ADVERTISEMENT

ಕಲಬುರಗಿ: ಕಾಲೇಜಿನಲ್ಲಿ ಹಳ್ಳಿ ಸೊಗಡು ಅನಾವರಣ

ಗ್ರಾಮೀಣ ಹಳ್ಳಿ ಸೊಗಡು ಅನಾವರಣಕ್ಕೆ ವೇದಿಕೆಯಾದ ಸೇಂಟ್‌ ಜೋಸೆಫ್‌ ಕಾಲೇಜು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 4:59 IST
Last Updated 10 ನವೆಂಬರ್ 2024, 4:59 IST
ಕಲಬುರಗಿಯ ಸೇಂಟ್‌ ಜೋಸೆಫ್‌ ಪಿ.ಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದೇಸಿ ಹಬ್ಬ’ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರೊಂದಿಗೆ ವಿವಿಧ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿನಿಯರು ಹಾಗೂ ಪ್ರಾಚಾರ್ಯ ಚಿ.ಸಿ.ನಿಂಗಣ್ಣ ಇದ್ದಾರೆ  ಪ್ರಜಾವಾಣಿ ಚಿತ್ರ
ಕಲಬುರಗಿಯ ಸೇಂಟ್‌ ಜೋಸೆಫ್‌ ಪಿ.ಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದೇಸಿ ಹಬ್ಬ’ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರೊಂದಿಗೆ ವಿವಿಧ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿನಿಯರು ಹಾಗೂ ಪ್ರಾಚಾರ್ಯ ಚಿ.ಸಿ.ನಿಂಗಣ್ಣ ಇದ್ದಾರೆ  ಪ್ರಜಾವಾಣಿ ಚಿತ್ರ   

ಕಲಬುರಗಿ: ಆ ಕಾಲೇಜು ಆವರಣ ಎಂದಿನಂತೆ ಇರಲಿಲ್ಲ. ಯುವ ಮನಸ್ಸುಗಳಲ್ಲಿ ಸಂಭ್ರಮ ಪುಟಿಯುತ್ತಿತ್ತು. ಹಳ್ಳಿ ಸೊಗಡಿನ ದಿರಿಸು ಧರಿಸಿದ್ದ ವಿದ್ಯಾರ್ಥಿನಿಗಳ ಹರಟೆ ಜೋರಾಗಿತ್ತು. ಕೆಲವರು ಲಗುಬಗೆಯಲ್ಲಿ ಓಡಾಡುತ್ತಿದ್ದರು. ಮತ್ತೆ ಕೆಲವರು ಬಾಯ್ತುಂಬ ನಗುತ್ತಿದ್ದರು. ಜೊತೆಗೆ ಈ ಖುಷಿಯನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿಯುವ ಉಮೇದು...

ನಗರದ ಸೇಂಟ್‌ ಜೋಸೆಫ್‌ ಪಿಯು ಕಾಲೇಜಿನಲ್ಲಿ ಶನಿವಾರ ಕಂಡ ನೋಟವಿದು. ಅದಕ್ಕೆ ಕಾರಣ ‘ದೇಸಿ ಹಬ್ಬ’. 2014ರಲ್ಲಿ ಆರಂಭವಾದ ಈ ಹಬ್ಬಕ್ಕೀಗ ದಶಮಾನದ ಸಂಭ್ರಮ. ಆ ಸಡಗರ, ಇಡೀ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಆಹಾರ–ವಿಹಾರ, ಮಾತು, ಊಟ, ಉಡುಗೆ–ತೊಡುಗೆಯಲ್ಲಿ ಗ್ರಾಮೀಣ ಹಳ್ಳಿ ಸೊಗಡಿನ ರೂಪದಲ್ಲಿ ಆವರಿಸಿತ್ತು.

ಒಂದೆಡೆ ‘ಹಳ್ಳಿ ಮನೆ’ ವೇದಿಕೆ ನಿರ್ಮಿಸಿ, ಕೌದಿ, ಬೀಸುವ ಕಲ್ಲು, ಮೊರ, ಮಣ್ಣಿನ ಬಿಂದಿಗೆ, ಖಾರ–ಮಸಾಲೆ ಅರೆಯುವ ಕಲ್ಲು ಸೇರಿದಂತೆ ಗ್ರಾಮೀಣ ಭಾಗದ ಹಳ್ಳಿಗಳ ಜನರು ಬಳಸುವ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ವಿದ್ಯಾರ್ಥಿನಿಯರು ಅವುಗಳ ಪ್ರಾತ್ಯಕ್ಷಿಕೆಯನ್ನೂ ನೀಡಿದರು.

