ADVERTISEMENT

ಕಲಬುರಗಿ | ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯೇ ಸವಾಲು

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಕೊರತೆ; ರೈತರಿಗೆ ದಿನಪೂರ್ತಿ ಕಾಯಬೇಕಾದ ಸವಾಲು

ಕಿರಣ ನಾಯ್ಕನೂರ
Published 12 ಆಗಸ್ಟ್ 2024, 6:55 IST
Last Updated 12 ಆಗಸ್ಟ್ 2024, 6:55 IST
ಶಹಾಬಾದ್‌ ರೈತ ಸಂಪರ್ಕ ಕೇಂದ್ರ
ಶಹಾಬಾದ್‌ ರೈತ ಸಂಪರ್ಕ ಕೇಂದ್ರ   

ಕಲಬುರಗಿ: ಜಿಲ್ಲೆಯ 7 ತಾಲ್ಲೂಕುಗಳಲ್ಲಿ (ಹಳೆಯ) ಕಾರ್ಯನಿರ್ವಹಿಸುತ್ತಿರುವ ಒಟ್ಟು 32 ರೈತ ಸಂಪರ್ಕ ಕೇಂದ್ರಗಳ ಪೈಕಿ ಬಹುತೇಕ ಕಡೆ ಸಿಬ್ಬಂದಿ, ಅಧಿಕಾರಿಗಳ ಸಮಸ್ಯೆ ಇದೆ. ಪರಿಣಾಮ; ರೈತರು ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ ಪಡೆಯಲು ದಿನಗಟ್ಟಲೆ ಕಾಯುತ್ತ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

30 ರೈತ ಸಂಪರ್ಕ ಕೇಂದ್ರಗಳು ಕೃಷಿ ಇಲಾಖೆಯ ಸ್ವಂತ ಕಟ್ಟದಲ್ಲೇ ನಡೆಯುತ್ತಿದ್ದರೆ ಕಮಲಾಪುರ, ಸೇಡಂ ತಾಲ್ಲೂಕಿನ ಕೋಡ್ಲಾ ರೈತ ಸಂಪರ್ಕ ಕೇಂದ್ರಗಳು ಬಾಡಿಗೆ ಕಟ್ಟದಲ್ಲಿ ನಡೆಯುತ್ತಿವೆ. ಆಳಂದ ತಾಲ್ಲೂಕಿನ ನಿಂಬರ್ಗಾದ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಪೂರ್ಣವಾಗಿದ್ದು ಭೂಸೇನಾ ನಿಗಮದಿಂದ ಕೃಷಿ ಇಲಾಖೆಗೆ ಹಸ್ತಾಂತರವಾಗಬೇಕಿದೆ.

ಹೆಚ್ಚುವರಿ ಕೇಂದ್ರಕ್ಕೆ ಆಗ್ರಹ: ‘ನಗರ ವ್ಯಾಪ್ತಿಯಲ್ಲಿ ಒಂದೇ ರೈತ ಸಂಪರ್ಕ ಕೇಂದ್ರವಿದೆ. ಇನ್ನೊಂದು ಕೇಂದ್ರ ಮಾಡಬೇಕು ಮತ್ತು ಅವು ಎಲ್ಲಿವೆ ಎನ್ನುವುದರ ಬಗ್ಗೆಯೂ ರೈತರಿಗೆ ನೀಡಬೇಕು’ ಎಂದು ಕುಸನೂರು ರೈತ ಹನುಮಂತಪ್ಪ ಹೇಳಿದರು.

ADVERTISEMENT

‘ರೈತರ ಬೇಡಿಕೆ ನನ್ನ ಗಮನಕ್ಕೂ ಬಂದಿದೆ. ಒಂದು ಕಂದಾಯ ವೃತ್ತಕ್ಕೆ (ಹೋಬಳಿ) ಒಂದು ರೈತ ಸಂಪರ್ಕ ಕೇಂದ್ರ ಇರಬೇಕು ಎನ್ನುವ ನಿಯಮವಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೆಲ್ ತಿಳಿಸಿದರು. 

