ADVERTISEMENT

ಕಲಬುರಗಿ: ಕಾಂಗ್ರೆಸ್‌ ತೆಕ್ಕೆಗೆ ಮಹಾನಗರ ಪಾಲಿಕೆ ಚುಕ್ಕಾಣಿ?

ಕಾಂಗ್ರೆಸ್‌ನಿಂದ ಯಲ್ಲಪ್ಪ ನಾಯ್ಕೋಡಿ, ಬಿಜೆಪಿ–ಜೆಡಿಎಸ್‌ನಿಂದ ದಿಗಂಬರ ಕಣಕ್ಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 5:04 IST
Last Updated 30 ಜುಲೈ 2024, 5:04 IST
ಯಲ್ಲಪ್ಪ ನಾಯ್ಕೋಡಿ
ಯಲ್ಲಪ್ಪ ನಾಯ್ಕೋಡಿ   

ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಸಹಜವಾಗಿ ಆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರ ಸಂಖ್ಯೆಯಲ್ಲಿಯೂ ಹೆಚ್ಚಾಗಿರುವುದರಿಂದ ಹಾಗೂ ಪಾಲಿಕೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆಯೂ ಹೆಚ್ಚಿರುವುದರಿಂದ ಮಂಗಳವಾರ (ಜು.30) ನಡೆಯಲಿರುವ ಮೇಯರ್, ಉಪಮೇಯರ್ ಸ್ಥಾನಗಳು ಕಾಂಗ್ರೆಸ್‌ಗೆ ಒಲಿಯುವ ಸಾಧ್ಯತೆಗಳು ದಟ್ಟವಾಗಿದ್ದು, ಐದು ವರ್ಷಗಳ ಬಳಿಕ ಪಕ್ಷ ಮತ್ತೊಮ್ಮೆ ಪಾಲಿಕೆಯ ಚುಕ್ಕಾಣಿ ಹಿಡಿಯಲು ಸಿದ್ಧತೆ ಮಾಡಿಕೊಂಡಿದೆ.

ಪಾಲಿಕೆಯಲ್ಲಿ ಕಾಂಗ್ರೆಸ್‌ನ 27 ಸದಸ್ಯರಿದ್ದು, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಚಂದ್ರಶೇಖರ ಪಾಟೀಲ ಅವರನ್ನು ಸೇರಿಸಿದರೆ 33 ಮತಗಳು ದೊರೆಯಲಿವೆ. 

ಬಿಜೆಪಿಗೆ 22 ಸ್ಥಾನಗಳಿದ್ದು, ಜೆಡಿಎಸ್‌ನ ನಾಲ್ವರು ಹಾಗೂ ಮೂವರು ವಿಧಾನ ಪರಿಷತ್ ಹಾಗೂ ಒಬ್ಬ ಶಾಸಕರಿಗೆ ಮತದಾನದ ಅವಕಾಶವಿದ್ದು, ಒಟ್ಟಾರೆ ಬಲಾಬಲ 30 ಆಗಲಿದೆ.

ADVERTISEMENT

ಮೇಯರ್ ಸ್ಥಾನವು ಪರಿಶಿಷ್ಟ ಪಂಗಡ (ಎಸ್ಟಿ) ಹಾಗೂ ಉಪಮೇಯರ್ ಸ್ಥಾನವು ಬಿಸಿಎ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್‌ನಲ್ಲಿ ಯಲ್ಲಪ್ಪ ನಾಯ್ಕೋಡಿ ಅವರು ಎಸ್ಟಿ ಪಂಗಡಕ್ಕೆ ಸೇರಿದ್ದು, ಅವರೇ ನಾಮಪತ್ರ ಸಲ್ಲಿಸಲಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ನಾಯ್ಕೋಡಿ ಅವರನ್ನೇ ಮೇಯರ್ ಹುದ್ದೆಗೆ ಸ್ಪರ್ಧಿಸುವಂತೆ ತಿಳಿಸಲಾಯಿತು. ಉಪಮೇಯರ್ ಹುದ್ದೆಗೆ ಮಂಗಳವಾರ ಬೆಳಿಗ್ಗೆಯೇ ಆಕಾಂಕ್ಷಿಯೊಬ್ಬರಿಗೆ ಸ್ಪರ್ಧಿಸುವಂತೆ ಸೂಚಿಸಲಾಗುತ್ತದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ನೇತೃತ್ವದಲ್ಲಿ ನಡೆದ ಪಾಲಿಕೆ ಸದಸ್ಯರ ಸಭೆಯಲ್ಲಿ ಈ ಬಾರಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಕುರಿತು ರಣತಂತ್ರ ರೂಪಿಸಲಾಯಿತು.

