ಕಲಬುರಗಿ: ‘ಕಚೇರಿಯಲ್ಲಿ ಕುಳಿತವರಿಗೆ ಜನರು ಎದುರಿಸುತ್ತಿರುವ ಸಮಸ್ಯೆಗಳು ಕಾಣಿಸುವುದಿಲ್ಲ. ಜನರ ಬಳಿಗೆ ಹೋದಾಗ ಬೈಸಿಕೊಳ್ಳುವವರು ನಾವು. ಸ್ವಲ್ಪ ನಮ್ಮ ಮರ್ಯಾದೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ಕಲಬುರಗಿ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯಲ್ಲಿ ಅವರು ಮಾತನಾಡಿದರು.
‘ಹಳೇ ಜೇವರ್ಗಿ ರಸ್ತೆಯಲ್ಲಿ 6 ಅಡಿ ಗುಂಡಿ ತೋಡಿ ಬ್ಯಾರಿಕೇಡ್ ಹಾಕದ ಕಾರಣಕ್ಕೆ ಅಮಾಯಕ ವ್ಯಕ್ತಿಯೊಬ್ಬರು ಮೃತಪಟ್ಟರು. ವ್ಯಕ್ತಿ ಸತ್ತ ಮೇಲೂ ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್ ಬರಲಿಲ್ಲ. ಪರವಾನಗಿ ಪಡೆದು ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ’ ಎಂದು ಕಿಡಿಕಾರಿದರು.
‘ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಲಭ್ಯ ಇರುವ ನೀರಿನ ಮೂಲಗಳಿಗೆ ಪೈಪ್‌ಲೈನ್ ಜೋಡಣೆ ಮಾಡಿ, ಸಾರ್ವಜನಿಕರಿಗೆ ಪೂರೈಕೆ ಮಾಡಬೇಕು. ಗುತ್ತಿಗೆದಾರರಿಂದ ಹಸ್ತಾಂತರ ಮಾಡಿಕೊಳ್ಳುವ ಮುನ್ನ ಪ್ರತಿ ನಲ್ಲಿಗಳಲ್ಲಿ ನೀರಿನ ಪೂರೈಕೆ ಸಮರ್ಪಕವಾಗಿ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏನಾದರೂ ಸಮಸ್ಯೆಯಾದರೆ ಜನರು ನಮ್ಮನ್ನು ಬೈಯುತ್ತಾರೆ, ನಿಮ್ಮನ್ನು ಅಲ್ಲ’ ಎಂದರು.
ಶಾಸಕರ ಸೂಚನೆ ನಿರ್ಲಕ್ಷ್ಯ: ‘ಕೆರೆ ಬೋಸಗಾ ಗ್ರಾಮದ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಈ ಹಿಂದಿನ ಸಭೆಯಲ್ಲಿ ಸೂಚಿಸಿದ್ದೆ. ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲವೇ’ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಹಳೇ ಅಂಗನವಾಡಿ ಕಟ್ಟಡದ ಗೋಡೆಗೆ ತಾಗಿಕೊಂಡೇ ಬೇರೊಂದು ಕಟ್ಟಡ ಕಟ್ಟಲಾಗಿದೆ. ಅದನ್ನು ಕೆಡವಿದರೆ ಹೊಸ ಕಟ್ಟಡವೂ ಬೀಳುತ್ತದೆ’ ಎಂದರು.
ಸಿಟ್ಟಿನಿಂದ ಶಾಸಕರು, ‘ಹಿಂದಿನ ಸಭೆಯಲ್ಲಿ ಹೇಳಿದ್ದನ್ನೇ ಮತ್ತೆ ಪ್ರಸ್ತಾಪಿಸುತ್ತಿದ್ದೀಯಾ? ಎಷ್ಟು ಬಾರಿ ಹೇಳುವೆ?’ ಎಂದು ಗದರಿಸಿದರು.
ಗ್ರಾಮ ವಿಕಾಸ ಯೋಜನೆಯಡಿ ಪಾಣೆಗಾಂವ ಗ್ರಾಮಕ್ಕೆ ಮಂಜೂರಾದ ₹ 1 ಕೋಟಿ ಪೈಕಿ ₹ 50 ಲಕ್ಷ ಖರ್ಚಾಗದೆ 5 ವರ್ಷಗಳಿಂದ ಹಾಗೆಯೇ ಬಿದ್ದಿದೆ. ವಿಳಂಬ ಧೋರಣೆ ಅನುಸರಿಸುತ್ತಿರುವ ಗುತ್ತಿಗೆದಾರರನ್ನು ಬದಲಾಯಿಸಿ ಅನುದಾನ ಖರ್ಚು ಮಾಡಿಸುವಂತೆ ತಹಶೀಲ್ದಾರ್‌ಗೆ ಶಾಸಕರು ಸೂಚಿಸಿದರು.
