಕದವರೆಗೆ ನೀರು ಹರಿದು ಬಂದಿತ್ತು.

ಜೇವರ್ಗಿ ತಾಲ್ಲೂಕಿನ ಕೋನಾ ಹಿಪ್ಪರಗಾ, ಮಂದರವಾಡ, ಕೂಡಿ, ಕೋಬಾಳ, ರಾಸಣಗಿ, ಹಂದನೂರ ಗ್ರಾಮಸ್ಥರಿಗೆ ಕೂಡಿ ದರ್ಗಾದ, ಪಂಚಾಯಿತಿ ಕಟ್ಟಡಗಳು, ದೇವಸ್ಥಾನಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈಗಲೂ ಪ್ರವಾಹ ಬಂದರೆ ಪರಿಸ್ಥಿತಿ ಗಂಭೀರವಾಗಿಯೇ ಇರಲಿದೆ ಎನ್ನುತ್ತಾರೆ ಈ ಗ್ರಾಮಗಳ ಜನರು.

ಚಿಂಚೋಳಿ ತಾಲ್ಲೂಕಿನ ಮುಲ್ಲಾಮಾರಿ ನದಿ ಉಕ್ಕಿ ಹರಿದರೆ ಹಲವು ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಹೆರಿಗೆಗೆ ಆಸ್ಪತ್ರೆಗೆ ಹೋಗಲು ಆಗದ, ಸತ್ತವರ ಶವ ಸಾಗಿಸಲು ಬಿಡದ ಪರಿಸ್ಥಿತಿಯನ್ನು ತಾಲ್ಲೂಕಿನ ಗಾರಂಪಳ್ಳಿ ಗ್ರಾಮಸ್ಥರು ಮಳೆಗಾಲದಲ್ಲಿ ಎದುರಿಸುತ್ತಾರೆ. ಕಳೆದ ವರ್ಷ ವ್ಯಕ್ತಿಯೊಬ್ಬರು ಕಲಬುರಗಿಯಲ್ಲಿ ಮೃತಪಟ್ಟಿದ್ದರು. ಅವರ ಶವ ಮಧ್ಯರಾತ್ರಿ 2 ಗಂಟೆಗೆ ಆಸ್ಪತ್ರೆಯಿಂದ ಊರಿಗೆ ಅಂಬುಲೆನ್ಸ್‌ನಲ್ಲಿ ತಂದರೆ, ಊರು ಪ್ರವೇಶಿಸಲು ಕೊಡದಂತೆ ಮುಲ್ಲಾಮಾರಿ ನದಿ ತುಂಬಿ ಸೇತುವೆ ಮೇಲಿನಿಂದ ಪ್ರವಾಹದ ನೀರು ಹರಿಯುತ್ತಿತ್ತು. ಬೆಳಿಗ್ಗೆ 6 ಗಂಟೆವರೆಗೆ ಸೇತುವೆಯ ಮತ್ತೊಂದು ತುದಿಯಲ್ಲಿ ಕಾಯುವುದೇ ಕೆಲಸವಾಗಿತ್ತು. ಬೆಳಿಗ್ಗೆ ಶವ ಮನೆಗೆ ತಲುಪಿಸಿ ಅಂಬುಲೆನ್ಸ್ ಮರಳಿತು. ಇದೇ ಸ್ಥಿತಿ ಊರಿನಿಂದ ಹೊರ ಹೋಗುವವರಿಗೆ ಮತ್ತು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವವರಿಗೆ ಎದುರಾಗುತ್ತಿದೆ ಎನ್ನುತ್ತಾರೆ ಗ್ರಾಮದ ಮುಖಂಡ ವೀರಭದ್ರಪ್ಪ ಮಲಕೂಡ.

ನೆರೆ ಹಾವಳಿಗೆ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಚಿಂಚೋಳಿ, ದೇಗಲಮಡಿ, ಪೋಲಕಪಳ್ಳಿ, ಜಟ್ಟೂರು, ಚಂದಾಪುರ ಬಾಧಿತಕ್ಕೊಳಗಾಗುತ್ತಿದ್ದು ವೈಜ್ಞಾನಿಕವಾಗಿ ಪ್ರವಾಹ ನಿರ್ವಹಣೆ ಮಾಡಿದರೆ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಆದರೆ ಜಲಾಶಯ ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೆ ಮತ್ತು ನಿರಂತರ ಮಳೆ ಸುರಿಯುತ್ತಿದ್ದರೆ ಅಧಿಕಾರಿಗಳು ಕೈ ಚೆಲ್ಲಿ ಜಲಾಶಯದ ಗೇಟು ತೆರೆದು ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗುತ್ತಿದೆ. ಇದಕ್ಕೆ ಸೇತುವೆಗಳ ಎತ್ತರ ಹೆಚ್ಚಳವೊಂದೇ ಉಳಿದ ಮಾರ್ಗ ಎನ್ನುತ್ತಾರೆ ಸಮಸ್ಯೆ ಪೀಡಿತ ಜನ.