ಇತ್ತ ಬಿಜೆಪಿಯಲ್ಲಿಯೂ ಮಾಜಿ ಸಂಸದ ಡಾ. ಉಮೇಶ ಜಾಧವ, ಪಕ್ಷದ ಶಹರ ಘಟಕದ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ನೇತೃತ್ವದಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯಿತು.

ದಿಗಂಬರ ಜಾತಿ ಪ್ರಮಾಣಪತ್ರ ಅಸಿಂಧು

ಬಿಜೆಪಿಯಿಂದ ಮೇಯರ್ ಹುದ್ದೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ದಿಗಂಬರ ಅವರ ಜಾತಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳು ಸೋಮವಾರ ಅಸಿಂಧುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. 

ದಿಗಂಬರ ಅವರ ಬಳಿ ತಳವಾರ ಸಮುದಾಯಕ್ಕೆ ಸೇರಿದ ಬಗ್ಗೆ ಎಸ್ಟಿ ಜಾತಿ ಪ್ರಮಾಣಪತ್ರ ಇತ್ತು. ಆದರೆ ಅವರು ಹಿಂದುಳಿದ ಕಬ್ಬಲಿಗ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ ಎಸ್ಟಿ ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಬೇಕು ಎಂದು ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲಿರುವ ಯಲ್ಲಪ್ಪ ನಾಯ್ಕೋಡಿ ಅವರು ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರು. 

‘ನನ್ನ ದೂರನ್ನು ಆಧರಿಸಿ ಅಧಿಕಾರಿಗಳು ಪಂಚನಾಮೆ ನಡೆಸಿ ಎಸ್ಟಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಿದ್ದಾರೆ’ ಎಂದು ಯಲ್ಲಪ್ಪ ಅವರು ತಿಳಿಸಿದರು.

‘ದಿಗಂಬರ ಅವರು ಮೇಯರ್ ಹುದ್ದೆಗೆ ಸ್ಪರ್ಧಿಸಿದರೂ ನಾಮಪತ್ರ ಸ್ವೀಕರಿಸಲು ಕಾನೂನು ತೊಡಕುಗಳಿವೆ. ಒಂದೊಮ್ಮೆ ಸ್ಪರ್ಧಿಸಿದರೆ ಕಾಂಗ್ರೆಸ್ ಕ್ರಿಮಿನಲ್ ಪ್ರಕರಣ ದಾಖಲಿಸಲಿದೆ’ ಎಂದು ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ ಪಾಲಿಕೆಯಲ್ಲಿ ಕಾಂಗ್ರೆಸ್‌ ಪಕ್ಷದವರೇ ಮೇಯರ್ ಆಗಲಿದ್ದಾರೆ. ಅಧಿಕಾರಕ್ಕೆ ಬರಲು ನಮ್ಮಲ್ಲಿ ಸರಳ ಬಹುಮತವಿದೆ.
–ಜಗದೇವ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಜೆಡಿಎಸ್‌ನ ಎಲ್ಲ ನಾಲ್ಕೂ ಜನ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಪಮೇಯರ್ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆಯಾಗಿದೆ. ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ
–ಕೃಷ್ಣಾರೆಡ್ಡಿ, ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ
ಜಗದೇವ ಗುತ್ತೇದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.