ADVERTISEMENT

ಕಲಬುರಗಿ: ಬಾಲ ಗರ್ಭಿಣಿಯರು 745- ಪ್ರಕರಣ ಶೂನ್ಯ

ಇಲಾಖೆಗಳ ನಡುವೆ ಸಮನ್ವಯದ ಕೊರತೆ: ಸ್ಥಳೀಯರ ಕಿರಿಕಿರಿಗೆ ದೂರು ಕೊಡಲು ವೈದ್ಯರು ಹಿಂದೇಟು

ಮಲ್ಲಿಕಾರ್ಜುನ ನಾಲವಾರ
Published 12 ಅಕ್ಟೋಬರ್ 2023, 21:47 IST
Last Updated 12 ಅಕ್ಟೋಬರ್ 2023, 21:47 IST
   

ಕಲಬುರಗಿ: ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್‌) ಇಲಾಖೆಯ ಜಿಲ್ಲಾ ಪೋರ್ಟಲ್ ಅನ್ವಯ ಕಳೆದ ಎರಡೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ 745 ಬಾಲಕಿಯರು ಗರ್ಭಿಣಿಯರಾಗಿದ್ದು, ಈ ಸಂಬಂಧ ಒಂದೂ ಪ್ರಕರಣ ‘ಪೋಕ್ಸೊ’ ಅಡಿ ದಾಖಲಾಗಿಲ್ಲ.

ಆರ್‌ಸಿಎಚ್‌ಒ ನೀಡಿದ ಮಾಹಿತಿ ಪ್ರಕಾರ 2021–23ರಲ್ಲಿ 119, 2022–23ರಲ್ಲಿ 480 ಹಾಗೂ 2023ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 146 ಸೇರಿ ಒಟ್ಟು 745 ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಆದರೆ, ಆರ್‌ಸಿಎಚ್‌ಒ ಅಧಿಕಾರಿಗಳು ನಿಯಮಿತವಾಗಿ ಬಾಲ ಗರ್ಭಿಣಿಯರ ವರದಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡುತ್ತಿಲ್ಲ. ಕೆಲವು ವಾರಗಳ ಹಿಂದೆಯಷ್ಟೇ ವರದಿ ನೀಡಿದೆ.

‘ಆಶಾ ಕಾರ್ಯಕರ್ತೆಯರ ಮೂಲಕ ತಾಯಿ ಕಾರ್ಡ್ ನೋಂದಾಯಿಸಿ, ಗರ್ಭಿಣಿಯರ ಮಾಹಿತಿ ಕಲೆಹಾಕಲಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿನ ಜನ್ಮ ದಿನಾಂಕವನ್ನು ನೋಡಿ ವಯಸ್ಸು ಪತ್ತೆ ಹಚ್ಚಲಾಗುತ್ತದೆ. ಬಾಲ ಗರ್ಭಿಣಿಯರ ಮಾಹಿತಿಯ ವರದಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗುತ್ತದೆ’ ಎಂದು ಆರ್‌ಸಿಎಚ್‌ಒ ಡಾ. ಶರಣಬಸಪ್ಪ ಕ್ಯಾತನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಾನು ಈಚೆಗೆ ಆರ್‌ಸಿಎಚ್‌ಒ ಆಗಿ ಬಂದಿದ್ದು, ಈಗಾಗಲೇ ಮಾಹಿತಿಯನ್ನು ನೀಡಿದ್ದೇನೆ. ಈ ಬಗ್ಗೆ ಚರ್ಚೆಯೂ ಆಗಿದ್ದು, ಸಂಬಂಧಪಟ್ಟ ವೈದ್ಯಾಧಿಕಾರಿಗಳು ಮಾಹಿತಿ ಕೊಟ್ಟ ಕೂಡಲೇ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಆದರೆ, ದೂರು ಕೊಟ್ಟರೆ ಸ್ಥಳೀಯರು ಕಿರಿಕಿರಿ ಕೊಡಬಹುದು ಎಂಬ ಆತಂಕದಿಂದ ನಮ್ಮ ವೈದ್ಯರು ಹೆದರುತ್ತಿದ್ದಾರೆ’ ಎಂದರು.