ಸ್ವಂತ ಕಟ್ಟಡಗಳು, ಅಲ್ಪ ದುರಸ್ತಿ

ಜೇವರ್ಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ ಐದು ರೈತ ಸಂಪರ್ಕ ಕೇಂದ್ರಗಳಿವೆ. ಎಲ್ಲವೂ ಸ್ವಂತ ಕಟ್ಟದಲ್ಲೇ ನಡೆಯುತ್ತಿದ್ದು ಅಲ್ಪ ಸ್ವಲ್ಪ ದುರಸ್ತಿಗೆ ಬಂದಿವೆ.

ರೈತರಿಗೆ ರಿಯಾಯಿತಿ ದರದಲ್ಲಿ ತೊಗರಿ, ಹೆಸರು, ಉದ್ದು ಸೇರಿ ರಸಗೊಬ್ಬರ ಸೇರಿ ವಿವಿಧ ಸಲಕರಣೆಗಳನ್ನು ವಿತರಿಸಲಾಗಿದೆ. ಪ್ಲಾಸ್ಟಿಕ್ ತಾಡಪತ್ರಿ, ‌ಬಿತ್ತನೆಗೆ ಅಗತ್ಯವಿರುವ ಲಘು ಪೋಷಕಾಂಶಗಳನ್ನು ‌ನೀಡಲಾಗಿದೆ. ಕೃಷಿ ಇಲಾಖೆಯಿಂದ ರೈತ ಅನುವುಗಾರರನ್ನು ನೇಮಕ ಮಾಡಲಾಗಿದ್ದು ರೈತರಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ.

ಆಸನ, ಕೌಂಟರ್‌ಗಳ ಸಮಸ್ಯೆ

ಅಫಜಲಪುರ: ಪಟ್ಟಣ ಸೇರಿದಂತೆ ಕರಜಗಿ, ಅತನೂರು ಸೇರಿ ತಾಲ್ಲೂಕಿನಲ್ಲಿ ಒಟ್ಟು ಮೂರು ರೈತ ಸಂಪರ್ಕ ಕೇಂದ್ರಗಳಿವೆ. ಆದರೆ ಸಿಬ್ಬಂದಿ ಮತ್ತು ಮೂಲಸೌಕರ್ಯ ಕೊರತೆಯಿಂದ ರೈತರಿಗೆ ಸಕಾಲದಲ್ಲಿ ಸೇವೆಗಳು ಸಿಗುತ್ತಿಲ್ಲ, ಕೆಲಸಗಳು ಆಗುತ್ತಿಲ್ಲ.

ಆತನೂರು, ಕರಜಗಿ ರೈತ ಸಂಪರ್ಕ ಕೇಂದ್ರದ ಮುಂದೆ ಯಾವುದೇ ಆಶ್ರಯವಿಲ್ಲ. ಮಳೆ ಬಂದರೆ ನೆನೆಯುತ್ತಲೇ ತಮ್ಮ ಕೆಲಸಗಳಿಗೆ ಸರದಿಯಲ್ಲಿ ನಿಲ್ಲಬೇಕು. ಕುಳಿತುಕೊಳ್ಳಲು ಆಸಗಳಿಲ್ಲ.

ಅತನೂರು ಹೋಬಳಿ ಸುಮಾರು 33 ಗ್ರಾಮಗಳ ವ್ಯಾಪ್ತಿ ಹೊಂದಿದೆ. 40–50 ಕಿ.ಮೀ ದೂರದಿಂದ ರೈತರು ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಇಲ್ಲಿಗೆ ಬರುತ್ತಾರೆ. 

‘ವಿತರಣೆ ಕೌಂಟರ್‌ಗಳು ಕಡಿಮೆ ಇರುವುದರಿಂದ ದಿನಗಟ್ಟಲೇ ನಿಲ್ಲಬೇಕು. ಸಿಬ್ಬಂದಿ ಕೊರತೆ ಇದೆ, ಕೃಷಿ ಅಧಿಕಾರಿ ಅವರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುತ್ತಾ ರೈತ ಸಂಪರ್ಕ ಕೇಂದ್ರವನ್ನೂ ನೋಡಿಕೊಳ್ಳುತ್ತಾರೆ. ಹೀಗಾಗಿ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಬೇಕು. ಹೆಚ್ಚು ಕೌಂಟರ್‌ಗಳ ಆರಂಭ, ಆಸನಗಳ ವ್ಯವಸ್ಥೆ, ಮಳೆ, ಗಾಳಿ ತಡೆಯುವಂತೆ ಆಸರೆ ಮಾಡಬೇಕು’ ಎನ್ನುತ್ತಾರೆ ಎಂದು ರೈತ ಮುಖಂಡ ಲಕ್ಷ್ಮಣ ಕಟ್ಟಿಮನಿ, ಶಂಕರ ಬಾದನಹಳ್ಳಿ ತಿಳಿಸಿದರು. 