ನಾಗರಾಳ ಜಲಾಶಯವು ಚಂದ್ರಂಪಳ್ಳಿ ಜಲಾಶಯಕ್ಕಿಂತ ದೊಡ್ಡದಾಗಿದ್ದು ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿದೆ. ಇದರ ನೀರು ನದಿಗೆ ಬಿಟ್ಟಾಗ ನದಿ ಪಾತ್ರದ ಹಳ್ಳಿಗಳು ಸಂಪರ್ಕ ಕಡಿತದಿಂದ ಜನರನ್ನು ಸಮಸ್ಯೆಗೆ ತಳ್ಳುತ್ತಿವೆ. ಚಿಮ್ಮನಚೋಡ, ಸಲಗರ ಬಸಂತಪುರ, ತಾಜಲಾಪುರ ಮತ್ತು ಗಾರಂಪಳ್ಳಿ ಹಾಗೂ ಭಕ್ತಂಪಳ್ಳಿ ಗರಕಪಳ್ಳಿ ಸೇತುವೆ ಎತ್ತರ ಹೆಚ್ಚಿಸಬೇಕು. ಚಿಂಚೋಳಿಯಲ್ಲಿ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಯಿಂದ ಸಂಗೊಳ್ಳಿ ರಾಯಣ್ಣ ಕ್ರಾಸ್‌ವರೆಗೆ ಮುಲ್ಲಾಮಾರಿ ನದಿಗೆ ತಡೆ ಗೋಡೆ ನಿರ್ಮಿಸಬೇಕಿದೆ. ಇಲ್ಲದೇ ಹೋದರೆ ಬಡಿ ದರ್ಗಾ, ಹರಿಜನ ಓಣಿ, ಭೋವಿಗಲ್ಲಿಯಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗುವುದು ನಿಶ್ಚಿತವಾಗಿದೆ.

ಸೇಡಂ ತಾಲ್ಲೂಕಿನಲ್ಲಿ ಕಾಗಿಣಾ ನದಿ ನೀರಿನ ಪ್ರವಾಹ ಹೆಚ್ಚಿದ್ದರ ಪರಿಣಾಮ ಈ ಹಿಂದೆ 2019 ಮತ್ತು 2020ರಲ್ಲಿ ನದಿ ಪಾತ್ರದ ಗ್ರಾಮಗಳ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ತಾಲ್ಲೂಕಿನ ಮಳಖೇಡ ಗ್ರಾಮದ ಆಶ್ರಯ ಕಾಲೋನಿ, ಸಂಗಾವಿ (ಎಂ) ಗ್ರಾಮಗಳ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ನದಿಪಾತ್ರದ ಹೊಲಗಳಿಗೂ ನೀರು ನುಗ್ಗಿ ಬೆಳೆ ನಷ್ಟವಾಗಿತ್ತು. ಮಳಖೇಡದ ಆಶ್ರಯ ಕಾಲೊನಿಗೆ ಹಳ್ಳದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ 2019ರಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿತ್ತು. ವಿಶೇಷವಾಗಿ ಕಾಗಿಣಾ ನದಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಮಳಖೇಡ ಉತ್ತರಾದಿಮಠಕ್ಕೆ ಪ್ರತಿ ವರ್ಷ ಕಾಗಿಣಾ ನದಿ ನೀರಿನ ಪ್ರವಾಹ ಹೆಚ್ಚಿದಾಗ ನೀರು ನುಗ್ಗುತ್ತದೆ. ಮಠದಲ್ಲಿರುವ ಪ್ರಾಣಿಗಳ ರಕ್ಷಣೆ ಸವಾಲಾಗುತ್ತದೆ. ಎರಡು ವರ್ಷಗಳ ಹಿಂದೆ ಮಠದ ರಕ್ಷಣೆಗೆ ತಡೆಗೋಡೆ ನಿರ್ಮಿಸಿದ್ದು, ಅವಾಂತರ ತಪ್ಪಿದೆ ಎನ್ನುತ್ತಾರೆ ಮಠದ ವೆಂಕಣ್ಣಾಚಾರ್ಯ. 

