ಕಲಬುರಗಿ: ನಗರದ ಎಲ್ಲೆಂದರೆಲ್ಲಿ ನಿಲ್ಲುವ ವಾಹನಗಳು, ಅಡ್ಡಾದಿಡ್ಡಿ ಚಾಲನೆ, ರಸ್ತೆ ದಾಟಲು ಪರದಾಡುವ ಪಾದಚಾರಿಗಳು, ವೃತ್ತಗಳಲ್ಲಿ ಆಟೊ ಚಾಲಕರ ಜತೆ ಸಂಚಾರ ಪೊಲೀಸರ ವಾಗ್ವಾದ... ಕಲಬುರಗಿ ಮಹಾನಗರದಲ್ಲಿ ನಿತ್ಯ ಸಂಚಾರದ ಸಮಸ್ಯೆಗಳಿವು.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಲಬುರಗಿ ಮಹಾನಗರದಲ್ಲಿ ವಾಹನಗಳ ನಿಲುಗಡೆಯು ಬಹುದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದ್ದು, ಸ್ಥಳಾವಕಾಶದ ಕೊರತೆಯಿಂದಾಗಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಆಗುತ್ತಿವೆ. ಇದರಿಂದ ಪ್ರತಿನಿತ್ಯ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.
ನಗರದ ಹೃದಯ ಭಾಗವಾದ ಎಸ್‌ವಿಪಿ ವೃತ್ತ, ಸೂಪರ್ ಮಾರ್ಕೆಟ್, ಕಿರಾಣ ಬಜಾರ್, ಚಿನ್ನಾಭರಣ ಅಂಗಡಿ ಬೀದಿ, ಕೇಂದ್ರ ಬಸ್ ನಿಲ್ದಾಣ, ಜೇವರ್ಗಿ ರಸ್ತೆ, ರಾಮಮಂದಿರ ವೃತ್ತ, ಟಿಪ್ಪು ಸರ್ಕಲ್, ಆನಂದ್ ಮತ್ತು ಗೋವಾ ಹೋಟೆಲ್ ವೃತ್ತ, ಎನ್.ವಿ. ಕಾಲೇಜು ಮುಂಭಾಗ, ಲಾಲ್‌ಗಿರಿ ಕ್ರಾಸ್, ಹಾಗರಗಾ ಕ್ರಾಸ್, ಹೆರಿಟೇಜ್ ಹೋಟೆಲ್ ವೃತ್ತ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಸೂಕ್ತ ಜಾಗವಿಲ್ಲ. ಹಾಗಾಗಿ ವಾಹನಗಳನ್ನು ರಸ್ತೆಗೆ ಹೊಂದಿಕೊಂಡಂತೆ ನಿಲ್ಲಿಸುವುದರಿಂದ ವಾಹನ ದಟ್ಟಣೆ ಕಿರಿಕಿರಿ ಉಂಟಾಗುತ್ತಿದೆ.
ನಗರದ ಸೂಪರ್ ಮಾರ್ಕೆಟ್ ಪ್ರದೇಶಕ್ಕೆ ಬರುವ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಸ್ಥಳಾವಕಾಶದ ಕೊರತೆ ಇರುವುದರಿಂದ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸುವುದು ಸವಾರರಿಗೆ ಅನಿವಾರ್ಯವಾಗಿದೆ. ಮಾರುಕಟ್ಟೆಯ ಮುಖ್ಯ ರಸ್ತೆ ಹಾಗೂ ಸಂಪರ್ಕ ರಸ್ತೆಗಳ ಎರಡೂ ಕಡೆ ಬೈಕ್‌ಗಳ ನಿಲುಗಡೆ ಆಗುವುದರ ಜತೆಗೆ ರಸ್ತೆಯಲ್ಲೂ ವಾಹನಗಳು ನಿಲ್ಲುತ್ತಿವೆ.