ತಾತ್ಕಾಲಿಕ ಸೇವೆ, ವರ್ಗಾವಣೆ

ಶಹಾಬಾದ್: ಪಟ್ಟಣದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಕಾಯಂ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಈವರೆಗೂ ನೇಮಕಗೊಂಡಿಲ್ಲ. ಬೇರೆ ತಾಲ್ಲೂಕಿನ ಅಧಿಕಾರಿಗಳು ಕೆಲವು ತಿಂಗಳು ಮಟ್ಟಿಗೆ ತಾತ್ಕಾಲಿಕವಾಗಿ ಸೇವೆ ಸಲ್ಲಿಸಿ ವರ್ಗಾವಣೆ ಆಗುತ್ತಿರುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ. ಕೇವಲ ಹೊರ ಗುತ್ತಿಗೆ ಆಧಾರದಲ್ಲಿ ತಾಂತ್ರಿಕ ಅಧಿಕಾರಿ ಮತ್ತು ಲೆಕ್ಕಪರಿಶೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ.

ರೈತ ಸಂಪರ್ಕ ಕೇಂದ್ರ ಸ್ವಂತ ಸ್ಥಳದಲ್ಲಿದೆ. ಹಳೆ ಕಟ್ಟಡವನ್ನು ನೆಲಸಮ ಮಾಡಿ ಅರ್ಧಭಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಇನ್ನುಳಿದ ಹಳೆ ಕಟ್ಟಡವನ್ನು ಕೃಷಿ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಬಳಸಲಾಗುತ್ತಿದೆ.

ಕೇಂದ್ರದಲ್ಲಿ ನೀರಿನ ವ್ಯವಸ್ಥೆ ಇಲ್ಲ, ಪಕ್ಕದ ದೇವಸ್ಥಾನದ ಸಾರ್ವಜನಿಕ ಕೊಳವೆಬಾವಿ ನೀರನ್ನೇ ರೈತರು ಅವಲಂಬಿಸಿದ್ದಾರೆ.

ಸಿಬ್ಬಂದಿಗಳಿಲ್ಲದೆ ಸಂಕಷ್ಟ

ಚಿಂಚೋಳಿ: ತಾಲ್ಲೂಕಿನಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿಗಳಿಲ್ಲ. ಚಿಮ್ಮನಚೋಡ ಮತ್ತು ಕೋಡ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿನ ಎಲ್ಲ ಹುದ್ದೆಗಳು ಖಾಲಿಯಿದ್ದು ಪ್ರಭಾರ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿ ಕೇಂದ್ರ ನಡೆಸಲಾಗುತ್ತಿದೆ.

ಚಿಂಚೋಳಿ ಮತ್ತು ಕುಂಚಾವರಂ ರೈತ ಸಂಪರ್ಕ ಕೇಂದ್ರಗಳಿಗೆ ತಲಾ ಒಬ್ಬ ಅಧಿಕಾರಿಗಳಿದ್ದಾರೆ. ಉಳಿದ ಸಿಬ್ಬಂದಿ ಕೊರತೆಯಿದೆ. ಅನುವುಗಾರರ ಸೇವೆಯೂ ಸ್ಥಗಿತವಾಗಿದೆ.

ತಾಲ್ಲೂಕಿನ ಧರ್ಮಾಸಾಗರ ಮತ್ತು ಸಂಗಾಪುರ ಗ್ರಾಮಸ್ಥರು ಚಿಂಚೋಳಿ ರೈತ ಸಂಪರ್ಕ ಕೇಂದ್ರಕ್ಕೆ ಬರಬೇಕಾದರೆ 45 ಕಿ.ಮೀ. ಕ್ರಮಿಸಬೇಕು. ಕುಂಚಾವರಂನಲ್ಲಿ ರೈತ ಸಂಪರ್ಕ ತೆರೆದರೆ ಅನುಕೂಲವಾಗುತ್ತದೆ.

