ADVERTISEMENT

ಕಲಬುರಗಿ: ಮುಹಮ್ಮದ್ಅಲಿ ಅಲ್‌ಹುಸೇನಿ ಪಟ್ಟಾಭಿಷೇಕ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 16:06 IST
Last Updated 9 ನವೆಂಬರ್ 2024, 16:06 IST
ಕಲಬುರಗಿಯ ಕೆಬಿಎನ್‌ ದರ್ಗಾದಲ್ಲಿ ಶನಿವಾರ ನೂತನ ಸಜ್ಜಾದೆ ನಶೀನ್‌ ಸೈಯದ್‌ ಮೊಹಮ್ಮದ್ಅಲಿ ಅಲ್‌ ಹುಸೇನಿ (ಕೆಂಪು ಬಣ್ಣದ ಟೊಪ್ಪಿಗೆ ಧರಿಸಿದವರು) ಅವರ ಪಟ್ಟಾಭಿಷೇಕ ನಡೆಯಿತು
ಕಲಬುರಗಿಯ ಕೆಬಿಎನ್‌ ದರ್ಗಾದಲ್ಲಿ ಶನಿವಾರ ನೂತನ ಸಜ್ಜಾದೆ ನಶೀನ್‌ ಸೈಯದ್‌ ಮೊಹಮ್ಮದ್ಅಲಿ ಅಲ್‌ ಹುಸೇನಿ (ಕೆಂಪು ಬಣ್ಣದ ಟೊಪ್ಪಿಗೆ ಧರಿಸಿದವರು) ಅವರ ಪಟ್ಟಾಭಿಷೇಕ ನಡೆಯಿತು   

ಕಲಬುರಗಿ: ಕಲ್ಯಾಣ ಭಾಗದ ಸುಪ್ರಸಿದ್ಧ ಸೂಫಿಸಂತ, ಗೇಸುದರಾಜ್‌, ಖಾಜಾ ಬಂದಾನವಾಜ್‌ ದರ್ಗಾದ(ಕೆಬಿಎನ್‌) 24ನೇ ಸಜ್ಜಾದೆ ನಶೀನ್‌(ಪೀಠಾಧಿಪತಿ) ಆಗಿ ಹಫೀಜ್‌ ಸೈಯದ್‌ ಮುಹಮ್ಮದ್‌ ಅಲಿ ಅಲ್‌ಹುಸೇನಿ ಅವರನ್ನು ಶನಿವಾರ ಸಂಜೆ ಸರಳವಾಗಿ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಪಟ್ಟಾಭಿಷೇಕ ಮಾಡಲಾಯಿತು.

13ನೇ ಶತಮಾನದಿಂದ ಸೂಫಿತತ್ವ ಪಸರಿಸುತ್ತ ಬರುತ್ತಿರುವ ಕೆಬಿಎನ್‌ ದರ್ಗಾದ 23ನೇ ಮುಖ್ಯಸ್ಥರಾಗಿದ್ದ ಸೈಯದ್ ಶಹಾ ಖುಸ್ರೊ ಹುಸೇನಿ ಅವರು ನ.6ರಂದು ಅಸ್ತಂಗತರಾಗಿದ್ದರು. ಅವರ ಸ್ಥಾನವನ್ನು ಅವರ ಹಿರಿಯ ಸುಪುತ್ರ ಸೈಯದ್‌ ಮುಹಮ್ಮದ್‌ ಅಲಿ ಅಲ್‌ಹುಸೇನಿ ವಹಿಸಿಕೊಂಡರು.