25 ದಿನಗಳ ಹಿಂದೆ ವರದಿ ಸಲ್ಲಿಕೆ: ‘ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಸುಮಾರು 25 ದಿನಗಳ ಹಿಂದೆಯಷ್ಟೇ ಬಾಲ ಗರ್ಭಿಣಿಯರ ವರದಿ ಕೊಟ್ಟಿದ್ದಾರೆ. ಯಾವ ಆಧಾರದ ಮೇಲೆ ಅವರನ್ನು ವಯಸ್ಕರಲ್ಲವೆಂದು ಗುರುತಿಸಿದ್ದೀರಾ ಎಂದು ಮಾಹಿತಿ ಕೇಳಿ ಪತ್ರ ಬರೆದಿದ್ದರೂ ಇದುವರೆಗೂ ಪ್ರತ್ಯುತ್ತರ ಬಂದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಸೌಭಾಗ್ಯ ಹೇಳಿದರು.

‘ಬಾಲಕಿಯರು ಗರ್ಭಿಣಿಯರಾದ ಪ್ರಕರಣ ಇದ್ದರೆ ಬಾಲಕಿಯ ಜನ್ಮ ದಿನಾಂಕವನ್ನು ಆಕೆಯ ಜನನ ಪ್ರಮಾಣ ಪತ್ರ ಅಥವಾ ವೈದ್ಯಕೀಯ ಪ್ರಮಾಣ ಪತ್ರ ಅಥವಾ ಶಾಲಾ ದಾಖಲಾತಿಯನ್ನು ನೋಡಿ ದೃಢಪಡಿಸಿಕೊಳ್ಳಬೇಕಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿನ ಜನ್ಮದಿನಾಂಕ ನಮೂದಿಸಿದರೆ ಪರಿಗಣನೆಗೆ ತೆಗೆದುಕೊಳ್ಳಲು ಬರುವುದಿಲ್ಲ. ನಾವು ಇದುವರೆಗೂ ಜನ್ಮ ದಿನಾಂಕ ದೃಢೀಕರಣ ಪರಿಶೀಲನೆಗೆ ಹೋಗಿಲ್ಲ. ಹೋದಾಗ, ಕುಟುಂಬಸ್ಥರ ಪ್ರತಿಕ್ರಿಯೆ ಹೇಗಿರುತ್ತದೋ ಗೊತ್ತಿಲ್ಲ’ ಎಂದರು.

‘ಬಾಲಕಿ ಗರ್ಭಿಣಿಯಾಗಿದ್ದು ದೃಢಪಟ್ಟರೆ ಆಕೆಯ ಪತಿ, ದಂಪತಿಯ ತಾಯಿ–ತಂದೆ, ಮದುವೆಗೆ ಕಾರಣರಾದ ಸಂಬಂಧಿಕರ ವಿರುದ್ಧವೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗುತ್ತದೆ’ ಎನ್ನುತ್ತಾರೆ ವಕೀಲ ಎಲ್‌.ಎನ್‌ ಅಶೋಕ ಕುಮಾರ.

‘ವರ್ಷದಿಂದ ವರ್ಷಕ್ಕೆ ಬಾಲ ಗರ್ಭಧಾರಣೆ ದ್ವಿಗುಣಗೊಳ್ಳುತ್ತಿದೆ ಎಂಬುದು ಆರ್‌ಸಿಎಚ್‌ಒ ನೀಡಿದ ಅಂಕಿಅಂಶಗಳಿಂದ ಬಹಿರಂಗವಾಗಿದೆ. ಈ ದತ್ತಾಂಶವು ಬಾಲ್ಯವಿವಾಹ ಹೆಚ್ಚಳ ಹಾಗೂ ಅದನ್ನು ತಡೆಯಬೇಕಾದ ಇಲಾಖೆಗಳ ನಡುವಣ ಸಮನ್ವಯದ ಕೊರತೆ ಸೂಚಿಸುತ್ತದೆ’ ಎನ್ನುತ್ತಾರೆ ಮಹಿಳಾಪರ ಹೋರಾಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.