ಪರಿಕರ ರಕ್ಷಣೆಯದ್ದೇ ಸವಾಲು

ಸೇಡಂ: ತಾಲ್ಲೂಕಿನಲ್ಲಿ ಒಟ್ಟು ನಾಲ್ಕು ರೈತ ಸಂಪರ್ಕ ಕೇಂದ್ರಗಳಿವೆ. ಮುಧೋಳ ಮತ್ತು ಆಡಕಿ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರಗಳು ಸ್ವಂತ ಕಟ್ಟಡಗಳಾಗಿದ್ದು, ಸುರಕ್ಷಿತವಾಗಿವೆ.

ಕೋಡ್ಲಾ ರೈತ ಸಂಪರ್ಕ ಕೇಂದ್ರ ಸರ್ಕಾರಿ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ನಡೆಯುತ್ತಿದೆ. ನಾಲ್ಕು ಕೋಣೆಗಳಿದ್ದರೂ ಮಳೆಗಾಲದಲ್ಲಿ ಸೋರುತ್ತಿದ್ದು ಕೃಷಿ ಪರಿಕರಗಳನ್ನು ರಕ್ಷಿಸುವುದೇ ಸವಾಲಾಗುತ್ತಿದೆ.

ಸ್ವಚ್ಛತೆ ಸಮಸ್ಯೆ

ಯಡ್ರಾಮಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆ ಕಾಡುತ್ತಿದೆ. ಆಂದೋಲ, ಇಜೇರಿ ಮತ್ತು ಯಡ್ರಾಮಿ ಸೇರಿ ಒಬ್ಬರೇ ಕೃಷಿ ಅಧಿಕಾರಿ ಇದ್ದಾರೆ. ಯಡ್ರಾಮಿ ರೈತ ಸಂಪರ್ಕ ಕೇಂದ್ರದ ಒಬ್ಬರು ಬಿಟ್ಟು ಉಳಿದ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ರೈತ ಸಂಪರ್ಕ ಕೇಂದ್ರದ ಕಾಂಪೌಂಡ್ ಒಳಗೆ ಸ್ಥಳೀಯರು ಮಲ, ಮೂತ್ರವಿಸರ್ಜನೆ ಮಾಡುತ್ತಿರುವುದರಿಂದ ಸಿಬ್ಬಂದಿ, ಅಧಿಕಾರಿಗಳು, ಬರುವ ರೈತರು ಮೂಗು ಮುಚ್ಚಿಕೊಂಡು ತಮ್ಮ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. 

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಜಗನ್ನಾಥ ಡಿ. ಶೇರಿಕಾರ, ಅವಿನಾಶ ಬೋರಂಚಿ, ವೆಂಕಟೇಶ ಹರವಾಳ, ಮಂಜುನಾಥ ದೊಡಮನಿ, ನಿಂಗಣ್ಣ ಜಂಬಗಿ.

ಅಫಜಲಪುರ ತಾಲ್ಲೂಕಿನ ಅತನೂರು ರೈತ ಸಂಪರ್ಕ ಕೇಂದ್ರದ ಮುಂದೆ ಬಿತ್ತನೆ ಬೀಜ ರಸ ಗೊಬ್ಬರ ಪಡೆಯಲು ನಿಂತಿರುವ ರೈತರು
ಜೇವರ್ಗಿ ರೈತ ಸಂಪರ್ಕ ಕೇಂದ್ರ
ಸೇಡಂ ತಾಲ್ಲೂಕಿನ ಕೋಡ್ಲಾ ರೈತ ಸಂಪರ್ಕ ಕೇಂದ್ರ
ಶಿವಲಿಂಗಪ್ಪ ಅವಂಟಿ
ರಾಮಚಂದ್ರ ಪೋಚಾವರಂ
ಲಕ್ಷ್ಮಣ್ ಕಟ್ಟಿಮನಿ
ಸಮದ್ ಪಟೇಲ್

ರೈತರಿಗೆ ಕಾಲಕಾಲಕ್ಕೆ ಲಘು ಪೋಷಕಾಂಶ ರಸಗೊಬ್ಬರ ಕೃಷಿ ಸಲಕರಣೆಗಳನ್ನು ನೀಡಲಾಗುತ್ತಿದೆ

- ಶಿವಲಿಂಗಪ್ಪ ಅವಂಟಿ ಕೃಷಿ ಅಧಿಕಾರಿ ಜೇವರ್ಗಿ

ಚಿಂಚೋಳಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಲು 40–45 ಕಿ.ಮೀ ಕ್ರಮಿಸಬೇಕಿದೆ. ಹೀಗಾಗಿ ಕುಂಚಾವರಂನಲ್ಲೇ ರೈತ ಸಂಪರ್ಕ ಕೇಂದ್ರ ತೆರೆಯಬೇಕು