ದರ್ಗಾ ಆವರಣದ ಮಸೀದಿಯಲ್ಲಿ ಅಸರ್‌ ಪ್ರಾರ್ಥನೆ ಮುಗಿಸಿದ ಅಲಿ ಅಲ್‌ಹುಸೇನಿ, ಸೂರ್ಯಪಡುವಣದತ್ತ ಜಾರುವ ಸಮಯದಲ್ಲಿ ಕೆಬಿಎನ್‌ ದರ್ಗಾ ಪ್ರವೇಶಿಸಿದರು. ಅಲ್ಲಿ ಹತ್ತಾರು ದೇಶದ ಪ್ರಸಿದ್ಧ ದರ್ಗಾಗಳ ಪೀಠಾಧಿಪತಿಗಳು, ಕುಟುಂಬ ಸದಸ್ಯರು, ಪ್ರಖ್ಯಾತ ಉಲೇಮಾಗಳು, ಮೌಲಾನಾಗಳು, ಹಾಫೀಜರು ಸೇರಿದಂತೆ ಖಾಜಾ ಬಂದಾನವಾಜ್‌ರ ಅನುಯಾಯಿಗಳು ಕಿಕ್ಕಿರಿದು ಸೇರಿದ್ದರು. ಕಪ್ಪುಕೋಟ್‌, ಕಪ್ಪು ಗೌನ್‌ ಸೇರಿದಂತೆ ಮೊದಲು ತೊಟ್ಟಿದ್ದ ವಸ್ತ್ರಗಳನ್ನು ಕಳಚಿದ ಅಲಿ ಅಲ್‌ಹುಸೇನಿ, ಶ್ವೇತ ಬಟ್ಟೆ, ಕೊರಳಲ್ಲಿ ಶ್ವೇತವಸ್ತ್ರ ಹಾಗೂ ಬಿಳಿ ಅಂಚು, ಬಿಳಿ ತುರಾಯಿವುಳ್ಳ ಕೆಂಪು ಟೋಫಿ ಧರಿಸಿದರು. ನಂತರ ಅವರ ಪಟ್ಟಾಭಿಷೇಕ ಪ್ರಕ್ರಿಯೆ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ನಡೆಯಿತು.

ADVERTISEMENT

ಈ ವೇಳೆ, ರೋಜಾ–ಎ–ಖುರ್ದ್‌ನ ಸಜ್ಜಾದೆ ನಶೀನ್‌ ಅಬುಲ್‌ ಫತಾ ಸೈಯದ್‌ ಶಹಾ ಹಸನ್‌ ಶಬ್ಬೀರ್‌ ಮೊಹಮ್ಮದ್–ಉಲ್‌ ಹುಸೇನಿ ಅವರು ಕೆಬಿಎನ್‌ ದರ್ಗಾದ ನೂತನ ಸಜ್ಜಾದೆ ನಶೀನ್‌ ನೇಮಕದ ಲೇಖಿ ಓದಿದರು.

‘ಕೆಬಿಎನ್‌ ದರ್ಗಾದ 23ನೇ ಸಜ್ಜಾದೆ ನಶೀನ್‌ರಾಗಿದ್ದ ಸೈಯದ್‌ ಖುಸ್ರೊ ಹುಸೇನಿ ಅವರು ತಮ್ಮ ಸುಪುತ್ರ ಹಾಫೀಜ್‌ ಸೈಯದ್ ಮುಹಮ್ಮದ್ ಅಲಿ ಅಲ್‌ಹುಸೇನಿ ಅವರನ್ನು 2023 ಸೆಪ್ಟೆಂಬರ್‌ 23ರಂದು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದ್ದರು. ಇದಕ್ಕೆ ಸಮುದಾಯದ ಉಲೇಮಾಗಳು 2024ರ ಸೆ.11ರಂದು ಅನುಮೋದಿಸಿದ್ದರು’ ಎಂದು ಅವರು ಪ್ರಕಟಿಸಿದರು.

ಬಳಿಕ ಈ ಘೋಷಣಾ ಪತ್ರಕ್ಕೆ ವಿವಿಧ ಜಿಲ್ಲೆಗಳು, ನೆರೆಯ ರಾಜ್ಯಗಳಿಂದ ಬಂದಿದ್ದ ಪ್ರಮುಖ ಉಲೇಮಾಗಳು, ಮೌಲಾನಾಗಳು ಸಹಿ ಹಾಕಿ ಪಟ್ಟಾಭಿಷೇಕಕ್ಕೆ ಸಾಕ್ಷಿಯಾದರು. ನಂತರ ನೂತನ ಪೀಠಾಧಿಪತಿಯನ್ನು ಆಲಿಸಿಕೊಂಡು ಶುಭಕೋರಿದರು.

