ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ಆಹಾರವಾದ ರೊಟ್ಟಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಮುಂದಾಗಿದ್ದು, ‘ಕಲಬುರಗಿ ರೊಟ್ಟಿ’ ಬ್ರ್ಯಾಂಡ್ ಮಾಡುವ ಮೂಲಕ ಜಿಲ್ಲೆಯಲ್ಲಿ ತಯಾರಾಗುವ ರೊಟ್ಟಿಯನ್ನು ದೇಶದ ಪ್ರಮುಖ ನಗರಗಳಿಗೆ ಕಳುಹಿಸಿಕೊಡುವ ಯತ್ನಕ್ಕೆ ಸ್ಪಂದನೆ ದೊರೆಯುತ್ತಿದೆ.
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ಮಾಲ್ದಂಡಿ ತಳಿಯ ಉತ್ಕೃಷ್ಟ ಗುಣಮಟ್ಟದ ಬಿಳಿಜೋಳದಿಂದ ರೊಟ್ಟಿ ತಯಾರಿಸಿ ರಫ್ತು ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ರೊಟ್ಟಿ ತಯಾರಿಕರಿಗೆ 100 ಯಂತ್ರಗಳನ್ನು ನೀಡಿದ್ದು, ಪ್ರತಿನಿತ್ಯ ಸಾವಿರಾರು ರೊಟ್ಟಿಗಳು ಬೆಂಗಳೂರಿನ ವಿವಿಧ ಹೋಟೆಲ್‌ಗಳಿಗೆ ಹೋಗುತ್ತಿವೆ. ರೊಟ್ಟಿ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲು ಜಿಲ್ಲಾಡಳಿತವು ಆನ್‌ಲೈನ್ ಮಾರಾಟ ತಾಣಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್‌ನೊಂದಿಗೆ ಸಂಪರ್ಕ ಸಾಧಿಸುವ ಯತ್ನ ನಡೆಸಿದ್ದು, ಕೆಲವೇ ದಿನಗಳಲ್ಲಿ ಆನ್‌ಲೈನ್ ಮೂಲಕವೂ ರೊಟ್ಟಿ ಖರೀದಿಸಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
‘ಸಕ್ಷಮ ಪ್ರಾಧಿಕಾರಗಳಿಂದ ರೊಟ್ಟಿಗೆ ಗುಣಮಟ್ಟ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಅಗತ್ಯವಿರುವ ನೋಂದಣಿಯನ್ನೂ ಮಾಡಿಸಲಾಗುತ್ತಿದೆ. ಕಲಬುರಗಿ ರೊಟ್ಟಿ ವೆಬ್‌ಸೈಟ್ ಗಮನಿಸಿ ನ್ಯೂಜಿಲೆಂಡ್‌ನಿಂದಲೂ ಮಾಹಿತಿ ಪಡೆದಿದ್ದಾರೆ’ ಎನ್ನುತ್ತಾರೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ರೊಟ್ಟಿಯನ್ನು ಆರ್ಡರ್ ಮಾಡಬಹುದಾಗಿದ್ದು, ಜಿಲ್ಲೆಯಲ್ಲಿ ಆರಂಭವಾಗಿರುವ ರೊಟ್ಟಿ ಉತ್ಪಾದಕರ ಸಂಘದಿಂದ ಜೋಳ, ಸಜ್ಜೆ ರೊಟ್ಟಿ ಹಾಗೂ ದಪಾಟಿಗಳನ್ನು ಖರೀದಿಸುವ ಕುರಿತಂತೆ ಕಲಬುರಗಿಯ ಹೋಟೆಲ್ ಮಾಲೀಕರ ಸಂಘ, ಸಪ್ತಗಿರಿ ಫುಡ್ ಪ್ರೊಡಕ್ಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಳೆದ ಮಾರ್ಚ್ 13ರಂದು ನಗರದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘ಕಲಬುರಗಿ ರೊಟ್ಟಿ’ಯನ್ನು ಬಿಡುಗಡೆ ಮಾಡಿದ್ದರು.
ಕಲಬುರಗಿ ರೊಟ್ಟಿಯನ್ನು ಆನ್‌ಲೈನ್ ಮೂಲಕ ಆಸಕ್ತ ಗ್ರಾಹಕರಿಗೆ ಪೂರೈಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು ನಾಸ್ಕಾಮ್ ಈ ವಿಚಾರದಲ್ಲಿ ಸಹಾಯ ಮಾಡಲಿದೆಫೌಜಿಯಾ ತರನ್ನುಮ್ ಬಿ. ಕಲಬುರಗಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.