ADVERTISEMENT

ಮತ್ತೊಂದೆಡೆ, ಗ್ರಾಮೀಣ ಭಾಗದ ತರಹೇವಾರಿ ಭಕ್ಷ್ಯಗಳ ಘಮಲು. ಸಾಲಾಗಿ ಅಲ್ಲಿ ಎಳ್ಳು ಹಚ್ಚಿದ ಖಡಕ್‌ ರಾಗಿ, ಜೋಳ, ಸಜ್ಜೆ ರೊಟ್ಟಿಗಳು, ಬೇಳೆ ಹೋಳಿಗೆ, ಶೇಂಗಾ ಹೋಳಿಗೆ, ಗೋದಿ ಹುಗ್ಗಿ, ಮಾದಿಲಿ, ವಿವಿಧ ಬಗೆಯ ಕಡುಬು, ವಡೆಗಳು, ಬಗೆ–ಬಗೆಯ ಚಕ್ಕುಲಿಗಳು, ತರಹೇವಾರಿ ಉಂಡೆಗಳು, ವೈವಿಧ್ಯಮಯ ಹಪ್ಪಳ–ಸಂಡಿಗೆಗಳು, ವಿವಿಧ ಬಗೆಯ ಕಾಳು ಪಲ್ಲೆ, ತರಕಾರಿ, ಬಿಸಿ ರೊಟ್ಟಿ, ಚಪಾತಿ, ಜಾಮೂನ್‌, ಘೀ ರೈಸ್‌, ವಿವಿಧ ಬಗೆಯ ಪುಲಾವ್‌ ಜೋಡಿಸಲಾಗಿತ್ತು. ತರಹೇವಾರಿ ಭಕ್ಷ್ಯಗಳ ಪರಿಮಳ ಜಿಹ್ವಾಚಾಪಲ್ಯ ಕೆರಳಿಸುವಂತಿತ್ತು.

ಪಕ್ಕದಲ್ಲೇ ಗ್ರಾಮೀಣ ಜನರ ಬದುಕಿನ ನಿತ್ಯ ಬಳಕೆಯ ವಸ್ತುಗಳ ಪ್ರದರ್ಶನ, ಬದುಕು ಹೋಗುವ ಚಿತ್ರಗಳ ಪ್ರದರ್ಶನವೂ ನಡೆಯಿತು. ಬಾವಿ, ಹೊಲ–ತೋಟ, ಗಿಡದಂಥ ಹಳ್ಳಿ ಮನೆಗಳ ವಾತಾವರಣ, ರೈತಾಪಿ ಜನ ಬಳಸುವ ಕೃಷಿ–ಗೃಹೋಪಯೋಗಿ ವಸ್ತುಗಳನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.

‘ಹಳ್ಳಿ ಮನೆ’ ವೇದಿಕೆಯಡಿ ಕೌದಿ, ಬೀಸುವ ಕಲ್ಲು, ಮೊರ, ಮಣ್ಣಿನ ಬಿಂದಿಗೆ, ಖಾರ–ಮಸಾಲೆ ಅರೆಯುವ ಕಲ್ಲು ಸೇರಿದಂತೆ ಗ್ರಾಮೀಣ ಭಾಗದ ಹಳ್ಳಿಗಳ ಜನರು ಬಳಸುವ ವಸ್ತುಗಳನ್ನು ವಿದ್ಯಾರ್ಥಿನಿಯರು ಪ್ರಾತ್ಯಕ್ಷಿಕೆ ನೀಡಿದರು.

ವೇದಿಕೆ ಕಾರ್ಯಕ್ರಮ ಹಾಗೂ ವಸ್ತುಗಳ ಪ್ರದರ್ಶನವನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಹಾಗೂ ನಗರ ಪೊಲೀಸ್‌ ಕಮಿನಷರ್‌ ಶರಣಪ್ಪ ಎಸ್‌.ಡಿ. ಉದ್ಘಾಟಿಸಿದರು. ಬಳಿಕ ವಸ್ತು ಪ್ರದರ್ಶನ, ಬಗೆ–ಬಗೆಯ ಭಕ್ಷ್ಯಗಳ ಪ್ರದರ್ಶನ ವೀಕ್ಷಿಸಿದರು. ಈ ವೇಳೆ ಚಕ್ಕುಲಿಯ ತುಣುಕೊಂದನ್ನು ಜಿಲ್ಲಾಧಿಕಾರಿ ಸವಿದರು.