ನಗರದ ಸರ್ಕಾರಿ ಕಚೇರಿಗಳಲ್ಲೂ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಗಳಿಲ್ಲ. ಜಿಮ್ಸ್ ಆವರಣ, ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯಿತಿ ಸಭಾಂಗಣ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಂಕೀರ್ಣ, ಜೆಸ್ಕಾಂ ಕಚೇರಿ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಕಚೇರಿ, ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ನಾಡ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಸರ್ಕಾರಿ ಶಾಲಾ ಕಾಲೇಜುಗಳಲ್ಲೂ ಸರಿಯಾದ ವ್ಯವಸ್ಥೆ ಇಲ್ಲ. ಹಾಗಾಗಿ ಕಚೇರಿಯ ಪ್ರವೇಶ ದ್ವಾರಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದು ಸಾಮಾನ್ಯವಾಗಿದೆ.
ಮಾಲ್‌ಗಳಲ್ಲೂ ಇಲ್ಲ ವ್ಯವಸ್ಥೆ: ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗವನ್ನು ಕೆಲ ವಾಣಿಜ್ಯ ಮಳಿಗೆ ಮಾಲೀಕರು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದರಿಂದ ಮಳಿಗೆಯ ಮುಂಭಾಗ ವಾಹನಗಳು ನಿಲುಗಡೆ ಆಗುತ್ತಿವೆ. ಕೆಲವು ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶವೇ ಇಲ್ಲ. ಮತ್ತೆ ಕೆಲ ಮಳಿಗೆಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇದ್ದರೂ ನಿಲುಗಡೆಗೆ ಶುಲ್ಕ ವಿಧಿಸಿರುವ ಕಾರಣಕ್ಕೆ ಸವಾರರು ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ಶಾಪಿಂಗ್‌ಗೆ ತೆರಳುತ್ತಿದ್ದಾರೆ.
ನಗರದ ಪ್ರಮುಖ ವಾಣಿಜ್ಯ ಸಂಕೀರ್ಣಗಳಲ್ಲಿ ಒಂದಾದ ಆರ್ಕಿಡ್ ಮಾಲ್, ಬಿಗ್ ಬಜಾರ್ ಮಳಿಗೆಯಲ್ಲಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸಿರುವ ಕಾರಣ ಬೈಕ್ ಸವಾರರು ವಾಹನಗಳನ್ನು ರಸ್ತೆಯುದ್ದಕ್ಕೂ ನಿಲ್ಲಿಸುತ್ತಿದ್ದು, ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಸಂಚಾರ ದಟ್ಟಣೆಯ ವೃತ್ತಗಳು: ರಾಷ್ಟ್ರಪತಿ ಸರ್ಕಲ್, ಎಸ್‌ವಿಪಿ ವೃತ್ತ, ಆನಂದ ಹೋಟೆಲ್ ಸರ್ಕಲ್, ಗೋವಾ ಹೋಟೆಲ್ ಸರ್ಕಲ್, ರಾಮಮಂದಿರ ವೃತ್ತ, ಟಿಪ್ಪು ಸರ್ಕಲ್, ಸೇಡಂ ರೋಡ್ ಸರ್ಕಲ್ (ಖರ್ಗೆ ಪೆಟ್ರೋಲ್ ಬಂಕ್), ಹಾಗರಗಾ ಕ್ರಾಸ್, ಹುಮನಾಬಾದ್ ರಿಂಗ್ ರೋಡ್, ಸುಲ್ತಾನಪುರ ರಿಂಗ್ ರೋಡ್, ಗೋಲ್ಡ್ ಹಬ್, ಓಲ್ಡ್ ಡಿಪಿಒ ಕ್ರಾಸ್ (ಬಿಗ್ ಬಜಾರ್), ಎಸ್.ಬಿ.ಪೆಟ್ರೋಲ್ ಬಂಕ್, ಹರಿಟೇಜ್ ಹೋಟೆಲ್ ಕ್ರಾಸ್, ಆರ್ಕಿಡ್ ಮಾಲ್, ಗುಲಬಾವಾಡಿ ಕ್ರಾಸ್, ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಪಂಪ್, ಜೆ.ಬಿ.ಕ್ರಾಸ್ ಸೂಪರ್ ಮಾರ್ಕೆಟ್.
