ಕಲಬುರಗಿ: ಹಲವು ದಿನಗಳ ಬಿಡುವಿನ ಬಳಿಕ ಕಲ್ಯಾಣ ಕರ್ನಾಟಕದ ಹಲವೆಡೆ ಶನಿವಾರ ಮಳೆಯಾಗಿದೆ.
ಕಲಬುರಗಿ, ಬೀದರ್ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಶನಿವಾರ ಬೆಳಿಗ್ಗೆ ಹಾಗೂ ಸಂಜೆ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಜೋರು ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿಯಲ್ಲೂ ಜೋರು ಮಳೆ ಸುರಿದಿದೆ.
ಕಲಬುರಗಿ ಜಿಲ್ಲೆಯ ಶಹಾಬಾದ್‌ನಲ್ಲಿ ಬೆಳಿಗ್ಗೆ ವರುಣ ಅಬ್ಬರಿಸಿದ್ದಾನೆ. ಕಲಬುರಗಿ ನಗರದಲ್ಲಿ ಮಧ್ಯಾಹ್ನದ ವೇಳೆಗೆ ಧಾರಾಕಾರ ಮಳೆ ಸುರಿಯಿತು.
ಕಲಬುರಗಿಯಲ್ಲಿ ಬೆಳಿಗ್ಗೆ ತೀಕ್ಷ್ಣ ಬಿಸಿಲು ಹಾಗೂ ಸೆಕೆಯ ವಾತಾವರಣವಿತ್ತು. ಮಧಾಹ್ನದ ವೇಳೆ ಆಗಸದಲ್ಲಿ ಮೋಡಗಳು ದಟ್ಟೈಸಿದವು. ಮೊದಲು ಕೆಲ ನಿಮಿಷ ತುಂತುರು ಸುರಿದ ಮಳೆ ಒಂದು ಗಂಟೆಯ ಬಿಡುವಿನ ಬಳಿಕ ಧಾರಕಾರವಾಗಿ ಅಬ್ಬರಿಸಿತು. 45 ನಿಮಿಷಗಳ ಕಾಲ ಸುರಿದ ಮಳೆಗೆ ಇಳೆ ತಂಪಾಗಿ, ತಂಪಿನ ಕಂಪು ನೀಡಿತು.
ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಯ ಲಿಂಗಸುಗೂರು, ಹಟ್ಟಿ ಚಿನ್ನದಗಣಿ ಭಾಗದಲ್ಲಿ ತುಂತುರು ಮಳೆ ಸುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.