ADVERTISEMENT

ಕಲಬುರಗಿ: ಹಿಂಬಾಕಿ ಭಾರಕ್ಕೆ ನಲುಗುತ್ತಿವೆ ಪಂಚಾಯಿತಿಗಳು

ಪಂಚಾಯಿಗಳಿಗೆ ಬರಬೇಕಿರುವ ಬಾಕಿ ತೆರಿಗೆಯೇ ₹106 ಕೋಟಿ; ₹26.80 ಕೋಟಿ ತೆರಿಗೆ ಸಂಗ್ರಹ ಈ ಸಲದ ಗುರಿ

ಬಸೀರ ಅಹ್ಮದ್ ನಗಾರಿ
Published 19 ಮೇ 2024, 5:17 IST
Last Updated 19 ಮೇ 2024, 5:17 IST
ಭಂವರ್‌ ಸಿಂಗ್ ಮೀನಾ
ಭಂವರ್‌ ಸಿಂಗ್ ಮೀನಾ   

ಕಲಬುರಗಿ: ವಿಶೇಷ ಅಭಿಯಾನ, ಗ್ರಾಮೀಣಾಭಿವೃದ್ಧಿ ಸಚಿವರ ಕ್ರಮದ ಎಚ್ಚರಿಕೆ ಹೊರತಾಗಿಯೂ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಹ ಪ್ರಮಾಣ ಶೇ 50ರಷ್ಟೂ ಆಗಿಲ್ಲ. 2024ರ ಮಾರ್ಚ್‌ 31ರ ತನಕ ₹11.03 ಕೋಟಿ ಸಂಗ್ರಹವಾಗಿದ್ದು, ಕೇವಲ ಶೇ 37.02ರಷ್ಟು ಗುರಿ ಸಾಧನೆಯಾಗಿದೆ. ₹18.76 ಕೋಟಿ ಬಾಕಿ ಉಳಿದಿದೆ.

ಜಿಲ್ಲೆಯಲ್ಲಿ 261 ಗ್ರಾಮ ಪಂಚಾಯಿತಿಗಳಿದ್ದು, 2024–25ನೇ ಆರ್ಥಿಕ ವರ್ಷಕ್ಕೆ ₹26.80 ಕೋಟಿ ತೆರಿಗೆ ಸಂಗ್ರಹ ಗುರಿ ಹಾಕಿಕೊಳ್ಳಲಾಗಿದೆ. ಈ ಆರ್ಥಿಕ ವರ್ಷದ ಗುರಿಯೂ ಸೇರಿದಂತೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಒಟ್ಟಾರೆ ತೆರಿಗೆ ಸಂಗ್ರಹ ಗುರಿಯು ₹132.89 ಕೋಟಿಗೆ ಹೆಚ್ಚಿದೆ. ತೆರಿಗೆ ಹಿಂಬಾಕಿ ಭಾರಕ್ಕೆ ಗ್ರಾಮ ಪಂಚಾಯಿತಿಗಳು ಸುಸ್ಥಿರ ಅಭಿವೃದ್ಧಿ ಇಲ್ಲದೇ ನಲುಗುತ್ತಿವೆ.

2023–24ನೇ ಸಾಲಿಗೆ ಜಿಲ್ಲೆಯಲ್ಲಿ ₹29.67 ಕೋಟಿ ತೆರಿಗೆ ಸಂಗ್ರಹಿಸಬೇಕಿತ್ತು. ಕರ ಸಂಗ್ರಹಕ್ಕೆ ವಿಶೇಷ ಅಭಿಯಾನ ರೂಪಿಸಿದ್ದ ಜಿಲ್ಲಾ ಪಂಚಾಯಿತಿ, ಆಯಾ ಗ್ರಾಮ ಪಂಚಾಯಿತಿಗಳ ಪ್ರಸ್ತುತ ಬೇಡಿಕೆಯಲ್ಲಿ ಶೇ 50ರಷ್ಟು ತೆರಿಗೆ ಸಂಗ್ರಹಿಸುವಂತೆ ಗುರಿ ನಿಗದಿಪಡಿಸಿತ್ತು. ಅಲ್ಲದೇ, ‘ಪ್ರತಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಂತ ಕಡಿಮೆ ತೆರಿಗೆ ವಸೂಲಿ ಮಾಡಿರುವ ತಲಾ 10 ಪಿಡಿಒಗಳಿಗೆ ನೋಟಿಸ್‌ ಜಾರಿಗೊಳಿಸಿ, ಕ್ರಮ ಜರುಗಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಫೆಬ್ರುವರಿಯಲ್ಲೇ ಸೂಚಿಸಿದ್ದರು. ಈ ಕ್ರಮಗಳು ನಿರೀಕ್ಷಿತ ಫಲ ನೀಡಿಲ್ಲ.

ADVERTISEMENT

2023–24ರ ಸಾಲಿನಲ್ಲಿ ಜಿಲ್ಲೆಯ 11 ತಾಲ್ಲೂಕುಗಳ ಪೈಕಿ ತೆರಿಗೆ ವಸೂಲಿಯಲ್ಲಿ ಯಡ್ರಾಮಿ ತಾಲ್ಲೂಕು ಮುಂದಿದ್ದು, ಶೇ 50.52ರಷ್ಟು ಗುರಿ ಸಾಧಿಸಿದೆ. ಸೇಡಂ ತಾಲ್ಲೂಕು ಶೇ50.15ರಷ್ಟು ತೆರಿಗೆ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದೆ. ಅಫಜಲಪುರ ತಾಲ್ಲೂಕು ಶೇ26.58ರಷ್ಟು ಗುರಿ ಸಾಧನೆಯೊಂದಿಗೆ ಜಿಲ್ಲೆಯಲ್ಲೇ ಕೊನೆಯ ಸ್ಥಾನದಲ್ಲಿದೆ.

₹59 ಲಕ್ಷ ಸಂಗ್ರಹ: 2024–25ನೇ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಒಂದೂವರೆ ತಿಂಗಳಲ್ಲಿ ₹59.21 ಲಕ್ಷ ತೆರಿಗೆ ಸಂಗ್ರಹವಾಗಿದೆ. ಈ ಪೈಕಿ ಕಲಬುರಗಿ ತಾಲ್ಲೂಕುವೊಂದರಲ್ಲೇ ₹28.08 ಲಕ್ಷ  ಸಂಗ್ರಹವಾಗಿರುವುದು ವಿಶೇಷ.

‘ತೆರಿಗೆ ಸಂಗ್ರಹ ಶೀಘ್ರವೇ ಚುರುಕು’

‘ಕಳೆದ ವರ್ಷ ತೆರಿಗೆ ಸಂಗ್ರಹ ಗುರಿಯನ್ನು ಶೇ 120ರಷ್ಟು ಹೆಚ್ಚಿಸಲಾಗಿತ್ತು. ಹೀಗಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2023–24ರಲ್ಲಿ ತೆರಿಗೆ ಸಂಗ್ರಹ ಸ್ಥಿತಿ ಉತ್ತಮವಾಗಿದೆ. ಕಳೆದೆರಡು ತಿಂಗಳಲ್ಲಿ ಚುನಾವಣೆಯ ಸೇರಿದಂತೆ ಹಲವು ಕಾರಣಗಳು ಗ್ರಾಮ ಪಂಚಾಯಿತಿಯ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರಿವೆ. ತೆರಿಗೆ ಸಂಗ್ರಹ ಚುರುಕುಗೊಳಿಸಲು ಶೀಘ್ರವೇ ಕ್ರಮವಹಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ ಸಿಂಗ್ ಮೀನಾ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.