ADVERTISEMENT

ಕಲಬುರಗಿ: ಎಲ್‌ ಅಂಡ್ ಟಿ ಕಂಪನಿಯ ನಿರ್ಲಕ್ಷ್ಯಕ್ಕೆ ಇಬ್ಬರು ಬಾಲಕರು ಬಲಿ!

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 16:06 IST
Last Updated 23 ಜುಲೈ 2023, 16:06 IST
ಕಲಬುರಗಿಯ ದುಬೈ ಕಾಲೊನಿಯ ಓವರ್ ಹೆಡ್‌ ಟ್ಯಾಂಕ್‌ನ ನಿರ್ಮಾಣ ಹಂತದ ಗುಂಡಿಯಲ್ಲಿ ಭಾನುವಾರ ಪತ್ತೆಯಾದ ಇಬ್ಬರು ಬಾಲಕರ ಶವಗಳು ತೆಗೆಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ
ಕಲಬುರಗಿಯ ದುಬೈ ಕಾಲೊನಿಯ ಓವರ್ ಹೆಡ್‌ ಟ್ಯಾಂಕ್‌ನ ನಿರ್ಮಾಣ ಹಂತದ ಗುಂಡಿಯಲ್ಲಿ ಭಾನುವಾರ ಪತ್ತೆಯಾದ ಇಬ್ಬರು ಬಾಲಕರ ಶವಗಳು ತೆಗೆಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ   

ಕಲಬುರಗಿ: ‘ಎಲ್ಲಿಗೆ ಹೋದ್ರು ಜೋಡಿಯಾಗಿ ಹೋಗ್ತಿದ್ರು, ಜೋಡಿಯಾಗಿ ಆಟವಾಡ್ತಿದ್ರು, ಜೋಡಿಯಾಗಿ ಹೋದ್ರು...’

ನಗರದ ದುಬೈ ಕಾಲೊನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಓವರ್ ಹೆಡ್‌ ಟ್ಯಾಂಕ್‌ನ ತಗ್ಗು ಗುಂಡಿಯಲ್ಲಿ ಭಾನುವಾರ ಶವವಾಗಿ ಪತ್ತೆಯಾದ ಇಬ್ಬರು ಬಾಲಕರ ಪೋಷಕರ ಆಕ್ರಂದನದ ಇಂತಹ ನುಡಿಗಳು ಮುಗ್ಗಿಲು ಮುಟ್ಟಿತು. ನೆರೆದವರ ಕಣ್ಣಂಚಲ್ಲಿ ನೀರು ತರಿಸಿತು.

ದುಬೈ ಕಾಲೊನಿಯ ಸಂಜಯ ಗಾಂಧಿ ನಗರದ ಅಭಿಷೇಕ ಸುರೇಶ ಕನ್ನೋಲ್(12) ಮತ್ತು ಅಜಯ್ ಭೀಮಾಶಂಕರ ನೆಲೋಗಿ(12) ಮಳೆ ನೀರು ತುಂಬಿದ್ದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದರು. 

ADVERTISEMENT

ಸುರೇಶ ಲಕ್ಷ್ಮಣ ಅವರ ಮಗ ಅಭಿಷೇಕ ಹಾಗೂ ಭೀಮಾಶಂಕರ ನೆಲೋಗಿ ಅವರ ಮಗ ಅಜಯ ಒಂದೇ ಕಾಲೊನಿಯಲ್ಲಿ ಇದ್ದು, ಒಟ್ಟಿಗೆ ಆಟವಾಡುತ್ತಿದ್ದರು. ಶಾಲೆಗಳು ಬೇರೆ ಆಗಿದ್ದರೂ ಸಮಾನ ವಯಸ್ಕರಾಗಿದ್ದರು. ಶನಿವಾರ ಆಟವಾಡುವುದಾಗಿ ಮಧ್ಯಾಹ್ನ ಮನೆಯಿಂದ ಹೊರ ಹೋದವರು ವಾಪಸ್ ಆಗಲಿಲ್ಲ. ಗಾಬರಿಗೊಂಡ ಪೋಷಕರು ದೇವಸ್ಥಾನ, ಚೆಕ್‌ ಪೋಸ್ಟ್‌, ರಿಂಗ್ ರೋಡ್ ಕಡೆಗೆ ಹುಡುಕಿದರೂ ಅವರ ಸುಳಿವು ಸಿಗಲಿಲ್ಲ. ಕೊನೆಗೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾಗಿ ದೂರು ನೀಡಿದರು.