-ರಾಮಚಂದ್ರ ಪೋಚಾವರಂ ಕಾರ್ಯದರ್ಶಿ ಯುವ ಕಾಂಗ್ರೆಸ್ ಚಿಂಚೋಳಿ

ಬಿತ್ತನೆ ಬೀಜ ಸೇರಿ ಇತರ ಕೃಷಿ ಸಾಮಗ್ರಿ ಪಡೆಯಲು ಬರುವವರಿಗೆ ರೈತ ಸಂಪರ್ಕ ಕೇಂದ್ರ ಮುಂದೆ ನಿಂತು ಸರದಿ ಹಚ್ಚಲು ಕುಳಿತು ಕಾಯಲು ಅನುಕೂಲವಾಗುಂತೆ ಆಸರೆ ಆಸನಗಳ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನಾವು ಜಂಟಿ ಕೃಷಿ ನಿರ್ದೇಶಕರಿಗೆ ದೂರ ನೀಡುತ್ತೇವೆ

- ಲಕ್ಷ್ಮಣ್ ಕಟ್ಟಿಮನಿ ರೈತ ಮುಖಂಡ ಬಂದರವಾಡ

ಅತನೂರು ರೈತ ಸಂಪರ್ಕ ಕೇಂದ್ರದ ಮುಂದೆ ಬಿತ್ತನೆ ಬೀಜಕ್ಕಾಗಿ ದಿನಗಟ್ಟಲೇ ನಿಲ್ಲುವುದು ಸಾಧ್ಯವಾಗುತ್ತಿಲ್ಲ. ಅತನೂರು ದೊಡ್ಡ ಹೋಬಳಿ ಕೇಂದ್ರವಾಗಿದ್ದು ಇನ್ನೊಂದು ಹೋಬಳಿ ಕೇಂದ್ರವನ್ನು ಘೋಷಣೆ ಮಾಡಬೇಕು. ತಾತ್ಕಾಲಿಕವಾಗಿ ಗೊಬ್ಬೂರು ಅಥವಾ ಚೌಡಾಪುರದಲ್ಲಿ ಬಿತ್ತನೆ ಬೀಜ ವಿತರಣೆಯ ಇನ್ನೊಂದು ಕೇಂದ್ರ ಆರಂಭಿಸಬೇಕು

- ಎಲ್ಲಪ್ಪ ಗಂಡೊಳಿ ರೈತ ಮುಖಂಡ ಚೌಡಾಪೂರ

ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ನಿಂತುಕೊಳ್ಳಲು ಆಸರೆ ಮಾಡಿದ್ದೇವೆ. ಕರಜಗಿ ಆತನೂರಗಳಲ್ಲೂ ಮಾಡಲಾಗುವುದು. ಕೃಷಿ ಅಧಿಕಾರಿಗಳ ಕೊರತೆ ಇದೆ. ಒಬ್ಬರು ನಿವೃತ್ತಿಯಾಗಿದ್ದಾರೆ ಇನ್ನೊಬ್ಬರು ಬೇರೆ ಕಡೆ ಹೋಗಿದ್ದು ಇರುವುದರಲ್ಲೇ ನಡೆಸಿಕೊಂಡು ಹೋಗುತ್ತಿದ್ದೇವೆ. ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿದರೆ ಒಳ್ಳೆಯದಾಗುತ್ತದೆ

-ಎಸ್.ಎಚ್.ಗಡಿಗಿಮನಿ ಸಹಾಯಕ ಕೃಷಿ ನಿರ್ದೇಶಕ ಅಫಜಲಪುರ

ಕಾಯಂ ಕೃಷಿ ಅಧಿಕಾರಿಗಳ ಕೊರತೆ ಮತ್ತು ಬಿತ್ತನೆ ಬೀಜ ರಸಗೊಬ್ಬರ ಮತ್ತು ಇತರೆ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಹೊಸ ಗೋದಾಮು ನಿರ್ಮಿಸಿ ಕೊಡುವ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಮತ್ತೊಮ್ಮೆ ಮೇಲಧಿಕಾರಿಗಳ ಜತೆ ಚರ್ಚಿಸುತ್ತೇನೆ

