ADVERTISEMENT

ಕಲಬುರಗಿ | ಭಾವೈಕ್ಯದ ಮೊಹರಂ ಆಚರಣೆ

ಚಿಂಚೋಳಿ: ಸಾವಿರಾರು ಜನ ಭಾಗಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 5:58 IST
Last Updated 18 ಜುಲೈ 2024, 5:58 IST
ಚಿಂಚೋಳಿಯ ಬಡಿ ದರ್ಗಾದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಬುಧವಾರ ಅಲಾಯಿಗಳ ಮೆರವಣಿಗೆ ನಡೆಸಲಾಯಿತು
ಚಿಂಚೋಳಿಯ ಬಡಿ ದರ್ಗಾದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಬುಧವಾರ ಅಲಾಯಿಗಳ ಮೆರವಣಿಗೆ ನಡೆಸಲಾಯಿತು    

ಚಿಂಚೋಳಿ: ಮಹಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಜರತ್ ಹಸನ್, ಹುಸೇನ್ ಅವರ ಬಲಿದಾನ ಸ್ಮರಣೆ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ ಆಚರಿಸಲಾಯಿತು.

ಇಲ್ಲಿನ ಬಡಿ ದರ್ಗಾದ ಸಜ್ಜಾದ್ ಸಯ್ಯದ್ ಅಕ್ಬರ್ ಹುಸೇನಿ ಅವರ ನೇತೃತ್ವದಲ್ಲಿ ನಡೆದ ಮೊಹರಂ ಆಚರಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಪಟ್ಟಣದ ವಿವಿಧೆಡೆ 15ಕ್ಕೂ ಅಧಿಕ ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ಪೀರಾಗಳನ್ನು ಬೆಳಿಗ್ಗೆಯಿಂದ ಮೆರವಣಿಗೆ ಮೂಲಕ ಬಡಿ ದರ್ಗಾಕ್ಕೆ ಕರೆ ತರಲಾಯಿತು.
ದರ್ಗಾದ ಒಳಗಡೆ ಪ್ರತಿಷ್ಠಾಪಿಸಿದ್ದ ಚಂದಾ ಹುಸೇನಿ ಸಹಿತ ಇತರ ಅಲಾಯಿಗಳು, ದರ್ಗಾದ ಪ್ರವೇಶ ದ್ವಾರದ ಬಳಿ ಬೀಬಿ ಫಾತಿಮಾ ಅಲಾಯಿ ಸಮ್ಮುಖದಲ್ಲಿ ವಿವಿಧೆಡೆಯ ಅಲಾಯಿಗಳ ದರ್ಶನ ಪಡೆದು ಮರಳಿದವು.

ದರ್ಗಾದಲ್ಲಿ ಎದುರು ಭೇಟಿಗೆ ಬಂದ ಅಲಾಯಿಗಳಿಗೆ ಸಜ್ಜಾದರು ಲೋಬಾನ ಹಾಕಿ ಹೊಗೆ ಎಬ್ಬಿಸಿದ ನಂತರ ಅಲಾಯಿಗಳು ಮೂಲ ಸ್ಥಳಕ್ಕೆ ತೆರಳದವು. ನಂತರ ಪಟ್ಟಣದ ಪಂಚಲಿಂಗೇಶ್ವರ ಬುಗ್ಗೆ ರಸ್ತೆಯಲ್ಲಿರುವ ರುಕ್ಮೊದ್ದಿನ್ ದರ್ಗಾ ಬಳಿ(ಕೆಂಡ ಕಾಯ್ದು) ಅಲಾಯಿಗಳ ದಫನ್ ನಡೆಸಿದರು.

ADVERTISEMENT

ಮೊಹರಂ ನೋಡಲು ಚಿಂಚೋಳಿ, ಚಂದಾಪುರ ಹಾಗೂ ಹೊಸ ಬಡಾವಣೆ ಜತೆಗೆ ನೀಮಾ ಹೊಸಳ್ಳಿ, ಪೋಲಕಪಳ್ಳಿ, ಗೌಡನಹಳ್ಳಿಯ ಹಿಂದೂ ಮುಸಲ್ಮಾನರು ಆಗಮಿಸಿ ಅಲಾಯಿಗಳ ದರ್ಶನ ಪಡೆದುಕೊಂಡರು. ಹಿಂದುಗಳೇ ಪಟ್ಟಣದ ವಿವಿಧೆಡೆಯ ಅಲಾಯಿ ಹಿಡಿದು ಮೆರವಣಿಗೆ ನಡೆಸಿದರು. ಭಕ್ತರು ಕಾಗದದಲ್ಲಿ ಪುಡಾ ಕಟ್ಟಿಕೊಂಡು ತಂದಿದ್ದ ಲೋಬಾನ ಹಾಕಿ ಹರಕೆ ತೀರಿಸಿದರು. ಮಾದಲಿ ನೈವೈದ್ಯ ಸಮರ್ಪಿಸಿದ್ದರು.