2022ರಲ್ಲಿ ಮಹಾರಾಷ್ಟ್ರದಿಂದ ಉಜನಿ ಜಲಾಶಯದಿಂದ 8 ಲಕ್ಷ ಕ್ಯುಸೆಕ್ ಹೆಚ್ಚುವರಿ ನೀರು ಹರಿದುಬಂದ ಕಾರಣ ಜೇವರ್ಗಿ ತಾಲ್ಲೂಕಿನ ಭೀಮಾನದಿ ಪಾತ್ರದ 25 ಗ್ರಾಮಗಳಿಗೆ ನೀರು ನುಗ್ಗಿದ್ದರಿಂದ 23 ಗ್ರಾಮಗಳನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದರು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಿಂದ ಕೂಡಿ ದರ್ಗಾ ಹತ್ತಿರ ಸಂತ್ರಸ್ತರಿಗಾಗಿ ಮನೆಗಳನ್ನು ನಿರ್ಮಾಣ ಮಾಡಲು ಜಮೀನು ನಿಗದಿಪಡಿಸಿದ ನಂತರ ಪೇಜಾವರ ಪೇಜಾವರ ಶ್ರೀಗಳು ಸೇರಿ ಭೀಮಾ ನದಿ ಪಾತ್ರದ ಕೂಡಿ, ಕೋಬಾಳ, ಕೋನಾಹಿಪ್ಪರಗಾ, ಮಂದರವಾಡ ಸೇರಿ ಕೂಡಿ ದರ್ಗಾ ಹತ್ತಿರ ಸರ್ಕಾರಿ ಸ್ಥಳ ನಿಗದಿಪಡಿಸಿದ ನಂತರ ಪೇಜಾವರ ಶ್ರೀಗಳು 108 ಮನೆಗಳನ್ನು ನಿರ್ಮಾಣ ಮಾಡಿದ್ದಾರೆ.

ಭೀಮಾ ನದಿ ಸೇರುವ ಹಿರೇಹಳ್ಳಕ್ಕೆ ಹೊಂದಿಕೊಂಡಿರುವ ವಾಡಿ ಸಮೀಪದ ಬಳವಡಗಿ ಗ್ರಾಮ ಹಾಗೂ ಭೀಮಾನದಿಗೆ ಹೊಂದಿಕೊಂಡಿರುವ ಕಡಬೂರ ಗ್ರಾಮದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಪ್ರತಿವರ್ಷ ಹಿರೇಹಳ್ಳಕ್ಕೆ ಅಪಾರ ಪ್ರಮಾಣದ ಮಳೆ ನೀರು ಹರಿದು ಬಂದು ಇಡೀ ಗ್ರಾಮವನ್ನೇ ಮುಳುಗಿಸುವುದು ಸಾಮಾನ್ಯವಾಗಿದೆ. ಸೇಡಂ, ಚಿಂಚೋಳಿ ಹಾಗೂ ತೆಲಂಗಾಣ ರಾಜ್ಯದಲ್ಲಿ ಮಳೆ ಸುರಿದರೆ ಹಳ್ಳದ ಮೂಲಕ ಹರಿಯುವ ನೀರು ಬಳವಡಗಿ, ಕಡಬೂರು ಮೂಲಕ ಭೀಮಾನದಿ ಒಡಲು ಸೇರುತ್ತದೆ. ಮೋಡ ಮುಸುಕಿದ ವಾತಾವರಣ ಕಂಡು ಬಂದರೆ ಗ್ರಾಮಸ್ಥರ ಎದೆ ನಡುಗುತ್ತದೆ. ಕಪ್ಪನೆಯ ಮೋಡಗಳು ಸೃಷ್ಟಿಯಾದರೆ ಜನರಲ್ಲಿ ಆತಂಕ ಮನೆ ಮಾಡುತ್ತದೆ. ಹಳ್ಳ ಉಕ್ಕಿ ಹರಿದು ಬದುಕು ಬೀದಿಗೆ ಬರುತ್ತದೆ ಎನ್ನುವ ಆತಂಕವೇ ಇದಕ್ಕೆ ಪ್ರಮುಖ ಕಾರಣ.

