ಕಲಬುರಗಿ: ತಾಲ್ಲೂಕಿನ ಸ್ಟೇಷನ್ ಬಬಲಾದ ಗ್ರಾಮದ ಹೊರವಲಯದಲ್ಲಿ ಸೋಮವಾರ ಮಧ್ಯಾಹ್ನ ರುಂಡವಿಲ್ಲದ ದೇಹ ಪತ್ತೆಯಾಗಿದೆ. ಸುಮಾರು 48 ಗಂಟೆಗಳ ಹಿಂದೆಯೇ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಬ್‌ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 35 ವರ್ಷಗಳ ಆಸುಪಾಸಿನ ವ್ಯಕ್ತಿಯನ್ನು ರುಂಡ ಕತ್ತರಿಸಿ ಅಮಾನುಷವಾಗಿ ಕೊಲೆ ಮಾಡಲಾಗಿದೆ. ಸಾಕ್ಷಿ ನಾಶಮಾಡಲು ರುಂಡವನ್ನು ತೆಗೆದುಕೊಂಡು ಹೋಗಿದ್ದಾರೆ. ರುಂಡಕ್ಕಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಕೊಲೆಯಾದ ವ್ಯಕ್ತಿಯ ಗುರುತು ಸಹ ಪತ್ತೆಹಚ್ಚಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಡಿಸಿಪಿ ಕನಿಕಾ ಸಿಕ್ರಿವಾಲ್ ಸೇರಿದಂತೆ ಸಬ್‌ಅರ್ಬನ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಶರಣಪ್ಪ ಎಸ್.ಡಿ, ‘ಮುಂಡ ಪತ್ತೆಯಾದ ಸ್ಥಳವನ್ನು ಪರಿಶೀಲಿಸಿದಾಗ ಕೊಲೆ ಮಾಡಲಾದ ಕುರುಹುಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಾಥಮಿಕ ಹಂತದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಿ, ಕೊಲೆಗೆ ಯಾರು ಕಾರಣ ಎಂಬುದರ ತನಿಖೆ ಮಾಡಬೇಕಿದೆ’ ಎಂದರು.
‘ಅಂದಾಜು 48 ಗಂಟೆಗಳ ಮುಂಚಿತವಾಗಿ ಮೃತಪಟ್ಟಿರುವ ಬಗ್ಗೆ ವಿಧಿ ವಿಜ್ಞಾನದಿಂದ ತಿಳಿದುಬಂದಿದೆ. ಶ್ವಾನದಳ, ಬೆರಳಚ್ಚು ತಜ್ಞರಿಂದ ಸ್ಥಳದ ವಿಶ್ಲೇಷಣೆ ಮಾಡಿಸಲಾಗಿದೆ. ಅವರಿಂದ ಏನೆಲ್ಲ ಸಾಕ್ಷಿ ಸಿಗುತ್ತವೆ ಮತ್ತು ಸ್ಥಳೀಯವಾಗಿ ತನಿಖೆ ಮಾಡುತ್ತಿರುವ ತಂಡದಿಂದ ಲಭ್ಯವಾಗುವ ಮಾಹಿತಿಯನ್ನು ಆಧಾರಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಯನ್ನು ಆದಷ್ಟು ಬೇಗ ಬಂಧಿಸುತ್ತೇವೆ’ ಎಂದು ಹೇಳಿದರು.
‘ಪ್ರಕರಣದ ತನಿಖೆಗಾಗಿ ಡಿಸಿಪಿ, ಎಸಿಪಿ, ಸಬ್‌ಸರ್ಬನ್ ಠಾಣೆಯ ಇನ್‌ಸ್ಪೆಕ್ಟರ್‌ಗಳಿಗೆ ಕೆಲವು ನಿರ್ದೇಶನ ನೀಡಿದ್ದೇನೆ. ಸ್ಥಳೀಯವಾಗಿಯೇ ಕೊಲೆ ಮಾಡಿದ್ದರ ಮಾಹಿತಿ ಇದ್ದು, ಬೇರೆ ಕಡೆಯಿಂದಲೂ ಕರೆದುಕೊಂಡು ಬಂದಿರುವ ಬಗ್ಗೆಯೂ ತಿಳಿದುಬಂದಿದೆ. ಕೃತ್ಯ ನಡೆದ ಸ್ಥಳವನ್ನು ಸುರಕ್ಷಿತವಾಗಿ ಇರಿಸಿ ವಿಶ್ಲೇಷಣೆ ಮಾಡಲಾಗುತ್ತಿದೆ’ ಎಂದರು.
ಪತ್ತೆಗೆ ಮನವಿ: ಕೊಲೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಸಬ್‌ಅರ್ಬನ್ ಠಾಣೆಯ ಮೊ.
