ಕಲಬುರಗಿ: ‘ವಕ್ಫ್ ಹಠಾವೋ, ಅನ್ನದಾತ ಬಚಾವೋ’ ಎಂದು ಒತ್ತಾಯಿಸಿ ನಗರದ ಜಗತ್ ವೃತ್ತದಲ್ಲಿ ಆರಂಭಿಸಿರುವ ಪ್ರತಿಭಟನೆ ಎರಡನೇ ದಿನವಾದ ಶುಕ್ರವಾರವೂ ಮುಂದುವರಿದಿದೆ.
ನೇಗಿಲ ಯೋಗಿ ಸ್ವಾಭಿಮಾನಿ ವೇದಿಕೆಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮೀಜಿ, ಚಿಂಚೋಳಿ ಶಾಸಕ ಅವಿನಾಶ ಜಾಧವ, ವಿವಿಧ ರೈತ ಮುಖಂಡರು ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ದತ್ತಪ್ಪಯ್ಯ ಸ್ವಾಮೀಜಿ, 'ರಾಜ್ಯದಲ್ಲಿ ವಕ್ಫ್ ರೋಗ ಹೊಕ್ಕಿದೆ. ಮಠ ಮಾನ್ಯಗಳಿಗೆ ನಿಜಾಮ್, ಆದಿಲ್ ಶಾಹಿಗಳು, ರಾಜ-ಮಹಾರಾಜರು ಸಾವಿರಾರು ಎಕರೆ ಜಮೀನು ಇನಾಮು, ದಾನ ನೀಡಿ ಹೋಗಿದ್ದಾರೆ. ಅವರ ಹೆಸರೂ ಎಲ್ಲಿಯೂ ಇಲ್ಲ. ಆದರೆ, ಈಗ ನಡುವಿನವರು ಬಂದು ಹೊಕ್ಕಿ ತಮ್ಮ ಹೆಸರು ಸೇರಿಸಿಕೊಂಡು ಬಿಟ್ಟಿದ್ದಾರೆ. ನಡುವೆ ಬಂದವರು ನಡುವೆಯೇ ಹೋಗುತ್ತಾರೆ' ಎಂದು ವಕ್ಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಂಚೋಳಿ ಶಾಸಕ ಅವಿನಾಶ ಜಾಧವ ಮಾತನಾಡಿ, ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರ ರೈತ. ದೇಶ ಹಾಗೂ ಧರ್ಮದ ಪರವಾಗಿರಬೇಕು. ಆದರೆ ಈಗಿನ ರಾಜ್ಯ ಸರ್ಕಾರ ರೈತ ಹಾಗೂ ಬಡವರ ವಿರೋಧಿಯಾಗಿದೆ' ಎಂದು ಟೀಕಿಸಿದರು.
ಕೆ.ಕೆ.ಆರ್.ಡಿ.ಬಿ. ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ,' ವಕ್ಫ ವಿರುದ್ಧ ನಡೆಸುತ್ತಿರುವ ಹೋರಾಟ ಐತಿಹಾಸಿಕ. ಇಡೀ ರಾಜ್ಯದಲ್ಲಿ ಕರಾಳ ಕಾನೂನಿನ ಮೂಲಕ ರಾಜ್ಯ ಸರ್ಕಾರ ರೈತರ, ಮಠಮಾನ್ಯಗಳ ಭೂಮಿಯ ಪಹಣಿಯಲ್ಲಿ ಸೇರಿಸುತ್ತಿದೆ. ಇದರ ವಿರುದ್ಧ ನಾವೆಲ್ಲ ಹೋರಾಟ ಮಾಡಬೇಕಿದೆ. ಈ ಸತ್ಯಾಗ್ರಹಕ್ಕೆ ಸರ್ಕಾರ ಸ್ಪಂದಿಸುತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಈ ಸರ್ಕಾರದ ಚರ್ಮ ದಪ್ಪವಾಗಿದೆ. ಹೀಗಾಗಿ ನಮ್ಮ ಹೋರಾಟಕ್ಕೆ ಬೆಲೆ ಕೊಡುತ್ತೋ ಇಲ್ಲವೋ ಗೊತ್ತಿಲ್ಲ. ರೈತರ ಪಹಣಿಗಳಿಂದ ವಕ್ಫ್ ಹೆಸರು ತೆಗೆಯುವ ತನಕ ಹೋರಾಟ ಮುಂದುವರಿಸಬೇಕು' ಎಂದರು.
'ಬಡವ ರೈತನ ಕಣ್ಣೀರು ಒರೆಸುವ ಸರ್ಕಾರ ಎಲೈತಿ? ಬೆಂಚಿನ ಕೆಳಗೆ ಲಂಚ ಕೇಳುವ ಜನರೇ ಹೆಚ್ಚೈತಿ. ರೈತನು ಬದುಕುವುದು ಕಷ್ಟ ಐತಿ' ಸೇರಿದಂತೆ ರೈತರ ಪರವಾದ ಹಾಡುಗಳು ಮೊಳಗಿಸಿ ಆಕ್ರೋಶ ಸರ್ಕಾರ, ವಕ್ಫ್ ವಿರುದ್ಧ ವ್ಯಕ್ತಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.