ADVERTISEMENT

ಹೆಚ್ಚು ಶಾಸಕರನ್ನು ಕೊಟ್ಟ ಕಾಳಗಿ

ಇಬ್ಬರು ಎಂಎಲ್ಎ, ಮೂವರು ಎಂಎಲ್‌ಸಿ

ಗುಂಡಪ್ಪ ಕರೆಮನೋರ
Published 22 ಜೂನ್ 2024, 6:32 IST
Last Updated 22 ಜೂನ್ 2024, 6:32 IST
ಬಸವರಾಜ ಮತ್ತಿಮಡು
ಬಸವರಾಜ ಮತ್ತಿಮಡು   

ಕಾಳಗಿ: ಒಂದು ಕಾಲದಲ್ಲಿ ಕಲಬುರಗಿ ಜಿಲ್ಲೆಯ ಅತಿದೊಡ್ಡ ತಾಲ್ಲೂಕಾಗಿದ್ದ ಚಿತ್ತಾಪುರನ್ನು ಒಡೆದು ಇದರ ವ್ಯಾಪ್ತಿಯ ಕಾಳಗಿಯನ್ನು 2013ರ ರಾಜ್ಯ ಬಜೆಟ್ ವೇಳೆ ಹೊಸ ತಾಲ್ಲೂಕಾಗಿ ಘೋಷಣೆ ಮಾಡಲಾಗಿತ್ತು. ಅಧಿಕೃತವಾಗಿ 2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಳಗಿ ನೂತನ ತಾಲ್ಲೂಕು ಎಂಎಲ್ಎ ಕ್ಷೇತ್ರ ಹೊಂದಿರದೆ ಇದ್ದರೂ ತಾಲ್ಲೂಕಿನ ಐವರು ಶಾಸಕರನ್ನು ಸದನಕ್ಕೆ ಕಳಿಸಿಕೊಟ್ಟಿದೆ.

ಪ್ರಸ್ತುತ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಭೀಮಶಾ ಮತ್ತಿಮಡು ಮೂಲತಃ ಕಾಳಗಿ ತಾಲ್ಲೂಕಿನ ಮಾಡಬೂಳ ಗ್ರಾಮ ಪಂಚಾಯಿತಿಯ ಮತ್ತಿಮಡು (ಮತ್ತಿಮೂಡ) ಗ್ರಾಮದವರು. ಇವರು 2016ರಲ್ಲಿ ಬಿಜೆಪಿಯಿಂದ ಸೇಡಂ ತಾಲ್ಲೂಕಿನ ಆಡಕಿ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. 2018 ಮತ್ತು 2023ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ತಂದೆಯ (ಡಾ.ಉಮೇಶ ಗೋಪಾಲದೇವ ಜಾಧವ) ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ 2019ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪುತ್ರ ಡಾ.ಅವಿನಾಶ ಜಾಧವ ಶಾಸಕರಾದರು. 2023ರಲ್ಲಿಯೂ ಸ್ಪರ್ಧಿಸಿದ ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಸಕ ಡಾ.ಅವಿನಾಶ ಜಾಧವ ಮೂಲತಃ ಕಾಳಗಿ ತಾಲ್ಲೂಕಿನ ಬೆಡಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್.ತಾಂಡಾ (ಸಂಜಯ ನಗರ) ನಿವಾಸಿಯಾಗಿದ್ದಾರೆ.

ADVERTISEMENT

ಉದ್ಯಮಿ ಬಿ.ಜಿ.ಪಾಟೀಲ (ರಾಜಾ ಪಾಟೀಲ) ಮೂಲತಃ ಕಾಳಗಿ ತಾಲ್ಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಪ್ಪಾಣಿ ಗ್ರಾಮದವರು. ಇವರು ಬಿಜೆಪಿ ಅಭ್ಯರ್ಥಿಯಾಗಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ 2016ರಿಂದ ಈಗಲೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ (ಎಂಎಲ್‌ಸಿ) ಮುಂದುವರೆದಿದ್ದಾರೆ.

ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಮೂಲತಃ ಕಮಕನೂರ ಗ್ರಾಮದವರು. ಇವರು 2019ರಲ್ಲಿ 11ತಿಂಗಳ ಅವಧಿಗೆ ಎಂಎಲ್‌ಸಿ ಆಗಿದಲ್ಲದೇ, ಈಗಲೂ 2026ರವರೆಗೆ ವಿಧಾನ ಪರಿಷತ್ ಸದಸ್ಯರ ಸ್ಥಾನಮಾನ ಹೊಂದಿದ್ದಾರೆ.

2017ರಿಂದ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೇವ ತಿಪ್ಪಯ್ಯ ಗುತ್ತೇದಾರ ಸಹ ಮೂಲತಃ ಕಾಳಗಿ ಪಟ್ಟಣದವರು. ಜಗದೇವ ಗುತ್ತೇದಾರ ಕೂಡ ಈಗ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ತಾಲ್ಲೂಕಿನ ಕೊಡುಗೆ ಹೆಚ್ಚಿಸಿದ್ದಾರೆ.

ಈ ಹಿಂದೆ ಚಿಂಚೋಳಿ ಶಾಸಕ ಮತ್ತು ಕಲಬುರಗಿ ಸಂಸದರಾಗಿದ್ದ ಡಾ.ಉಮೇಶ ಗೋಪಾಲದೇವ ಜಾಧವ ಸಹ ತಾಲ್ಲೂಕಿನ ಸಂಜಯನಗರ (ಬೆಡಸೂರ ಎಂ. ತಾಂಡಾ) ನಿವಾಸಿಯಾಗಿದ್ದಾರೆ. ಅಲ್ಲದೇ ಚಿತ್ತಾಪುರ ಸಾಮಾನ್ಯ ಕ್ಷೇತ್ರದ ಶಾಸಕರಾಗಿದ್ದ ವಿಶ್ವನಾಥ ಪಾಟೀಲ ಹೆಬ್ಬಾಳ ಕೂಡ ಕಾಳಗಿ ತಾಲ್ಲೂಕಿನವರಾಗಿದ್ದಾರೆ. ಒಟ್ಟಾರೆ ಕಲಬುರಗಿ ಜಿಲ್ಲೆಯ ಶಾಸಕರಲ್ಲಿ ಕಾಳಗಿ ತಾಲ್ಲೂಕು ಮೇಲುಗೈ ಸಾಧಿಸಿದ್ದು ಸದನದಲ್ಲಿ ವಿಶೇಷ ಎನಿಸುವಂತಿದೆ.

ಅವಿನಾಶ
ಪಾಟೀಲ
ಕಮಕನೂರ
ಜಗದೇವ ಗುತ್ತೇದಾರ ಎಂ.ಎಲ್.ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.