ಮಕ್ಕಳು ವಾಪಸ್ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಭಾನುವಾರ ಬೆಳಿಗ್ಗೆ ಎಲ್‌ ಅಂಡ್ ಟಿ ಕಂಪನಿ ನಿರ್ಮಿಸುತ್ತಿರುವ ಓವರ್ ಹೆಡ್ ಟ್ಯಾಂಕ್‌ನ ಬುನಾದಿಯ ಗುಂಡಿಯಲ್ಲಿ ಇಬ್ಬರೂ ಶವವಾಗಿ ಪತ್ತೆಯಾದರು. ಇದು ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

₹10 ಲಕ್ಷ ಪರಿಹಾರದ ಭರವಸೆ: ಪರಿಹಾರದ ಭರವಸೆ ಲಿಖಿತವಾಗಿ ನೀಡುವಂತೆ ಬಿಜೆಪಿ ಮುಖಂಡ ಚಂದು ಪಾಟೀಲ ಅವರ ನೇತೃತ್ವದಲ್ಲಿ ಜನರು ಒತ್ತಾಯಿಸಿದರು. ಕಂಪನಿಯು ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

‘ಮಕ್ಕಳ ಪಾಲಕರಿಗೆ ಕಂಪನಿಯಿಂದ ₹10 ಲಕ್ಷ, ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪಾಲಿಕೆಯಿಂದ ಪರಿಹಾರ ನೀಡಲಾಗುವುದು’ ಎಂದು ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಭರವಸೆ ಕೊಟ್ಟರು. 

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್., ಶಾಸಕಿ ಕನೀಜ್ ಫಾತೀಮಾ, ಪಾಲಿಕೆ ಉಪ ಆಯುಕ್ತ(ಅಭಿವೃದ್ಧಿ) ಆರ್‌.ಪಿ ಜಾಧವ್, ಸಹಾಯಕ ಆಯುಕ್ತೆ ಮಮತಾ, ತಹಶೀಲ್ದಾರ್ ಮಧ್ವರಾಜ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಎಸಿಪಿ ಎಂ.ಎನ್.ದೀಪನ್ ಸೇರಿ ಹಲವರು ಭೇಟಿ ನೀಡಿ ಪರಿಶೀಲಿಸಿದರು.

ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಇದ್ದರು.

ಕಲಬುರಗಿಯಲ್ಲಿ ಭಾನುವಾರ ಶವವಾಗಿ ಪತ್ತೆಯಾದ ಇಬ್ಬರು ಬಾಲಕರ ಪೋಷಕರ ಆಕ್ರಂದನ
ಅಜಯ್ ಭೀಮಾಶಂಕರ
ಅಭಿಷೇಕ

ಎಲ್‌ ಅಂಡ್ ಟಿ ಕಂಪನಿ ವಿರುದ್ಧ ಪ್ರಕರಣ ದಾಖಲು: ಓವರ್‌ ಹೆಡ್ ಟ್ಯಾಂಕ್‌ನ ಅಡಿಪಾಯ ಹಾಕಿ ಸುತ್ತಲಿನ ತಗ್ಗು ಗುಂಡಿ ಮುಚ್ಚದೆ ನಿರ್ಲಕ್ಷ್ಯ ವಹಿಸಿ ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಆರೋಪದಡಿ ಎಲ್‌ ಆಂಡ್ ಟಿ ಕಂಪನಿಯ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಪನಿಯು ದುಬೈ ಕಾಲೊನಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ ಟ್ಯಾಂಕ್ ನಿರ್ಮಾಣದ ಕಾಮಗಾರಿ ಆರಂಭಿಸಿದೆ. ಟ್ಯಾಂಕ್‌ ಅಡಿಪಾಯಕ್ಕೆ ಕಾಂಕ್ರಿಟ್ ಹಾಕಿ ಅದರ ಸುತ್ತಲಿನ ತಗ್ಗು ಗುಂಡಿ ಮುಚ್ಚಿಲ್ಲ. ತಗ್ಗು ಇರುವ ಬಗ್ಗೆ ಎಚ್ಚರಿಕೆ ಫಲಕವೂ ಹಾಕಿಲ್ಲ. ಮಳೆ ನೀರಿನಿಂದ ತುಂಬಿದ್ದ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಮೃತರಾಗಿದ್ದಾರೆ. ಇದಕ್ಕೆ ಕಂಪನಿ ಕಾರಣ ಎಂದು ಸ್ಥಳೀಯರು ಆಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.