ಬಳವಡಗಿ ಗ್ರಾಮಕ್ಕೆ ಹೊಂದಿಕೊಂಡು ಹಳ್ಳ ಹರಿಯುತ್ತಿದ್ದು ನೀರು ಸರಾಗ ಹರಿಯುವಿಕೆಗೆ ಹಳ್ಳದಲ್ಲಿನ ಹೂಳು ಹಾಗೂ ಕಲ್ಲುಗಣಿಗಳ ತ್ಯಾಜ್ಯ ಅಡ್ಡಿಯಾಗಿದ್ದು ಬೇರೆ ದಾರಿ ಕಾಣದೇ ಹಳ್ಳದ ನೀರು ಗ್ರಾಮದೊಳಕ್ಕೆ ನುಗ್ಗುತ್ತದೆ. ಗ್ರಾಮದ ರೇಣುಕಾ ಎಲ್ಲಮ್ಮ ದೇವಸ್ಥಾನ, ರೇಣುಕಾ ಎಲ್ಲಮ್ಮ ಬಡಾವಣೆ, ದಲಿತರ ಬಡಾವಣೆ ಹಾಗೂ ಗ್ರಾಮದ ಅಗಸಿ ಬಾಗಿಲಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತದೆ.

ಹಳ್ಳದ ತುಂಬಾ ಹರಡಿ ನಿಂತಿರುವ ಜಾಲಿಮರಗಳು ಹಾಗೂ ಕಲ್ಲುಗಣಿಯ ತ್ಯಾಜ್ಯ ವಿಲೇವಾರಿ ಮಾಡಿದರೆ ನೀರು ಸರಾಗವಾಗಿ ಹರಿದು ಭೀಮಾನದಿ ಸೇರುತ್ತದೆ. ಕಳೆದ ಹಲವು ವರ್ಷಗಳಿಂದ ನಮ್ಮ ಗೋಳು ಆಡಳಿತ ಕೇಳಿಸಿಕೊಳ್ಳುತ್ತಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರು 3 ವರ್ಷದ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಹಳ್ಳದಲ್ಲಿನ ಹೂಳು ವಿಲೇವಾರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಬೂರ ಗ್ರಾಮಕ್ಕೆ ಹೊಂದಿಕೊಂಡು ಹರಿಯುವ ನದಿ ಗ್ರಾಮದ ಹಲವು ಮನೆಗಳಿಗೆ ನುಗ್ಗಿ ನಾನಾ ಅವಘಡ ಸೃಷ್ಟಿಸುತ್ತದೆ. 2009ರಲ್ಲಿ ಕೇವಲ 60 ಮನೆಗಳ ಸ್ಥಳಾಂತರವಾಗಿದ್ದು, ಉಳಿದವುಗಳ ಸ್ಥಳಾಂತರ ಆಗಿಲ್ಲ. ಇಡೀ ಗ್ರಾಮವನ್ನೇ ಸಂಪೂರ್ಣ ಸ್ಥಳಾಂತರ ಮಾಡಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಭೀಮಾ ನದಿಗೆ ಪ್ರಭಾವ ಬಂದಾಗ ಅದರ ಉಪನದಿಗಳು ತುಂಬಿ ಹರಿಯುತ್ತವೆ. ಅದರ ದಡದಲ್ಲಿರುವ ಗ್ರಾಮಗಳಿಗೂ ತೊಂದರೆಯಾಗುತ್ತದೆ 2020ರಲ್ಲಿ ಜೇವರ್ಗಿ (ಬಿ) ಗ್ರಾಮದ ಹತ್ತಿರ ಹರಿಯುವ ಬೋರಿಹಳ್ಳಕ್ಕೆ ನೀರು ಬಂದು ಹಳ್ಳದ ದಡದಲ್ಲಿರುವ ಮನೆಗಳಿಗೆ ನೀರು ಹೊಕ್ಕಿದ್ದರಿಂದ ತೊಂದರೆ ಆಯಿತು ನಮ್ಮನ್ನು ತಾಲ್ಲೂಕು ಆಡಳಿತ ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ಆದರೆ ನಂತರ ಮನೆಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಬಗ್ಗೆ ಚಿಂತನೆ ಮಾಡಲೇ ಇಲ್ಲ. ಕೇವಲ ಪ್ರವಾಹ ಬಂದಾಗ ಮಾತ್ರ ಅಧಿಕಾರಿಗಳು ಬರುತ್ತಾರೆ. ಮತ್ತೆ ಮರೆತು ಬಿಡುತ್ತಾರೆ. 