94808 05528, 94808 05500 ಹಾಗೂ ದೂ. 08472 263631ಗೆ ಕರೆ ಮಾಡಿ ತಿಳಿಸಬಹುದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ರೈತ ಆತ್ಮಹತ್ಯೆ
ತಾಲ್ಲೂಕಿನ ಬನ್ನೂರ ಗ್ರಾಮದ ರೈತ ಹಣಮಂತ ಪೀರಪ್ಪ ಹಳಿಮನಿ (60) ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಿಗೆ ಪತ್ನಿ ನಾಗಮ್ಮ, ಇಬ್ಬರು ಪತ್ರರ ಹಾಗೂ ಪುತ್ರಿಯರು ಇದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 2ರ ಬೆಳಿಗ್ಗೆ ಹಣಮಂತ ಅವರು ತೊಗರಿ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡಲು ತಮ್ಮ ಜಮೀನಿಗೆ ತೆರಳಿದ್ದರು. ಹೊಲದಲ್ಲಿ ಒದ್ದಾಡುತಿದ್ದ ಹಣಮಂತ ಅವರ ಬಾಯಲ್ಲಿ ನೋರೆ ಬರುತ್ತಿತ್ತು. ಇದನ್ನು ನೋಡಿದ ಪತ್ನಿ ನಾಗಮ್ಮ ಅವರು ಮಕ್ಕಳಿಗೆ ತಿಳಿಸಿ, ಗಂಡನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನ.3ರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ಯಾಂಕರ್ ಡಿಕ್ಕಿ: ವೃದ್ಧೆ ಸಾವು
ಖರ್ಗೆ ಪೆಟ್ರೋಲ್ ಬಂಕ್ ಸಮೀಪದಲ್ಲಿ ಸೋಮವಾರ ಮಲ್ಲಮ್ಮ ಸಾಯಬಣ್ಣ (65) ಎಂಬುವವರಿಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ತೀವ್ರಗಾಯದಿಂದ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ನಿವಾಸಿಯಾದ ಮಲ್ಲಮ್ಮ ಅವರಿಗೆ ರಸ್ತೆ ವಿಭಜಕ ದಾಟುವಾಗ ಟ್ಯಾಂಕರ್ ಬಂದು ಡಿಕ್ಕಿ ಹೊಡೆದಿದೆ. ಗಾಲಿಯಡಿ ಸಿಲುಕಿದ ಅವರ ಎಡಗಾಲು ನಜ್ಜುಗುಜ್ಜಾಗಿತ್ತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದು ಚಾಲಕನ ವಿರುದ್ಧ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂಗಿ ಹಿಂದೆ ಬೀಳದಂತೆ ಎಚ್ಚರಿಕೆ: ಅಣ್ಣನಿಗೆ ಚಾಕು ಇರಿತ
ತಂಗಿಯ ಹಿಂದೆ ಬಿದ್ದು ಚುಡಾಯಿಸದಂತೆ ಬುದ್ಧಿವಾದ ಹೇಳಿದಕ್ಕೆ ಆಕೆಯ ಸಹೋದರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೂವರನ್ನು ಗಾಯಗೊಳಿಸಿದ ಆರೋಪದಲ್ಲಿ ಮಹಿಳೆ ಸೇರಿ 10 ಮಂದಿ ವಿರುದ್ಧ ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಣೆಗಾಂವ ಬಸವನ ತಾಂಡಾ ನಿವಾಸಿ ಶಿವಾಜಿ ರಾಠೋಡ ರಾಹುಲ ರಾಠೋಡ ಹಾಗೂ ಅಮರನಾಥ ಜೈರಾಮ್ ಗಾಯಗೊಂಡವರು. ಇದೇ ತಾಂಡಾದ ಪರಶುರಾಮ ನಾರಾಯಣ ನಾರಾಯಣ ಗೋಪು ರಾಘವೇಂದ್ರ ವಾಲು ಪ್ರವೀಣ್ ವಾಲು ಸೇರಿ 10 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾಜಿ ತಂಗಿಯನ್ನು ಪರಶುರಾಮ ಎಂಬಾತ ಆಗಾಗ ಚುಡಾಯಿಸುತ್ತಾ ಆಕೆಯ ಹಿಂದೆಯೇ ಬಿದ್ದಿದ್ದನ್ನು. ತಂಗಿಯ ತಂಟೆಗೆ ಹೋಗದಂತೆ ಯುವತಿ ಸಹೋದರರಾದ ಶಿವಾಜಿ ಮತ್ತು ಅಮರನಾಥ ಅವರು ಬುದ್ಧಿ ಮಾತು ಹೇಳಿದ್ದರು. ದೀಪಾವಳಿಯ ಮೇರಾ ಆಚರಣೆಯ ದಿನ ಶಿವಾಜಿಯ ಮನೆಗೆ ಆರೋಪಿಗಳು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಜೀವ ಬೆದರಿಕೆ ಹಾಕಿದ ಪರಶುರಾಮ ಚಾಕುವಿನಿಂದ ಶಿವಾಜಿ ತಲೆಯ ಹಿಂಬಾಗ ಹೊಟ್ಟೆಗೆ ಚುಚ್ಚಿದ್ದಾರೆ. ಸ್ಥಳೀಯರು ಬಂದು ಜಗಳ ಬಿಡಿಸಿದ್ದು ಹಲ್ಲೆ ವೇಳೆ ರಾಹುಲ ಮತ್ತು ಅಮರನಾಥ ಅವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.