- ಸಂಜೀವಕುಮಾರ ಮಾನಕರ ಸಹಾಯಕ ಕೃಷಿ ನಿರ್ದೇಶಕ ಚಿತ್ತಾಪುರ

ನಮ್ಮಲ್ಲಿ ತಾಂತ್ರಿಕ ಸಿಬ್ಬಂದಿ ಇಲ್ಲ. ಜೇವರ್ಗಿಯ 5 ರೈತ ಸಂಪರ್ಕ ಕೇಂದ್ರಗಳಲ್ಲಿ ಒಬ್ಬರೇ ಇದ್ದಾರೆ. ಗುತ್ತಿಗೆ ಆಧಾರದ ಸಿಬ್ಬಂದಿ ನೇಮಿಸಿಕೊಂಡು ರೈತರಿಗೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಂಡಿದ್ದೇವೆ

- ಸಮದ್ ಪಟೇಲ್ ಜಂಟಿ ನಿರ್ದೇಶಕ ಕೃಷಿ ಇಲಾಖೆ ಕಲಬುರಗಿ

ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿ ಸಿಬ್ಬಂದಿ ಕೊರತೆಯಿಂದ ಸಮಯಕ್ಕೆ ಸರಿಯಾಗಿ ರೈತರ ಕೆಲಸಗಳು ಆಗುತ್ತಿಲ್ಲ. ಸ್ವಚ್ಚತಾ ಕಾರ್ಯ ನಡೆಯಬೇಕಿದೆ

-ಪ್ರಕಾಶ ಹಂಗರಗಿ ಯಡ್ರಾಮಿ

ರೈತ ಸಂಪರ್ಕ ಕೇಂದ್ರದ ಕಾಂಪೌಂಡ್ ಒಳಗೆ ಜನರು ರಾತ್ರಿ ಮಲ ಮೂತ್ರವಿಸರ್ಜನೆ ಮಾಡುವುದರಿಂದ ಅಧಿಕಾರಿಗಳು ನಾವು ಒಳಗೆ ಕುರದ ಪರಿಸ್ಥಿತಿ ಬಂದಿದೆ. ಇದು ರೈತರಿಗೂ ಕಿರಿಕಿರಿಯಗುತ್ತಿದೆ

-ರಮೇಶ ಸಿಬ್ಬಂದಿ ರೈತ ಸಂಪರ್ಕ ಕೇಂದ್ರ ಯಡ್ರಾಮಿ

ತಾಲ್ಲುಕುಗಳಲ್ಲಿ ಖಾಲಿ ಇರುವ ಹುದ್ದೆಗಳು (30 ಜೂನ್ 2024 ಅಂತ್ಯಕ್ಕೆ) ಎ.ಡಿ ಕಚೇರಿ; ಒಟ್ಟು ಹುದ್ದೆಗಳು; ಭರ್ತಿ; ಖಾಲಿ ಕಲಬುರಗಿ;42;22;20 ಅಫಜಲಪುರ;33;10;23 ಆಳಂದ;36;12;24 ಚಿತ್ತಾಪುರ;40;16;24 ಚಿಂಚೋಳಿ;34;10;24 ಜೇವರ್ಗಿ;40;11;29 ಸೇಡಂ;28;16;12 .......... ಖಾಲಿ ಹುದ್ದೆಗಳು ತಾಲ್ಲೂಕು;ಕೃಷಿ ಅಧಿಕಾರಿ; ಸಹಾಯಕ ಕೃಷಿ ಅಧಿಕಾರಿ ಮಂಜೂರು; ಭರ್ತಿ ಕಲಬುರಗಿ;13;17;18;9 ಅಫಜಲಪುರ;8;5;14;13 ಆಳಂದ;12;9;13;10 ಚಿತ್ತಾಪುರ;12;6;17;14 ಚಿಂಚೋಳಿ;10;6;13;11 ಜೇವರ್ಗಿ;11;7;18;17 ಸೇಡಂ;8;5;9;3