-ಹನುಮಂತರಾಯ ಬಿರಾದಾರ, ಜೇವರ್ಗಿ (ಬಿ)

ಭೀಮಾ ನದಿಗೆ ಪ್ರವಾಹ ಉಂಟಾದಾಗ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರವು ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದೆ.

-ಹಣಮಂತರಾಯಗೌಡ ಪಾಟೀಲ, ಕೋಬಾಳ 

ಮಳೆಗಾಲ ಬಂದರೆ ಸಾಕು ನಮ್ಮ ಎದೆಯಲ್ಲಿ ನಡುಕ ಶುರುವಾಗುತ್ತದೆ. ಊರಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ನಡೆಸಲು ಪ್ರವಾಹ ಬಿಡುವುದಿಲ್ಲ. ಜತೆಗೆ ಹಳೆ ಊರು ಹೊಸ ಊರಿನ ಮಧ್ಯೆ ಸಂಪರ್ಕ ಕಡಿತವಾಗುತ್ತದೆ. ಎತ್ತರದ ಸೇತುವೆ ನಿರ್ಮಾಣ ಅವಶ್ಯಕವಾಗಿದೆ

-ಹಣಮಂತ ಭೋವಿ ಸಾಮಾಜಿಕ ಕಾರ್ಯಕರ್ತ, ಗಾರಂಪಳ್ಳಿ

ಸೇತುವೆಗಳ ಎತ್ತರ ಹೆಚ್ಚಿಸಲು ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಹಲವು ದಶಕಗಳ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೆಕೆಆರ್‌ಡಿಬಿ ಅಥವಾ ಜಲಸಂಪನ್ಮೂಲ ಇಲಾಖೆ ಸೇತುವೆಗಳ ಎತ್ತರ ಹೆಚ್ಚಿಸಲು ಮುಂದಾಗಬೇಕು.
-ಗೋಪಾಲ ಎಂ. ಪೂಜಾರಿ ಮೂಲನಿವಾಸಿ ಸಂಘಟನೆ ಮುಖಂಡ

ನೆರೆಹಾವಳಿ ಪೀಡಿತ ಗ್ರಾಮಗಳಲ್ಲಿ ಎದುರಾಗುವ ಸಮಸ್ಯೆ ಮತ್ತು ಪರಿಸ್ಥಿತಿ ಉಲ್ಬಣಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಶೀಘ್ರವೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
-ವೆಂಕಟೇಶ ದುಗ್ಗನ್ ತಹಶೀಲ್ದಾರ್, ಚಿಂಚೋಳಿ

ಪ್ರವಾಹ ಸಂದರ್ಭದಲ್ಲಿ ಕಟ್ಟಿಸಂಗಾವಿ, ಮದರಿ, ಯನಗುಂಟಾ, ಮಲ್ಲಾ (ಕೆ), ಮಲ್ಲಾ (ಬಿ) ಗ್ರಾಮಗಳಲ್ಲಿ ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ಮಾಡಲಾಗಿತ್ತು. ತಾಲ್ಲೂಕಿನ ಭೀಮಾ ನದಿ ಪಾತ್ರದ ಕೂಟನೂರ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಪ್ರವಾಹ ಕಡಿಮೆಯಾದ ನಂತರ ಕೂಟನೂರ ಗ್ರಾಮವನ್ನು ಎತ್ತರವಾದ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

-ಮಲ್ಲಣ್ಣ ಯಲಗೋಡ, ಜೇವರ್ಗಿ ತಹಶೀಲ್ದಾರ್

ಚಿಂಚೋಳಿ ತಾಲ್ಲೂಕು ತಾಜಲಾಪುರ ಸೇತುವೆ ಮುಳುಗಡೆಯಾಗಿದ್ದು ಗ್ರಾಮ ಹಾಗೂ ಭಾಲ್ಕಿ ಚಿಂಚೋಳಿ ರಾಜ್ಯ ಹೆದ್ದಾರಿ 75ರ ಸಂಪರ್ಕ ಕಡಿತವಾಗಿತ್ತು (ಸಂಗ್ರಹ ಚಿತ್ರ)

