ADVERTISEMENT

ಕಲಬುರಗಿ: ನ್ಯಾಕ್‌ನಲ್ಲಿ ಕಡಿಮೆ ಶ್ರೇಯಾಂಕ ದಾಖಲಿಸಿದ ಕೇಂದ್ರೀಯ ವಿಶ್ವವಿದ್ಯಾಲಯ

2016ರಲ್ಲಿ ಬಿ++ ದಾಖಲಿಸಿದ್ದ ಸಿಯುಕೆಗೆ ಈಗ ಬರೀ ಬಿ+, ನೆರೆಯ ವಿ.ವಿ.ಗಳಿಗೆ ಉತ್ತಮ ಶ್ರೇಯಾಂಕ

ಮನೋಜ ಕುಮಾರ್ ಗುದ್ದಿ
Published 27 ಅಕ್ಟೋಬರ್ 2024, 4:25 IST
Last Updated 27 ಅಕ್ಟೋಬರ್ 2024, 4:25 IST
ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ   

ಕಲಬುರಗಿ: ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯ ಎನಿಸಿರುವ ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕಳೆದ ಬಾರಿಗಿಂತ ರಾಷ್ಟೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ನೀಡುವ ಶ್ರೇಣೀಕರಣದಲ್ಲಿ ಕೆಳಮಟ್ಟಕ್ಕೆ ಇಳಿದಿದೆ. 

2016ರಲ್ಲಿ ದಿ. ಎಚ್‌.ಎಂ. ಮಹೇಶ್ವರಯ್ಯ ಅವರು ಕುಲಪತಿಯಾಗಿದ್ದ ಸಮಯದಲ್ಲಿ ವಿಶ್ವವಿದ್ಯಾಲಯವು ಬಿ++ ಶ್ರೇಯಾಂಕವನ್ನು ಪಡೆದಿತ್ತು. 2011ರಲ್ಲಿ ನ್ಯಾಕ್ ತಂಡವು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಬೇಕಿತ್ತಾದರೂ ಕಾರಣಾಂತರಗಳಿಂದ ಇದೇ ಅಕ್ಟೋಬರ್ ಎರಡನೇ ವಾರದಲ್ಲಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದೀಗ ಅದರ ಫಲಿತಾಂಶ ಹೊರಬಿದ್ದಿದ್ದು ಬಿ+ ಶ್ರೇಯಾಂಕವನ್ನು ಪಡೆಯುವ ಮೂಲಕ ತನ್ನದೇ ಹಿಂದಿನ ಸಾಧನೆಯನ್ನು ಉಳಿಸಿಕೊಳ್ಳಲು ವಿಫಲವಾಗಿದೆ.

ಕಳೆದ ತಿಂಗಳು ಆನ್‌ಲೈನ್ ಮೂಲಕ ಸ್ವಯಂ ಅಧ್ಯಯನ ವರದಿ (ಎಸ್‌ಎಸ್‌ಆರ್)ಯನ್ನು ಸಿಯುಕೆ ನ್ಯಾಕ್ ಮಮಡಳಿಗೆ ಸಲ್ಲಿಸಿತ್ತು. ಅದಕ್ಕೆ 70 ಅಂಕಗಳನ್ನು ನ್ಯಾಕ್ ಮಂಡಳಿ ನೀಡುತ್ತದೆ. ಉಳಿದ 30 ಅಂಕಗಳನ್ನು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿ.ವಿ. ಕುಲಪತಿ ನೀಡುವ ವಿವರಣೆಯನ್ನು ಆಧರಿಸಿ ನೀಡುತ್ತದೆ. ವಿ.ವಿ.ಗೆ ಬಂದ ಸಂದರ್ಭದಲ್ಲಿ ಕುಲಪತಿ ನೀಡಿದ ವರದಿಗೂ ಎಸ್‌ಎಸ್‌ಆರ್‌ ವರದಿಗೂ ತಾಳೆಯಾಗದೇ ಇರುವುದರಿಂದ ಮಂಡಳಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

2021ರಿಂದ ಇದುವರೆಗಿನ ವಿ.ವಿ.ಯ ಬೋಧನೆ, ಮೂಲಸೌಕರ್ಯ, ಸಂಶೋಧನೆ, ವೈಜ್ಞಾನಿಕ ಉಪಕರಣಗಳು, ಸಂಶೋಧನೆಗಳಿಗೆ ಪೇಟೆಂಟ್ ಬಂದಿರುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧಗಳ ಮಂಡನೆ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ನ್ಯಾಕ್ ಸಮಿತಿ ಶ್ರೇಯಾಂಕವನ್ನು ನೀಡುತ್ತದೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಪಾಠ, ಪ್ರವಚನ ನಡೆದಿಲ್ಲ ಎಂದು ವಿ.ವಿ. ಆಡಳಿತ ಮಂಡಳಿ ಸಮಜಾಯಿಷಿ ನೀಡುತ್ತದೆಯಾದರೂ ಇದೇ ಸಂದರ್ಭದಲ್ಲಿ ತಮಿಳುನಾಡಿನ ಕೇಂದ್ರೀಯ ವಿಶ್ವವಿದ್ಯಾಲಯ ಎ+ ಹಾಗೂ ಕಾಸರಗೋಡಿನಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಬಿ++ ಶ್ರೇಯಾಂಕವನ್ನು ಪಡೆದಿದೆ. ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸುತ್ತಾರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು.