ನಗರದ ವಾಹನದಟ್ಟಣೆಯ ರಸ್ತೆ ಮಾರ್ಗಗಳು: ಹುಮನಾಬಾದ್ ರಿಂಗ್ ರಸ್ತೆಯಿಂದ ಟಿಪ್ಪು ವೃತ್ತದವರೆಗೆ, ಹುಮನಾಬಾದ್ ರಿಂಗ್ ರಸ್ತೆಯಿಂದ ಜಗತ್ ವೃತ್ತದವರೆಗೆ (ಸೂಪರ್ ಮಾರ್ಕೆಟ್ ಮಾರ್ಗ), ಸರ್ಕಾರಿ ಐಟಿಐ ಕಾಲೇಜಿನಿಂದ ಹೀರಾಪುರ ರಸ್ತೆವರೆಗೆ (ಕೇಂದ್ರ ಬಸ್ ನಿಲ್ದಾಣ ಮಾರ್ಗ), ರಾಷ್ಟ್ರಪತಿ ವೃತ್ತದಿಂದ ಆನಂದ ಹೋಟೆಲ್ ವೃತ್ತದ ವರೆಗಿನ ರಸ್ತೆ (ಅಪ್ಪ ಕಾಲೇಜು ಮಾರ್ಗ), ಗೋವಾ ಹೋಟೆಲ್‌ನಿಂದ ಅಗ್ನಿಶಾಮಕ ದಳದ ಕಚೇರಿ (ಎಸ್‌ಬಿ ಟೆಂಪಲ್, ಲಾಲ್‌ಗಿರಿ ವೃತ್ತ ಮಾರ್ಗ), ಗಣೇಶ ಮಂದಿರದಿಂದ ಹೆರಿಟೇಜ್ ಹೋಟೆಲ್ ವರೆಗೆ (ಮೆಹ್‌ಬಜ್ ಮಸೀದಿ ಮಾರ್ಗ), ಕೆಬಿಎನ್ ದರ್ಗಾದಿಂದ ಹಾಗರಗಾ ಕ್ರಾಸ್(ರಾಮ್‌ಜಿ ನಗರ ಮಾರ್ಗ).
ಸಂಚಾರ ಸುಧಾರಣೆಗೆ ಜಂಟಿ ವರದಿ: ಕಲಬುರಗಿ ನಗರದ ಸಂಚಾರ ದಟ್ಟಣೆ ಸುಧಾರಣೆಗಾಗಿ ನಗರ ಪೊಲೀಸ್ ಆಯುಕ್ತರು ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಜಂಟಿಯಾಗಿ ಇತ್ತೀಚೆಗೆ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ.
ಸಂಚಾರ ದಟ್ಟಣೆಯ ಪ್ರದೇಶ, ವೃತ್ತಗಳನ್ನು ಗುರುತಿಸುವುದು, ಸಂಚಾರ ದಟ್ಟಣೆ ಸುಧಾರಣೆ, ವ್ಯವಸ್ಥಿತ ಪಾರ್ಕಿಂಗ್, ಸಂಚಾರ ನಿಯಮಗಳ ಜಾರಿ, ಸಾರ್ವಜನಿಕ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವರದಿಯನ್ನು ಸಿದ್ಧಪಡಿಸಲಾಗಿದೆ.
ಹೊರ ವಲಯದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವ: ‘ಸಂಚಾರ ದಟ್ಟಣೆ ಸುಧಾರಣೆಯ ಭಾಗವಾಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿ ರಸ್ತೆ ವ್ಯಾಪಾರಿಗಳಿಗೆ ಸೂಕ್ತ ಜಾಗದ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿಕೊಡಲಾಗಿದೆ. ಮಾಲ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವ ಕುರಿತು ಪರಿಶೀಲನೆ ನಡೆಸುವಂತೆ ಪಾಲಿಕೆ ಗಮನಕ್ಕೆ ತರಲಾಗಿದೆ. ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧ ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಆಟೋಗಳಿಗೆ ಪ್ರತ್ಯೇಕ ಲೇನ್ ನಿರ್ಮಿಸಲಾಗಿದೆ. ವಾಹನ ಸವಾರರಿಗೆ ಕೆಲ ವೃತ್ತಗಳಲ್ಲಿ ಎಡ ತಿರುವು ಮುಕ್ತ (ಫ್ರೀ ಲೆಫ್ಟ್) ವ್ಯವಸ್ಥೆ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್. ತಿಳಿಸಿದರು.