ತಡೆಗೋಡೆ ನಿರ್ಮಾಣ ಕಾಮಗಾರಿಗೆ ತಡೆ

ಚಿಂಚೋಳಿ ತಾಲ್ಲೂಕಿನಲ್ಲಿ ಪ್ರವಾಹದ ನೀರು ಜನರ ಮನೆಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಾಣಕ್ಕೆ ಮಂಜೂರಾದ ಅನುದಾನಕ್ಕೂ ಸರ್ಕಾರ ತಡೆವೊಡ್ಡಿದ್ದು ಪ್ರವಾಹ ನಿಯಂತ್ರಣ ಚಿಂಚೋಳಿ ಪಟ್ಟಣದ ಜನತೆಗೆ ಗಗನಕುಸುಮ ಎನ್ನುವಂತಾಗಿದೆ. ವರ್ಷದ ಹಿಂದೆಯೇ ಡಿಎಂಎಫ್ ಯೋಜನೆ ಅಡಿಯಲ್ಲಿ ಹಣ ಮಂಜೂರಾಗಿದ್ದು ಕಾಮಗಾರಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿನೃದ್ಧಿ ನಿಗಮಕ್ಕೆ ವಹಿಸಲಾಗಿದೆ. ಆದರೆ ಹಣ ಬಿಡುಗಡೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ.

ಭೀಮಾ ದಡದ 30 ಗ್ರಾಮಗಳು ಬಾಧಿತ

ಭೀಮಾ ನದಿಗೆ ಪ್ರವಾಹ ಬಂದಾಗ ಅಫಜಲಪುರ ತಾಲ್ಲೂಕಿನ ಭೀಮಾ ದಡದ ಸುಮಾರು 20 ಗ್ರಾಮಗಳಿಗೆ ನೀರು ನುಗ್ಗುತ್ತದೆ ಮತ್ತು ಭೀಮಾ ನದಿಯ ಹಿನ್ನೀರಿನಿಂದಲೂ 10 ಗ್ರಾಮಗಳಿಗೆ ನೀರು ನುಗ್ಗುತ್ತದೆ. ಸುಮಾರು 80 ಕಿಲೋಮೀಟರ್ ಹರಿಯುವ ಭೀಮಾ ನದಿ ದಡದಲ್ಲಿ ಸುಮಾರು 20 ಗ್ರಾಮಗಳಿವೆ. ಭೀಮಾನದಿಯ ಹಿನ್ನೀರಿನಿಂದ ತೊಂದರೆಯಾಗುವ ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದೆ. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ಕೆಲವರಿಗೆ ಹಕ್ಕುಪತ್ರ ನೀಡಿಲ್ಲ. ಮನೆ ಪರಿಹಾರ ಬಂದಿಲ್ಲ. ಇನ್ನು ಕೆಲವು ಪುನರ್ವಸತಿ ಕೇಂದ್ರಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಸಂತ್ರಸ್ತರು ಸೌಲಭ್ಯಗಳಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ತಾಲೂಕಿನ ಬಳ್ಳುಂಡಗಿ ಅಳ್ಳಗಿ ಬಂಕಲಗಾ ಮಂಗಳೂರು ಹಿರಿಯಾಳ ಹಿಂಚಿಗೇರ ಗುಡ್ಡೆವಾಡಿ ಘತ್ತರಗಾ ಗೋಳನೂರು ಆನೂರು ಕೆರಕನಹಳ್ಳಿ ದೇಸಾಯಿ ಕಲ್ಲೂರು ಉಡಚಣ ಕುಡಿಗಾನೂರು ಜೇವರ್ಗಿ (ಬಿ) ಬೋಸಾಗ ದುದ್ದಣಗಿ ಮಣ್ಣೂರು ಹಿರಿಯಾಳ ಶೇಷಗಿರಿ ಶಿವೂರು ಸಿಂದಗಿ ತಾಲ್ಲೂಕಿನ ತಾರಾಪುರ ತಾವರಖೇಡ ಬ್ಯಾಡಗಿ ಹಾಳ ಮಡ್ನಳ್ಳಿ ನಾಲ್ಕು ಗ್ರಾಮಗಳು ಭೀಮ ಬ್ಯಾರೇಜ್ ಹಿನ್ನೀರಿನಿಂದ ತೊಂದರೆಗೆ ಒಳಗಾಗುತ್ತದೆ.

ಪೂರಕ ಮಾಹಿತಿ: ಜಗನ್ನಾಥ ಡಿ. ಶೇರಿಕಾರ, ಶಿವಾನಂದ ಹಸರಗುಂಡಗಿ, ವೆಂಕಟೇಶ ಹರವಾಳ, ಅವಿನಾಶ ಬೋರಂಚಿ, ಸಿದ್ದರಾಜ ಮಲ್ಕಂಡಿ, ನಿಂಗಣ್ಣ ಜಂಬಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.