ನಂತರ ‘ಆದಾವ್ ನಮ್ಮ ಜೋಳ ಉಳೊದಾವ ನಮ್ಮ ಹಾಡ’ ವೇದಿಕೆಯಲ್ಲಿ ವೇದಿಕೆ ನಡೆಯಿತು. ವಿದ್ಯಾರ್ಥಿನಿಯರಿಂದ ಕವ್ವಾಲಿ ಗಾಯನ ಪ್ರದರ್ಶನ, ಲಂಬಾಣಿ ನೃತ್ಯ, ಕೋಲಾಟ ನೃತ್ಯ, ಸುಗ್ಗಿ ಕುಣಿತಗಳ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು.

ಕಾರ್ಯಕ್ರಮದಲ್ಲಿ ಸಿಸ್ಟರ್‌ ಸಜನಾ, ಸಿಸ್ಟರ್‌ ಪ್ರಾನ್ಸಿನ್‌, ವೆಂಕಟೇಶ ನೀರಡಗಿ, ಉದ್ಯಮಿ ರವೀಂದ್ರ ವಿಭೂತಿ, ಗುತ್ತಿಗೇದಾರ ಹನುಮಂತ ಚಿನ್ನಾ ವೇದಿಕೆಯಲ್ಲಿದ್ದರು. ಕಾಲೇಜು ಪ್ರಾಚಾರ್ಯ ಚಿ.ಸಿ.ನಿಂಗಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮೀಣ ಬದುಕಿನ ರೀತಿ–ನೀತಿ ಶೈಲಿ–ಸಂಸ್ಕೃತಿಯನ್ನು ವಿದ್ಯಾರ್ಥಿಗಳು ದೇಸಿ ಹಬ್ಬದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದನ್ನು ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆಯೂ ಅವರ ಮೇಲಿದೆ
ಶರಣಪ್ಪ ಎಸ್‌.ಡಿ. ನಗರ ಪೊಲೀಸ್‌ ಕಮಿಷನರ್‌

‘ಕೃತಜ್ಞತೆಯೊಂದಿಗೆ ದಿನ ಆರಂಭಿಸಿ’

‘ನಿತ್ಯವೂ ಸಿಟ್ಟು–ಸಿಡುಕುತನ ಪಕ್ಕಕ್ಕಿಟ್ಟು ಕೃತಜ್ಞತೆಯೊಂದಿಗೆ ದಿನವನ್ನು ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ‘ಪ್ರಮುಖವಾಗಿ ಇದು ಕಲಿಕೆಯ ಹಂತ. ಅದನ್ನು ಬಿಟ್ಟು ಮೊಬೈಲ್‌ನಲ್ಲಿ ಕಾಲಹರಣ ಮಾಡಿದರೆ ಪ್ರಯೋಜನವಿಲ್ಲ. ಇದು ತಂತ್ರಜ್ಞಾನದ ಕಾಲ. ಮೊಬೈಲ್‌ ಕಂಪ್ಯೂಟರ್ ಎಲ್ಲವೂ ಬೇಕು. ಒಂದೆರಡು ಗಂಟೆ ಬಳಸಿ. ಅವುಗಳ ಸದ್ಬಳಕೆ ಸಮಯ ನಿರ್ವಹಣೆ ಕಲಿಯಿರಿ. ಹೆಚ್ಚಿನ ಸಮಯ ಓದಿಗೆ ಮೀಸಲಿಡಬೇಕು. ಜೀವನದಲ್ಲಿ ನಿಗದಿತ ಗುರಿಯಿಟ್ಟುಕೊಂಡು ಅದನ್ನು ಸಾಧಿಸಲು ಶ್ರಮಿಸಿ. ಆತ್ಮವಿಶ್ವಾಸ ಜಾಣ್ಮೆ ನಿಮ್ಮ ಬಲ. ಅದನ್ನು ಬಳಸಿಕೊಂಡು ಎದುರಿನ ಅವಕಾಶಗಳ ಸದ್ಬಳಕೆ ಮಾಡಿಕೊಂಡು ನೀವೆಲ್ಲ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು’ ಎಂದು ಹುರಿದುಂಬಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.