ನಂತರ ದರ್ಗಾದಲ್ಲೇ ಮಗರೀಬ್‌ ಸಲ್ಲಿಸಿದ ನೂತನ ಪೀಠಾಧಿಪತಿ ಅಲಿ ಅಲ್‌ಹುಸೇನಿ, ಬಂದಾನವಾಜ್‌ರ ದರ್ಶನ ಪಡೆದರು. ಅಲ್ಲಿಂದ ತಮ್ಮ ತಂದೆ ಸೈಯದ್‌ ಖುಸ್ರೊ ಹುಸೇನಿ ಅವರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದರು.

ಇದಕ್ಕೂ ಮುನ್ನ ಖಾಜಾ ಬಂದಾ ನವಾಜ್ ದರ್ಗಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳಾದ ‘ಕತಮ್‌–ಎ–ಕುರ್‌ಆನ್‌’(ಕುರ್‌ಆನ್‌ ಪಠಣ), ಫಾತೇಹಾಖಾನಿ, ಚಾದರ್ ಗುಲ್ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮಗಳು ಮತ್ತು ವಿಶೇಷ ಪ್ರಾರ್ಥನೆಗಳು ಜರುಗಿದವು.

ದೆಹಲಿ, ಅಜ್ಮೇರ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಸಿದ್ಧ ದರ್ಗಾಗಳ ಪೀಠಾಧಿಪತಿಗಳು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಸಜ್ಜಾದೆ ನಶೀನ್‌ ಅವರಿಗೆ ಶುಭ ಹಾರೈಸಿದರು. ದರ್ಗಾ ಆವರಣದ ಸದರ್‌ ಸೋಫಾನಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಗಾಯಕರಿಂದ ಕವ್ವಾಲಿ ಕಾರ್ಯಕ್ರಮ ನಡೆಯಿತು. ಸಹಸ್ರಾರು ಜನರು ಹೊಸ ಪೀಠಧಿಪತಿ ಭೇಟಿಯಾಗಿ ಆಶೀರ್ವಾದ ಪಡೆದರು.

ಪಟ್ಟಾಭಿಷೇಕದ ವಿಡಿಯೊ ಲಿಂಕ್‌: https://www.youtube.com/live/3UU1X1Nwq7g

ಹೊಸ ಮುಖ್ಯಸ್ಥರ ಪರಿಚಯ

ಕೆಬಿಎನ್‌ ದರ್ಗಾದ 24ನೇ ಮುಖ್ಯಸ್ಥರಾಗಿ ಪಟ್ಟಾಭಿಷಿಕ್ತರಾದ ಹಾಫೀಜ್‌ ಸೈಯದ್ ಮುಹಮ್ಮದ್ ಅಲಿ ಅಲ್‌ಹುಸೇನಿ ಶಾಂತ ಸ್ವಭಾವದ ವ್ಯಕ್ತಿ. ಮೃದುಭಾಷಿ. ತಮ್ಮದೇ ಖಾಜಾ ಶಿಕ್ಷಣ ಸಂಸ್ಥೆಯ ಸೈಯದ್‌ ಅಕ್ಬರ್‌ ಹುಸೇನಿ ಐಸಿಎಸ್‌ಇ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದಾರೆ. ಬಳಿಕ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಅರೇಬಿಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಇಸ್ಲಾಮಿಕ್‌ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೆನಡಾದ ಮಾಂಟ್ರಿಯಲ್‌ನ ಮೆಕ್‌ಗಿಲ್‌ ವಿಶ್ವವಿದ್ಯಾಲಯದಿಂದ ಮತ್ತೊಂದು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಖಾಜಾ ಬಂದಾನವಾಜ್‌ ವಿಶ್ವವಿದ್ಯಾಲಯದ ಸಮ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್‌ ಪ್ರೇಮಿಯೂ ಆಗಿರುವ ಅವರು ಕೆಬಿಎನ್‌ ಸಂಸ್ಥೆಗಳಲ್ಲಿ ಕ್ರೀಡಾ ಚಟುವಟಿಕೆಗೂ ಒತ್ತು ನೀಡುತ್ತ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.