ADVERTISEMENT

ಶಖಾಪುರ: ರೊಟ್ಟಿ ಜಾತ್ರೆ ಅ.22ರಂದು

ಸಿದ್ಧರಾಮ ಶಿವಯೋಗಿಗಳ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:45 IST
Last Updated 20 ಅಕ್ಟೋಬರ್ 2024, 7:45 IST
ಜೇವರ್ಗಿ : ಶಖಾಪುರ ಎಸ್.ಎ ತಪೋವನ ಮಠದಲ್ಲಿ ಲಿಂ. ಸಿದ್ಧರಾಮ ಶಿವಯೋಗಿಗಳ ಪುಣ್ಯಾರಾಧನೆ ನಿಮಿತ್ತ ಸಿದ್ಧಪಡಿಸಿದ ಸಜ್ಜಿ ಮತ್ತು ಜೋಳದ ರೊಟ್ಟಿಗಳನ್ನು ಪೀಠಾಧಿಪತಿ ಡಾ.ಸಿದ್ಧರಾಮ ಶಿವಾಚಾರ್ಯರು ವಿಕ್ಷೀಸಿದರು.
ಜೇವರ್ಗಿ : ಶಖಾಪುರ ಎಸ್.ಎ ತಪೋವನ ಮಠದಲ್ಲಿ ಲಿಂ. ಸಿದ್ಧರಾಮ ಶಿವಯೋಗಿಗಳ ಪುಣ್ಯಾರಾಧನೆ ನಿಮಿತ್ತ ಸಿದ್ಧಪಡಿಸಿದ ಸಜ್ಜಿ ಮತ್ತು ಜೋಳದ ರೊಟ್ಟಿಗಳನ್ನು ಪೀಠಾಧಿಪತಿ ಡಾ.ಸಿದ್ಧರಾಮ ಶಿವಾಚಾರ್ಯರು ವಿಕ್ಷೀಸಿದರು.   

ಜೇವರ್ಗಿ: ತಾಲ್ಲೂಕಿನ ಶಖಾಪುರ ಎಸ್.ಎ. ಗ್ರಾಮದ ವಿಶ್ವಾರಾಧ್ಯ ತಪೋವನ ಮಠದ ಸಿದ್ಧರಾಮ ಶಿವಯೋಗಿಗಳ 74ನೇ ಪುಣ್ಯಾರಾಧನೆ ಹಾಗೂ ಧಾರ್ಮಿಕ ಸಭೆ ಅ.22ರಂದು ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಮಠದ ಪೀಠಾಧಿಪತಿ ಸಿದ್ಧರಾಮ ಶಿವಾಚಾರ್ಯರು ಹೇಳಿದ್ದಾರೆ.

ಪುಣ್ಯಾರಾಧನೆ ನಿಮಿತ್ತ ಶ್ರೀಮಠದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ‘ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಪ್ರಸಾದಕ್ಕೆ 50 ಕ್ವಿಂಟಲ್ ಜೋಳ ಮತ್ತು ಸಜ್ಜಿ ರೊಟ್ಟಿಗಳನ್ನು ತಯಾರಿಸಲಾಗುತ್ತಿದೆ. ಸುಮಾರು 20 ಕ್ವಿಂಟಲ್‌ ವಿವಿಧ ಧಾನ್ಯ ಹಾಗೂ ತರಕಾರಿಗಳಿಂದ ಭಜ್ಜಿ, ಪಲ್ಯ ಸಿದ್ಧಪಡಿಸಲಾಗುತ್ತಿದೆ. ಸಹಸ್ರಾರು ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಮಠದಲ್ಲಿ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪುಣ್ಯರಾಧನೆ ನಿಮಿತ್ತ ಮಂಗಳವಾರ ಬೆಳಿಗ್ಗೆ 6ಕ್ಕೆ ಸಿದ್ಧರಾಮ ಶಿವಯೋಗಿಗಳ ಕತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ರುದ್ರಾಭಿಷೇಕ ಜರುಗಲಿದೆ. ಸಂಜೆ 5 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ.

ರಾತ್ರಿ 8 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ಸೊನ್ನ ಶ್ರೀ, ಪಾಳಾ ಶ್ರೀ, ಗಡಿಗೌಡಗಾಂವ ಶ್ರೀ, ಆಂದೋಲಾ ಶ್ರೀ, ನೆಲೋಗಿ ಶ್ರೀ, ವೆಂಕಟಬೇನೂರ ಶ್ರೀ, ಕೂಳೆಕುಮಟಗಿ ಶ್ರೀ, ಹಿರೇನಾಗಾಂವ ಶ್ರೀ, ಸೇರಿದಂತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಶಾಸಕ ಡಾ.ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಾಜಕುಮಾರ ಪಾಟೀಲ ತೆಲ್ಕೂರ, ಕೇದಾರಲಿಂಗಯ್ಯ ಹಿರೇಮಠ, ಶಿವರಾಜ ಪಾಟೀಲ ರದ್ದೇವಾಡಗಿ, ರಮೇಶಬಾಬು ವಕೀಲ, ಬಾಲರಾಜ ಗುತ್ತೆದಾರ, ರಾಜಶೇಖರ ಸೀರಿ, ಮಲ್ಲಿನಾಥಗೌಡ ಯಲಗೋಡ, ಸಿದ್ದು ಸಾಹೂ ಅಂಗಡಿ, ಕಾಶಿರಾಯಗೌಡ ಯಲಗೋಡ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ADVERTISEMENT

ಚನ್ನಮಲ್ಲಯ್ಯ ಹಿರೇಮಠ, ಪಿ.ಎಂ. ಮಠ, ಕಲ್ಯಾಣಕುಮಾರ ಸಂಗಾವಿ, ದೊಡ್ಡಪ್ಪ ದೇಸಾಯಿ, ಚಂದ್ರಶೇಖರ ಗುಡೂರ, ಮಧ್ದುವೀರಯ್ಯ ಸ್ಥಾವರಮಠ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.