ಮೊಹರಂ ಆಚರಣೆಯಲ್ಲಿ ಸಯ್ಯದ್ ಅಕ್ಬರ್ ಹುಸೇನಿ, ಅಬ್ದುಲ್ ಬಾಷೀತ್, ಕೆ.ಎಂ.ಬಾರಿ, ಛೋಟಿ ದರ್ಗಾದ ಮುಖ್ಯಸ್ಥರಾದ ಮಕದ್ದುಮ್ ಖಾನ, ಹಾಫೀಜ್ ಅಬ್ದುಲ್ ಹಮೀದ್, ಎಸ್.ಕೆ ಮುಕ್ತಾರ್, ಮುಖಂಡರಾದ ಮಹಮದ್ ಹಾದಿ, ಮಸ್ತಾನ ನೀಮಾಹೊಸಳ್ಳಿ, ಬೀಬಿ ಫಾತಿಮಾ ದರ್ಗಾದ ಅಕ್ಬರ್, ಸಬ್ ಇನ್‌ಸ್ಪೆಕ್ಟರ್‌ ಹಣಮಂತ ಹಾಗೂ ಜಗನ್ನಾಥ ನಾಟಿಕಾರ, ಮಂಜಲೆಸಾಬ್ ಮುತ್ತಂಗಿ, ಗೃಹ ರಕ್ಷ ದಳದ ಘಟಕಾಧಿಕಾರಿ ಮಸ್ತಾನ ಮೊದಲಾದವರು ಹಾಜರಿದ್ದರು.

ಮರ್ನಳ್ಳಿಯಲ್ಲೂ ಮೊಹರಂ: ತಾಲ್ಲೂಕಿನ ಮರ್ನಳ್ಳಿ ಗ್ರಾಮದ ಕರ್ಬಲಾದಲ್ಲಿ ಮೊಹರಂ ಆಚರಿಸಲಾಯಿತು, ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳ ವಿವಿಧ ಅಲಾಯಿ ಪೀರಗಳು ಕರ್ಬಲಾಕ್ಕೆ ಬಂದು ಇಲ್ಲಿನ ದರ್ಗಾದಲ್ಲಿ ವಿರಮಿಸಿದ ನಂತರ ಮತ್ತೆ ಮೆರವಣಿಗೆ ನಡೆಸಿ ಸ್ವಗ್ರಾಮಕ್ಕೆ ತೆರಳುವ ಮೂಲಕ ಮೊಹರಂಗೆ ತೆರೆ ಎಳೆಯಲಾಯಿತು.

ಸುಲೇಪೇಟ, ಹೊಡೇಬೀರನಹಳ್ಳಿ, ಹೂವಿನಭಾವಿ, ಗಡಿಕೇಶ್ವರ, ಕುಪನೂರ, ಯಲಕಪಳ್ಳಿ, ಪಸ್ತಪುರ ಗಂಜಗಿರಿ, ತಾಡಪಳ್ಳಿ, ವಚಜ್ರಗಾಂವ್ ಮೊದಲಾದ ಗ್ರಾಮಗಳ ಜನರು ಪಾಲ್ಗೊಂಡಿದ್ದರು.

ಮೊಯಿಜ್ ಪಟೇಲ್, ವಾಸೀಂ ಪಟೇಲ್, ಅಹಮದ್ ಪಟೇಲ್, ಮೈನುದ್ದಿನ್ ಪಟೇಲ್, ಕಮರುದ್ದಿನ್ ಪಟೇಲ್, ಮಿನಾಜ್ ಪಟೇಲ್, ಇಕ್ಬಾಲ್, ಮೆಹತಾಬ್ ಸಾಹೇಬ್, ಕಲೀಂ ಮೌಜಾನ ಮೊದಲಾದವರು ಹಾಜರಿದ್ದರು.

ತಾಲ್ಲೂಕಿನ ವೆಂಕಟಾಪುರದಲ್ಲೂ ಮೊಹರಂ ಆಚರಿಸಲಾಯಿತು. ಸಾಮೂಹಿಕ ನೃತ್ಯ ಮತ್ತು ವಾದ್ಯಮೇಳದ ಮೆರವಣಿಗೆ ಮೊಹರಂಗೆ ಮೆರಗು ನೀಡಿತ್ತು. ಮನ್ಸೂರ್ ಅಲಿ, ನಿಜಾಮ್, ಯುಸುಫ್ ಜಾನಿ ಬಕ್ಕಣ್ಣ ಮುನ್ನೂರು, ಕೋಟಪ ಶೇಖರ, ಗೊಲ್ಲಾ ಬೀರಪ್ಪ, ಗೋಪಾಲ ಭಜಂತ್ರಿ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.