ವಿಶ್ವವಿದ್ಯಾಲಯದಲ್ಲಿ ಬೋಧನೆಗಿಂತ ಅನ್ಯ ಚಟುವಟಿಕೆಗಳೇ ಹೆಚ್ಚಾಗಿ ನಡೆಯಿತು. ಹೀಗಾಗಿ, ವಿದ್ಯಾರ್ಥಿಗಳು ಆಡಳಿತ ಮಂಡಳಿ ಮಧ್ಯೆ ಸಂಘರ್ಷ ಹೆಚ್ಚಾಯಿತು. ಕೆಲ ಪ್ರಕರಣಗಳಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಹತ್ತಬೇಕಾಯಿತು. ಹೀಗಾಗಿ, ಸಂಶೋಧನೆ, ಅಧ್ಯಯನ, ವಿದ್ಯಾರ್ಥಿ ಕಲ್ಯಾಣಕ್ಕೆ ಹೆಚ್ಚು ಒತ್ತನ್ನು ನೀಡಲಾಗಲಿಲ್ಲ ಎಂದು ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.

ಕುಲಪತಿಗಳು ನ್ಯಾಕ್ ಸಮಿತಿ ಎದುರು ಚೆನ್ನಾಗಿಯೇ ವರದಿ ಮಂಡಿಸಿದ್ದಾರೆ. ಕೋವಿಡ್ ಇದ್ದುದರಿಂದ ಹೆಚ್ಚಿನ ಚಟುವಟಿಕೆಗಳು ನಡೆದಿಲ್ಲ. ಹೀಗಾಗಿ ಬಿ+ ಬಂದಿದೆ
ಸಿಯುಕೆ ಹಿರಿಯ ಅಧಿಕಾರಿ

ಪಟ್ಟು ಹಿಡಿದು ಬಿ++ ಪಡೆದಿದ್ದ ಮಹೇಶ್ವರಯ್ಯ

2016ರಲ್ಲಿ ಕೇವಲ 40 ಪ್ರಾಧ್ಯಾಪಕರಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರ ಆಸುಪಾಸಿನಲ್ಲಿತ್ತು. ಆಗ ನ್ಯಾಕ್ ಮಂಡಳಿಯವರು ಬಿ+ ಶ್ರೇಯಾಂಕ ನೀಡಲು ಮುಂದಾಗಿದ್ದರು. ಇದನ್ನು ಒಪ್ಪದ ಅಂದಿನ ಕುಲಪತಿ ದಿ.ಎಚ್‌.ಎಂ. ಮಹೇಶ್ವರಯ್ಯ ಅವರು ಮಂಡಳಿಯ ಮನವೊಲಿಸಿ ಅದುವರೆಗೆ ಶೈಕ್ಷಣಿಕವಾಗಿ ಸಾಧಿಸಿದ ಪ್ರಗತಿಯನ್ನು ಪ್ರಸ್ತುತಪಡಿಸಿ ಬಿ++ ‍ಪಡೆದಿದ್ದರು ಎಂದು ಸ್ಮರಿಸುತ್ತಾರೆ ಸಿಯುಕೆಯ ಹಿರಿಯ ಪ್ರಾಧ್ಯಾಪಕರು. ಈಗ ಪರಿಸ್ಥಿತಿ ಸುಧಾರಿಸಿದೆ. 180 ಪೂರ್ಣಕಾಲಿಕ ಬೋಧಕ ಸಿಬ್ಬಂದಿ ಇದ್ದು 2600ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿದ್ದಾರೆ. ಬೋಧನಾ ವಿಭಾಗದ ಕಟ್ಟಡ ವಸತಿಗೃಹ ವಸತಿನಿಲಯಗಳು ಲ್ಯಾಬೋರೇಟರಿ ವಿವಿಧ ಸಂಶೋಧನೆಗಳಿಗೆ ಬಂದ ಪೇಟೆಂಟ್ ಸುಸಜ್ಜಿತ ಆಸ್ಪತ್ರೆ ಸೇರಿದಂತೆ ಹಲವು ಸೌಕರ್ಯಗಳು ಉತ್ತಮವಾಗಿವೆ. ಆದರೂ ನ್ಯಾಕ್ ಮಂಡಳಿ ಬಿ+ ನೀಡಿದೆ. ಈ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಎಡವಿದ್ದೇ ಕಾರಣ ಇರಬಹುದು ಎನ್ನಲಾಗುತ್ತಿದೆ.

ಫೆಲೋಶಿಪ್ ಸ್ಕಾಲರ್‌ಶಿಪ್‌ಗೆ ಕೊಕ್ಕೆ

ಸಿಯುಕೆ ಬಿ++ನಿಂದ ಬಿ+ ಶ್ರೇಯಾಂಕಕ್ಕೆ ಇಳಿದಿದ್ದರಿಂದ ವಿಶ್ವವಿದ್ಯಾಲಯಕ್ಕೆ ಬರುವ ಅನುದಾನದಲ್ಲಿ ಕಡಿತವಾಗುವ ಆತಂಕ ಎದುರಾಗಿದೆ. ಅಲ್ಲದೇ ಫೆಲೋಶಿಪ್ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಯೋಜನೆಗಳಿಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಕತ್ತರಿ ಹಾಕಬಹುದು. ಹೀಗಾದರೆ ಮೊದಲೇ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಲಿದೆ ಎಂದು ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.