ADVERTISEMENT

ಕಲಬುರಗಿ ಮಹಾನಗರ ಪಾಲಿಕೆ: 8 ದಿನಗಳಲ್ಲಿ ₹1.34 ಕೋಟಿ ಕರ ವಸೂಲಿ

ಮಲ್ಲಿಕಾರ್ಜುನ ನಾಲವಾರ
Published 14 ಅಕ್ಟೋಬರ್ 2024, 5:15 IST
Last Updated 14 ಅಕ್ಟೋಬರ್ 2024, 5:15 IST
ಆಸ್ತಿ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಿಗೆ ಅಭಿಯಾನದಲ್ಲಿ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ಹಾಗೂ ಸಿಬ್ಬಂದಿ ಕರದಾತರಿಗೆ ಪಾವತಿಯ ರಸೀದಿ ನೀಡಿದರು
ಆಸ್ತಿ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಿಗೆ ಅಭಿಯಾನದಲ್ಲಿ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ಹಾಗೂ ಸಿಬ್ಬಂದಿ ಕರದಾತರಿಗೆ ಪಾವತಿಯ ರಸೀದಿ ನೀಡಿದರು   

ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ವಸೂಲಾತಿ ಮತ್ತು ಉದ್ದಿಮೆ ಪರವಾನಗಿ ವಿಶೇಷ ಅಭಿಯಾನಕ್ಕೆ ಕರದಾತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಪಾಲಿಕೆಯ ಖಜಾನೆಗೆ ₹1.34 ಕೋಟಿ ತೆರಿಗೆ ಹರಿದುಬಂದಿದೆ.

ಕರ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹50 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯೊಂದಿಗೆ ಸೆಪ್ಟೆಂಬರ್ 30ರಂದು ವಿಶೇಷ ಅಭಿಯಾನ ಆರಂಭಿಸಿತ್ತು. ಮೊದಲ ದಿನದಲ್ಲಿ ಕರ ಬಾಕಿ, ದಂಡ ಸೇರಿ ₹40 ಲಕ್ಷ ಕಲೆ ಹಾಕಲಾಗಿತ್ತು. ಸರ್ಕಾರಿ ಕೆಲಸದ 8 ದಿನಗಳಲ್ಲಿ (ಅಕ್ಟೋಬರ್ 9ರ ವರೆಗೆ) ₹1.34 ಕೋಟಿ ಕರವನ್ನು ಪಾಲಿಕೆ ಸಿಬ್ಬಂದಿ ವಸೂಲಿ ಮಾಡಿದ್ದಾರೆ.

ಪಾಲಿಕೆಯ ಮೂರು ವಲಯಗಳ ತಲಾ ನಾಲ್ಕೈದು ಸಿಬ್ಬಂದಿ ಪ್ರತಿ ಓಣಿ, ವಾರ್ಡ್, ವಾಣಿಜ್ಯ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಬಾಕಿ ಉಳಿಸಿಕೊಂಡು ಆಸ್ತಿ ತೆರಿಗೆ, ವಾಣಿಜ್ಯ ಕಟ್ಟಡಗಳ ಗುತ್ತಿಗೆ, ವಾಣಿಜ್ಯ ಕಟ್ಟಡಗಳ ಬಾಡಿಗೆ, ನೀರಿನ ಕರವನ್ನು ಸ್ಥಳದಲ್ಲಿಯೇ ವಸೂಲಿ ಮಾಡುತ್ತಿದ್ದಾರೆ.

ADVERTISEMENT

ಲಕ್ಷಾಂತರ ರೂಪಾಯಿ ಕರ ಬಾಕಿ ಉಳಿಸಿಕೊಂಡ ಉದ್ಯಮಿಗಳು, ಸಂಘ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿ, ಅವರಿಂದ ಕರ ವಸೂಲಿ ಮಾಡಲಾಗುತ್ತಿದೆ. ವಲಯ 2ರಲ್ಲಿ ರತ್ನಾಬಾಯಿ ಎಂಬುವವರಿಂದ ₹11.80 ಲಕ್ಷ, ಎಪಿಎಂಸಿ ರೈತ ಭವನದಿಂದ ₹1.12 ಲಕ್ಷ, ಹಾಜಿ ಶೇಖ್ ಅವರಿಂದ ₹8.11 ಲಕ್ಷ, ಅಶೋಕ ಕುಮಾರ್ ಅವರಿಂದ ₹9.86 ಲಕ್ಷ ಹಾಗೂ ಅಬ್ದುಲ್ ಗಫರ್ ಅವರಿಂದ ₹9.20 ಲಕ್ಷ ಅತ್ಯಧಿಕ ಕರ ವಸೂಲಿ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿ ಮಾಹಿತಿ ನೀಡಿದರು.