ರೈತ ಸಂಪರ್ಕ ಪಾಲಿಸಬೇಕಾದ ಮಾರ್ಗಸೂಚಿಯ ಪ್ರಮುಖ ಅಂಶಗಳು * ಕೇಂದ್ರ ಬಾಡಿಗೆ ಕಟ್ಟಡಲ್ಲಿ ನಡೆಯುತ್ತಿದ್ದರೆ ಸಕ್ಷಮ ಪ್ರಾಧಕಾರದಿಂದ ಅನುಮತಿ ಪಡೆದು ಬಾಡಿಕೆ ಪಾವತಿಸಬೇಕು * ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡಲ್ಲಿ ರೈತ ಸಂಪರ್ಕ ಕೇಂದ್ರ ನಡೆಯುತ್ತಿದ್ದರೆ ಆ ಕಚೇರಿ ವೆಚ್ಚದಲ್ಲೇ ರೈತ ಸಂಪರ್ಕ ಕೇಂದ್ರದ ನಿರ್ವಹಣಾ ವೆಚ್ಚ ಭರಿಸಬಹುದು * ಕೆಲಸದ ದಿನಗಳಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸಬೇಕು. ಕಚೇರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಬಾಗಿಲು ಮುಚ್ಚುವ ಹಾಗಿಲ್ಲ * ಜಿಲ್ಲೆ ತಾಲ್ಲೂಕು ಹೋಬಳಿಯ ನಕಾಶೆ. ಹೋಬಳಿಯ ಸಾಮಾನ್ಯ ಮಾಹಿತಿ ಮತ್ತು ಕೇಂದ್ರದ ಸಿಬ್ಬಂದಿ ಕಾರ್ಯವ್ಯಾಪ್ತಿ ಗುರುತಿಸುವ ನಕಾಶೆ ಪ್ರದರ್ಶಿಸಬೇಕು * ಹೋಬಳಿವಾರು ಗ್ರಾಮಗಳ ಹಿಡುವಳಿ ಪಟ್ಟಿ ಇಡಬೇಕು * ಕೃಷಿ ಸಾಮಗ್ರಿಗಳ ಮಾರಾಟ (ಸರ್ಕಾರಿ ಹಾಗೂ ಖಾಸಗಿ) ಮಳಿಗೆಗಳ ಪಟ್ಟಿಯನ್ನು ಲೈಸೆನ್ಸ್‌ ವಿವರದೊಂದಿಗೆ ಪ್ರದರ್ಶಿಸಬೇಕು * ಕೃಷಿ ಇಲಾಖೆಯ ತಾಲ್ಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳು ಕನಿಷ್ಠ 2 ತಿಂಗಳಿಗೆ ಒಮ್ಮೆಯಾದರೂ ರೈತ ಸಂಪರ್ಕಕ್ಕೆ ಭೇಟಿ ನೀಡಿ ಸಮಸ್ಯೆ ಸರಿಪಡಿಸಲು ಸಲಹೆ ಮಾರ್ಗದರ್ಶನ ನೀಡಬೇಕು

ಕಲಬುರಗಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳು (ಹಳೆ ತಾಲ್ಲೂಕುಗಳಂತೆ) ತಾಲ್ಲೂಕು;ಹೋಬಳಿ ಕಲಬುರಗಿ;ಕಲಬುರಗಿ ಔರಾದ್ ಫರಹತಾಬಾದ್ ಪಟ್ಟಣ ಮಹಾಗಾಂವ್ ಕಮಲಾಪುರ ಅಫಜಲಪುರ;ಅಫಜಲಪುರ ಅತನೂರ ಕರಜಗಿ ಅಳಂದ;ಆಳಂದ ನರೋಣಾ ಮಾದನಹಿಪ್ಪರಗಾ ನಿಂಬರ್ಗಾ ಖಜೂರಿ ಚಿಂಚೋಳಿ; ಚಿಂಚೋಳಿ ಸುಲೇಪೇಟ್ ಐನಾಪುರ ಕೊಡ್ಲಿ ಚಿತ್ತಾಪುರ;ಚಿತ್ತಾಪುರ ಮಾಡಬೂಳ ಶಹಾಬಾದ್ ನಾಲವಾರ ಕಾಳಗಿ ಸೇಡಂ;ಸೇಡಂ ಕೋಡ್ಲಾ ಮುಧೋಳ ಆಡಕಿ ಜೇವರ್ಗಿ;ಜೇವರ್ಗಿ ಆಂದೋಲಾ ನೆಲೋಗಿ ಇಜೇರಿ ಯಡ್ರಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.