ಪರಿಹಾರದ ಮಾಹಿತಿಯೇ ಇಲ್ಲ: ‘ಮಳೆಯಿಂದ ತೋಟಗಾರಿಕೆ ಬೆಳೆ ಕಳೆದುಕೊಂಡ ರೈತರಿಗೆ ನಯಾಪೈಸೆಯೂ ಪರಿಹಾರ ಹೋಗಿಲ. ಹಡಗಿಲ ಹಾರುತಿ, ಪಟ್ಟಣ, ಶರಣ ಸಿರಸಗಿಯ ಹಲವೆಡೆ ಬಾಳೆ ಗಿಡಗಳು ನೆಲಕ್ಕುರುಳಿವೆ. ತೋಟಗಾರಿಕಾ ಅಧಿಕಾರಿಗಳು ಏನು ಮಾಡಿತ್ತಿದ್ದೀರಾ’ ಎಂದು ಶಾಸಕರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಹಾನಿಯಾದ ಬೆಳೆಗಳ ಸಮೀಕ್ಷೆ ಮಾಡಿ ವರದಿ ಸಲ್ಲಿಸಲಾಗಿದೆ. ನಿಯಮಗಳ ಅನ್ವಯ ಪರಿಹಾರ ನೀಡಲಾಗುತ್ತದೆ’ ಎಂದರು. ಹಾಗಿದ್ದರೆ ಎಷ್ಟು ರೈತರಿಗೆ ಪರಿಹಾರ ಸಿಕ್ಕಿದೆ ಪಾವತಿ ರಸೀದಿ ತೋರಿಸುವಂತೆ ಶಾಸಕರು ಕೇಳಿದರು. ‘40 ರೈತರಿಗೆ ಬಂದಿದೆ, ರಸೀದಿ ತಂದಿಲ್ಲ’ ಎಂದು ಅಧಿಕಾರಿ ಜಾರಿಕೊಂಡರು. ರಸೀದಿ ತಂದು ತೋರಿಸುವಂತೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಆನಂದಶೀಲ, ಇಒ ಸೈಯದ್ ಪಟೇಲ್, ‘ಕುಡಾ’ ಆಯುಕ್ತ (ಪ್ರಭಾರ) ಶೈಲೇಂದ್ರ ಸಿಂಗ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನೀಡಿದ ಶಾಸಕ ಸರಿಯಾಗಿ ಕೆಲಸ ಮಾಡದೆ ವರ್ಗಾವಣೆಗೊಂಡ ಪಂಚಾಯತ್ ರಾಜ್ ಇಲಾಖೆಯ ವಿಜಯಕುಮಾರ ರಾಠೋಡ ಅವರು ಕೋರ್ಟ್ ಮೊರೆ ಹೋಗಿ ಮತ್ತೆ ವಾಪಸ್ ಬಂದಿದ್ದಾರೆ. ಇಂತಹವರ ಬಗ್ಗೆ ಕ್ರಮ ತೆಗೆದುಕೊಳ್ಳವಂತೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಫೋನ್ ಮಾಡಿ ಕೋರಿದರು. ವಿಜಯಕುಮಾರ ಅವರ ಕೈರ್ಯ ವೈಖರಿ ಬಗ್ಗೆ ಸಚಿವರಿಗೆ ಪತ್ರ ಬರೆಯುವಂತೆಯೂ ಆಪ್ತ ಸಹಾಯಕನಿಗೆ ಶಾಸಕರು ಸೂಚಿಸಿದರು.
ಶಾಸಕರು ಇಲಾಖೆವಾರು ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯುತ್ತಿದ್ದರೆ ಮುಂಭಾಗದ ಆಸನಗಳಲ್ಲಿ ಕುಳಿತ ಕೆಲವು ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದು ಕಂಡುಬಂತು. ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಯೊಬ್ಬರು ನಿದ್ರೆಗೆ ಜಾರಿದರು. ಮತ್ತೆ ಕೆಲವರು ಮೊಬೈಲ್‌ನಲ್ಲಿ ಮಾತಾಡುತ್ತಾ ವಿಡಿಯೊಗಳ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದರು. ಹಲವರು ಗುಸು ಗುಸು ಮಾತನಾಡುತ್ತಿರುವುದು ಕೇಳಿಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.