‘ಕೆಎಚ್‌ಬಿ ಗ್ರೀನ್ ಪಾರ್ಕ್‌ನಲ್ಲಿ 800 ಮನೆಗಳಿದ್ದು, ಇದುವರೆಗೂ ಪಾಲಿಕೆಯ ಅಧೀನಕ್ಕೆ ಒಳಪಟ್ಟಿಲ್ಲ. ವಿಶೇಷ ಅಭಿಯಾನದಡಿ 300 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪ್ರತಿಯೊಂದು ಮನೆಗೆ ಎರಡ್ಮೂರು ವರ್ಷಗಳಿಗೆ ₹10 ಸಾವಿರದಂತೆ ತೆರಿಗೆ ಹಾಕಿದರೆ ₹30 ಲಕ್ಷ ಪಾಲಿಕೆಗೆ ಹರಿದುಬರುತ್ತದೆ. ಪ್ರಾಥಮಿಕ ಹಂತದಲ್ಲಿ ಗ್ರೀನ್ ಪಾರ್ಕ್‌ಗೆ ಆದ್ಯತೆ ಕೊಡುತ್ತಿದ್ದೇವೆ’ ಎಂದು ಪಾಲಿಕೆಯ ಕಂದಾಯ ವಿಭಾಗದ ಎಸ್ಟೇಟ್ ಆಫೀಸರ್ ಸಾವಿತ್ರಿ ಸಲಗರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ಹಂತದಲ್ಲಿ ಕೊಳಗೇರಿ ಪ್ರದೇಶಗಳ ಫಲಾನುಭವಿಗಳಿಗೆ ಮಂಜೂರಾದ ಹಕ್ಕುಪತ್ರಗಳನ್ನು ಗುರಿಯಾಗಿ ಇರಿಸಿಕೊಳ್ಳಲಾಗಿದೆ. ಈಗಾಗಲೇ ಮೇಯರ್ ಜತೆಗೆ ಎರಡು ಸಭೆಗಳನ್ನು ನಡೆಸಲಾಗಿದೆ’ ಎಂದರು.

ವಿಶೇಷ ಕೌಂಟರ್ ಸ್ಥಾಪನೆ: ‘ಬಹು ವರ್ಷಗಳಿಂದ ಪರವಾನಗಿ ಪಡೆಯದೇ ವಾಣಿಜ್ಯ ಚಟುವಟಿಕೆಗಳು ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರನ್ನು ಪತ್ತೆ ಹಚ್ಚಿ, ದಂಡ ಹಾಕಿ ಸ್ಥಳದಲ್ಲಿಯೇ ಪರವಾನಗಿ ಕೊಡಲು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಪ್ರಕಾಶ ಥೇಟರ್‌ ಸಮೀಪದಲ್ಲಿ ಕೌಂಟರ್‌ಗಳನ್ನು ತೆರೆಯಲಾಗಿದೆ. ವ್ಯಾಪಾರದ ಸ್ಥಳಕ್ಕೆ ಸಂಬಂಧಿಸಿದ ಯಾವುದಾದರು ದಾಖಲೆ ಅಥವಾ ಆಧಾರ್ ಕಾರ್ಡ್ ನೀಡಿದರೆ ಪರವಾನಗಿ ಕೊಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಕರದಾತರು ವ್ಯಾಪಾರಿಗಳು ಉದಾಸೀನ ಮಾಡದೆ ನಿಯಮಿತವಾಗಿ ತೆರಿಗೆ ಕಟ್ಟಬೇಕು. ಮುಂದಿನ ದಿನಗಳಲ್ಲಿ ಕಠಿಣಕ್ರಮ ತೆಗೆದುಕೊಂಡು ವಾಣಿಜ್ಯ ಮಳಿಗೆಗಳನ್ನು ಮುಚ್ಚಲಾಗುವುದು
ಸಾವಿತ್ರಿ ಸಲಗರ ಪಾಲಿಕೆಯ ಕಂದಾಯ ವಿಭಾಗದ ಎಸ್ಟೇಟ್ ಆಫೀಸರ್

‘ಪ್ರತಿಷ್ಠಿತ ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿ ಕರ ಬಾಕಿ’

‘ನಗರದ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ವರ್ಷಗಳಿಂದ ಕರ ಪಾವತಿಸದೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಆ ಸಂಸ್ಥೆಗಳು ಹೊಂದಿರುವ ಕಟ್ಟಡಗಳ ವಿಸ್ತೀರ್ಣವನ್ನು ಈ ಹಿಂದೆ ಇದ್ದವರು ಸರಿಯಾಗಿ ಅಳತೆ ಮಾಡಿರಲಿಲ್ಲ’ ಎಂದು ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೆಬಿಎನ್ ಸಂಸ್ಥೆಯೊಂದರಿಂದ ಕೋಟ್ಯಂತರ ರೂಪಾಯಿ ಕರ ಸಂಗ್ರಹಿಸಬೇಕಿದೆ.

ಎಚ್‌ಕೆಇ ಸಂಸ್ಥೆಯ ಪಿಡಿಎ ಕಾಲೇಜಿನ ಕಟ್ಟಡವನ್ನು ಸರಿಯಾಗಿ ಅಳತೆ ಮಾಡಿಲ್ಲ. ಹೀಗಾಗಿ ತೆರಿಗೆ ಸಂಗ್ರಹದಲ್ಲಿ ₹30 ಲಕ್ಷದಿಂದ ₹40 ಲಕ್ಷದಷ್ಟು ವ್ಯತ್ಯಾಸ ಆಗುತ್ತಿದೆ. ಈ ರೀತಿ ಹಲವು ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಿವೆ. ಅವೆಲ್ಲವುಗಳನ್ನು ಮರು ಅಳತೆ ಮಾಡಿ ಕರ ವಿಧಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.