ADVERTISEMENT

‘ಭಕ್ತಿಪ್ರಧಾನ ನಾಟಕದಿಂದ ಸೇಡಂಗೆ ಕೀರ್ತಿ’

ಸೇಡಂ: ಕಲಾವಿದರಿಗೆ ವಿಶೇಷ ಸನ್ಮಾನ

​ಪ್ರಜಾವಾಣಿ ವಾರ್ತೆ
Published 30 ಮೇ 2024, 7:01 IST
Last Updated 30 ಮೇ 2024, 7:01 IST
ಸೇಡಂನಲ್ಲಿ ಬುಧವಾರ ಹಾಲಪ್ಪಯ್ಯ ವಿರಕ್ತ ಮಠದಿಂದ ಕಲಾವಿದರಿಗೆ ಹಾಲಪ್ಪಯ್ಯ ಶ್ರೀ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು
ಸೇಡಂನಲ್ಲಿ ಬುಧವಾರ ಹಾಲಪ್ಪಯ್ಯ ವಿರಕ್ತ ಮಠದಿಂದ ಕಲಾವಿದರಿಗೆ ಹಾಲಪ್ಪಯ್ಯ ಶ್ರೀ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಸೇಡಂ: ‘ಕಲೆ ಎಲ್ಲರಿಗೂ ಒಲಿಯೋದಿಲ್ಲ. ಅದಕ್ಕೆ ನಿರಂತರ ಪರಿಶ್ರಮದ ಜೊತೆಗೆ ಕಲೆ ಬೇಕು. ಇಂತಹ ಕಲೆಯನ್ನು ಸೇಡಂ ಕಲಾವಿದರು ಭಕ್ತಿ ಪ್ರಧಾನ ನಾಟಕದ ಮೂಲಕ ಸೇಡಂಗೆ ಕೀರ್ತಿ ತಂದಿದ್ದಾರೆ’ ಎಂದು ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದಲ್ಲಿ ಬುಧವಾರ ನಡೆದ ಹಾಲಪ್ಪಯ್ಯ ಶ್ರೀ ಕಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸೇಡಂನಿಂದ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳುತ್ತಿರುವುದು ಕಲೆ, ಜ್ಞಾನ ಮತ್ತು ಭಕ್ತಿಗೆ ಸಾಕ್ಷಿಯಾಗಿದೆ. ಇದರಿಂದ ಹಿರಿಯ ಕಲಾವಿದರಿಂದ ಕಿರಿಯರಿಗೆ ಮಾರ್ಗದರ್ಶನ ನೀಡುವ ಪರಂಪರೆ ಬೆಳೆಯುತ್ತಿದೆ’ ಎಂದರು.

ADVERTISEMENT

ಕಲಾವಿದ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿ, ‘ಭಕ್ತಿ ಪ್ರಧಾನ ನಾಟಕ ಪ್ರದರ್ಶನದಿಂದ ಇತಿಹಾಸ ಮತ್ತು ನೆಲದ ಮಹತ್ವ ಅರಿಯಲು ಸಾಧ್ಯ. ಇದಕ್ಕೆ ಮಾಲೀಕ, ಕಲಾವಿದ, ಸಾಹಿತಿ, ಪ್ರೇಕ್ಷಕರ ಸಹಕಾರ ತುಂಬಾ ಅವಶ್ಯಕ’ ಎಂದರು.

ನಾಟಕ ಮಾಲೀಕ ರಮೇಶ ಮಾಲಪಾಣಿ ಮಾತನಾಡಿ, ‘ಕಲಾವಿದರೇ ನಾಟಕಕ್ಕೆ ಜೀವಾಳ. ಅವರ ಸಹಕಾರದಿಂದ ನಾಟಕ ಯಶಸ್ವಿಯಾಗಿದೆ’ ಎಂದರು.

ವೀರೇಶ ಹೂಗಾರ, ಬಸವರಾಜ ಕೋಸಗಿ, ಬಸವರಾಜ ಹೊಸ್ಮನಿ, ಸಿದ್ದಪ್ಪ ತಳ್ಳಳ್ಳಿ, ಬಸವರಾಜ ಬಾಳಿ, ಬಸವರಾಜ ಬಂಡಾ, ಶಿವಕುಮಾರ ನಿಡಗುಂದಾ, ಸಂಗಮೇಶ ಅವಂಟಿ, ಶಿವಶರಣಪ್ಪ ಚಂದನಕೇರಿ, ರೇವಣಸಿದ್ದಪ್ಪ ನೀಲಿ, ಮಲ್ಲಿಕಾರ್ಜುನ ದಿಗ್ಗಾಂವ, ನಾಗರಾಜ ಬಾಳಿ ಹಾಜರಿದ್ದರು. ಸಿದ್ದಯ್ಯಸ್ವಾಮಿ ಆಡಕಿ ನಿರೂಪಿಸಿದರು. ಸುಧೀರ ಬಿರಾದಾರ ವಂದಿಸಿದರು.


ಹಾಲಪ್ಪಯ್ಯ ಶ್ರೀ ಕಲಾ ಪ್ರಶಸ್ತಿ ಪ್ರದಾನ: ಕಲಾವಿದರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಮಹಿಪಾಲರೆಡ್ಡಿ ಮುನ್ನೂರು, ಪ್ರಭಾಕರ ಜೋಶಿ, ಸುನೀಲ ನಿರ್ಣಿ, ಶರಣಪ್ಪ ಹೂಗಾರ ಮತ್ತು ವೀರಯ್ಯಸ್ವಾಮಿ ಮಠಪತಿ ಅವರಿಗೆ ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಅವರು ಹಾಲಪ್ಪಯ್ಯ ಶ್ರೀ ಕಲಾ ಪ್ರಶಸ್ತಿಯನ್ನು ನೀಡಿದರು. ನಂತರ ಕಲಾವಿದರಿಂದ ಅನಿಸಿಕೆ ಮತ್ತು ನಾಟಕದ ಪಾತ್ರದ ತುಣುಕಿನ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.