ನಗರದ ಭವಿಷ್ಯದ ದೃಷ್ಟಿಯಿಂದ ಹೊರವಲಯದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ನಿರ್ಮಾಣ ಹಾಗೂ ವಾಹನಗಳ ನಿಲುಗಡೆಗೆ ಬಹುಮಹಡಿಯ ಕಟ್ಟಡ ನಿರ್ಮಾಣಕ್ಕೆ ಯೋಜನೆ, ಹೊಸ ಆಟೊ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಮಹಾನಗರ ಪಾಲಿಕೆಗೆ ಸಲಹೆ ನೀಡಲಾಗಿದೆ. ನಗರದ ರಿಂಗ್ ರಸ್ತೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೂ ತರಲಾಗಿದೆ ಎಂದು ಅವರು ಹೇಳಿದರು.
ಸೇಡಂ ಪಟ್ಟಣದಲ್ಲೂ ಇಲ್ಲ ಪಾರ್ಕಿಂಗ್ ಸ್ಥಳ (ಸೇಡಂ ವರದಿ): ಸೇಡಂ ಪಟ್ಟಣದ ಬಸ್ ನಿಲ್ದಾಣ, ಮಾರುಕಟ್ಟೆಯ ಯಾವ ಕಡೆಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಬೈಕ್ ಮತ್ತು ಇತರೆ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಬಸ್ ನಿಲ್ದಾಣದ ಮುಂಭಾಗದ ಮುಖ್ಯ ರಸ್ತೆಯಲ್ಲೇ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಬಸ್ ನಿಲ್ದಾಣದ ಸುತ್ತ ನಿಲ್ಲುವ ಆಟೊಗಳ ಸಂಖ್ಯೆ ಹೆಚ್ಚಿದ್ದು, ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸೇಡಂ ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿಯೂ ಪಾರ್ಕಿಂಗ್ ಸಮಸ್ಯೆಯಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಆಟೊಗಳ ದಟ್ಟಣೆ ಹೆಚ್ಚಿದೆ. ರೋಗಿಗಳ ಸಂಚಾರಕ್ಕೂ ಸಂಚಕಾರ ಬಂದೊದಗಿದೆ.
ಸೇಡಂ ಪಟ್ಟಣದ ಕಿರಾಣ ಬಜಾರ ಮುಖ್ಯ ರಸ್ತೆಯಲ್ಲಿ ವಾರದಲ್ಲಿ ಪೊಲೀಸ್ ಇಲಾಖೆ ಮೂರು ದಿನ ಬಲಗಡೆ, ಮೂರು ದಿನ ಎಡಗಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಏಕಮುಖ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.
ಜೇವರ್ಗಿ ವರದಿ: ಜೇವರ್ಗಿ ಪಟ್ಟಣದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಈ ಕಾರಣಕ್ಕಾಗಿ ವಾಹನ ಸವಾರರು ಬೀದರ್– ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ವಾಹನಗಳು ನಿಲ್ಲಿಸುತ್ತಿದ್ದಾರೆ. ಇದರಿಂದ ಸಾವ೯ಜನಿಕರಿಗೆ ಕಿರಿ ಕಿರಿ ಉಂಟಾಗುತ್ತಿದೆ.
‘ಮುಖ್ಯ ರಸ್ತೆಯ ಅಪೂರ್ಣ ಕಾಮಗಾರಿಯಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಈ ಕುರಿತು ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಒದಗಿಸುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಗಿದೆ’ ಎಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಸಂಗಿತಾ ಹಿರೇಮಠ ತಿಳಿಸಿದ್ದಾರೆ.
ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಕನಿಷ್ಠ ಪರಿಜ್ಞಾನ ಇಲ್ಲದೇ ವಿದ್ಯಾವಂತ ಸವಾರರೇ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸುವುದನ್ನು ರೂಢಿಸಿಕೊಳ್ಳಬೇಕು. ಸಂಚಾರ ನಿಯಮ ಪಾಲನೆ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.ಚೇತನ್ ಆರ್. ಕಲಬುರಗಿ ನಗರ ಪೊಲೀಸ್ ಕಮಿಷನರ್
ನಗರದ ವಾಣಿಜ್ಯ ಚಟುವಟಿಕೆಯ ಸಮುಚ್ಛಯಗಳಲ್ಲಿ ವಾಹನಗಳ ನಿಲುಗಡೆಗೆ ಸೆಲ್ಲಾರ್‌ಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಆದರೆ ಕೆಲ ಮಾಲ್ ಹಾಗೂ ವಾಣಿಜ್ಯ ಸಮುಚ್ಛಯಗಳ ಮಾಲೀಕರು ಆ ಜಾಗವನ್ನೂ ಬಾಡಿಗೆಗೆ ನೀಡಿದ್ದಾರೆ. ಕೆಲ ಕಡೆ ಮನಸೋ ಇಚ್ಛೆ ವಾಹನ ನಿಲುಗಡೆಗೆ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಈ ಮಳಿಗೆಗಳಿಗೆ ನಗರಪಾಲಿಕೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕುಸೂರ್ಯಕಾಂತ ನಿಂಬಾಳ್ಕರ್ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕಲಬುರಗಿ ಮಹಾನಗರ ಪಾಲಿಕೆ
- ‘ಯೋಜನಾಬದ್ಧ ನಗರ ನಿರ್ಮಾಣ ನಿರ್ವಹಣೆ ಕೊರತೆಯೇ ಪಾರ್ಕಿಂಗ್ ಸಮಸ್ಯೆಗೆ ಕಾರಣ’ ‘ರಾಷ್ಟ್ರೀಯ ಪಟ್ಟಣ ಯೋಜನಾ ಕಾಯ್ದೆ ಪ್ರಕಾರ ನಗರ ನಿರ್ಮಾಣ ಹಾಗೂ ನಿರ್ವಹಣೆ ಮಾಡದಿರುವುದು ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹಾಗೂ ವಾಹನ ದಟ್ಟಣೆ ಸೇರಿ ಇನ್ನಿತರ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ’ ಎನ್ನುತ್ತಾರೆ ಕಲಬುರಗಿ ಮಹಾನಗರ ಪಾಲಿಕೆ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ್. ನಗರದ ವಸತಿ ಪ್ರದೇಶ ವ್ಯಾಪಾರ ಸಮುಚ್ಛಯ ವಲಯ ಕೈಗಾರಿಕಾ ವಲಯಗಳ ಅನುಸಾರ ಆಯಾ ಪ್ರದೇಶದಲ್ಲಿ ಉದ್ದೇಶಿತ ಚಟುವಟಿಕೆ ನಡೆಯಬೇಕು. ಆದರೆ ಅದರ ತದ್ವಿರುದ್ಧವಾಗಿ ನಗರ ನಿರ್ಮಾಣ ಆಗುತ್ತಿರುವುದರಿಂದ ಸಮಸ್ಯೆ ಉದ್ಭವಿಸುತ್ತಿದೆ. ವಸತಿ ಪ್ರದೇಶದ ವಲಯದಲ್ಲಿ ವಾಣಿಜ್ಯ ಸಮುಚ್ಛಯ ಉದ್ಯಮ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಇದನ್ನು ಮಹಾನಗರ ಪಾಲಿಕೆ ಪೊಲೀಸ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರವು ಚಟುವಟಿಕೆಗೆ ಕಡಿವಾಣ ಹಾಕದಿರುವುದು ಪಾರ್ಕಿಂಗ್ ಸಮಸ್ಯೆಗೆ ಕಾರಣ ಎನ್ನುತ್ತಾರೆ ಅವರು. ನೂತನ ಕಟ್ಟಡ ನಿರ್ಮಾಣ ಹಾಗೂ ಖಾಸಗಿ ಬಡಾವಣೆ ಅಭಿವೃದ್ಧಿ ಪಡಿಸುವ ವೇಳೆ ಪಾಲಿಸಬೇಕಾದ ಕಡ್ಡಾಯ ನಿಯಮ ಪಾಲನೆಯು ದಾಖಲೆಗಳಲ್ಲಿ ಮಾತ್ರ ಲಭ್ಯ. ಭೌತಿಕವಾಗಿ ಯಾರೂ ಅವುಗಳ ಪಾಲನೆ ಮಾಡುತ್ತಿಲ್ಲ ಎಂದು ಹೇಳಿದರು.
₹ 2 ಕೋಟಿ ವೆಚ್ಚದಲ್ಲಿ ಸಂಚಾರ ಸುಧಾರಣೆಗೆ ಕ್ರಮ ಕಲಬುರಗಿ ಮಹಾನಗರ ಪಾಲಿಕೆಯು ನಗರದ ಏಳು ವೃತ್ತಗಳಲ್ಲಿ ಸಂಚಾರ ಸುಧಾರಣೆಗೆ ಮುಂದಾಗಿದ್ದು ₹ 2 ಕೋಟಿ ವೆಚ್ಚದಲ್ಲಿ ವಿದ್ಯುತ್ ಕಂಬ ಹಾಗೂ ಕೇಬಲ್‌ಗಳ ಸ್ಥಳಾಂತರ ಕುಡಿಯುವ ನೀರು ಪೂರೈಕೆಯ ವಾಲ್ವ್‌ಗಳ ಸ್ಥಳಾಂತರ ಡಿವೈಡರ್ ತೆರವು ತೆರದ ಚರಂಡಿ ಮುಚ್ಚುವುದು ಪಾದಚಾರಿಗಳಿಗೆ ಸುರಕ್ಷತೆ ಹೆಚ್ಚಿಸಲು ಫುಟ್‌ಪಾತ್ ನಿರ್ಮಾಣ ಹಾಗೂ ಗ್ರಿಲ್ ಅಳವಡಿಕೆ ಕಾಮಗಾರಿ ಕೈಗೊಳ್ಳಲು ಮುಂದಾಗಿದೆ. ರಾಷ್ಟ್ರಪತಿ ಸರ್ಕಲ್ ಬಳಿ ಚರಂಡಿ ವ್ಯವಸ್ಥೆ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ ಕೇಂದ್ರ ಬಸ್ ನಿಲ್ದಾಣದಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಸೂಕ್ತ ಮಾರ್ಗದ ವ್ಯವಸ್ಥೆ ಹೆರಿಟೇಜ್ ಹೋಟೆಲ್ ಬಳಿ ರಸ್ತೆ ಸಮತಟ್ಟು ಮಾಡುವುದು ಸೇರಿದಂತೆ ಎಸ್‌ವಿಪಿ ವೃತ್ತ ಎಸ್‌ಬಿ ಪೆಟ್ರೋಲ್ ಬಂಕ್ ದರ್ಗಾ ಎದುರು ಲಾಹೋಟಿ ಪೆಟ್ರೋಲ್ ಬಂಕ್ ವೃತ್ತದಲ್ಲಿ ಸಂಚಾರ ಸಮಸ್ಯೆ ಕುರಿತು ಕಾಮಗಾರಿ ಕೈಗೊಳ್ಳಲು ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು. ಎಲ್‌ಇಡಿ ಅಳವಡಿಕೆ: ತಾಪಮಾನ ಮಾಹಿತಿ ಪರಿಸರ ಮಾಲಿನ್ಯ ತಿಳಿಸುವ ಹಾಗೂ ವಾಹನ ಸವಾರರಿಗೆ ಸಂಚಾರ ನಿಯಮ ಪಾಲನೆಯ ಕುರಿತು ಅರಿವು ಮೂಡಿಸುವ ಎಲ್‌ಇಡಿ ಪರದೆಯನ್ನು ನಗರದ ಮೂರು ಕಡೆ ಅಳವಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಸುಮಾರು ₹ 50 ಲಕ್ಷ ವೆಚ್ಚದಲ್ಲಿ ಮಹಾನಗರ ಪಾಲಿಕೆಯ ಇಂದಿರಾ ಕ್ಯಾಂಟೀನ್ ಎಸ್‌ವಿಪಿ ವೃತ್ತ ಹಾಗೂ ಸೂಪರ್ ಮಾರ್ಕೆಟ್ ಬಳಿ ಈ ಎಲ್‌ಇಡಿ ಪರದೆಯನ್ನು ಶೀಘ್ರವೇ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.