ADVERTISEMENT

ಕಮಲಾಪುರ | ಕುಡಿಯುವ ನೀರಿಗೆ ಹಾಹಾಕಾರ!

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 7:07 IST
Last Updated 30 ಜೂನ್ 2024, 7:07 IST
<div class="paragraphs"><p>ಕಮಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವಲು ನಾಯಕ ತಾಂಡಾದಲ್ಲಿ ನೀರಿಗಾಗಿ ಮುಗಿಬಿದ್ದ ಮಹಿಳೆಯರು</p></div>

ಕಮಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವಲು ನಾಯಕ ತಾಂಡಾದಲ್ಲಿ ನೀರಿಗಾಗಿ ಮುಗಿಬಿದ್ದ ಮಹಿಳೆಯರು

   

ಕಮಲಾಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವಲು ನಾಯಕ ತಾಂಡಾದಲ್ಲಿ ಮಳೆಗಾಲದಲ್ಲೂ ಹನಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹಿಳೆಯರು, ಮಕ್ಕಳು ಹೊಲ ಗದ್ದೆಗಳಿಂದ ನೀರು ಸಂಗ್ರಹಿಸುತ್ತಿದ್ದು ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದ ಪಟ್ಟಣ ಪಂಚಾಯಿತಿ ಸಿಬ್ಬಂದಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ದೇವಲು ನಾಯಕ ತಾಂಡಾದಲ್ಲಿ 110 ಕುಟುಂಬಗಳಿವೆ. ಸುಮಾರು 500 ಜನಸಂಖ್ಯೆ, 200 ಜಾನುವಾರುಗಳಿವೆ. ಈ ತಾಂಡಾಕ್ಕೆ ನೀರು ಪೂರೈಸುತ್ತಿದ್ದ ಕೊಳವೆಬಾವಿ ಬರಿದಾಗಿದೆ. ಸುಮಾರು 15 ದಿನಗಳಿಂದ ತಾಂಡಾದಲ್ಲಿ ಸಮಸ್ಯೆ ತಲೆ ದೋರಿದೆ. 7 ದಿನಗಳಂದ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ.

ADVERTISEMENT

‘ಮಹಿಳೆಯರು, ಮಕ್ಕಳು ದಿನಕೆಲಸ, ಶಾಲೆ ಬಿಟ್ಟು ಅಡವಿಯಲ್ಲಿ ತಿರುಗಿ ನೀರು ಸಂಗ್ರಹಿಸುವುದೇ ಕಾಯಕವಾಗಿದೆ. ಜಾನುವಾರುಗಳ ನಿರ್ವಹಣೆ ದುಸ್ತರವಾಗಿದೆ. ತಾಂಡಾದಲ್ಲಿ ಜಲ ಜೀವನ ಮಿಷನ್‌ ಕಾಮಗಾರಿ ಕೈಗೊಂಡಿದ್ದು ಸಂಪೂರ್ಣ ಕಳಪೆಯಾಗಿದೆ. ಜೆಜೆಎಂ ನೀರು ಸಿಕ್ಕಿಲ್ಲ. ಎಲ್ಲೆಂದರಲ್ಲಿ ರಸ್ತೆ ಅಗೆದು ಅರ್ಧಂಬರ್ಧ ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದಾರೆ. ಒಂದು ನಲ್ಲಿಗೂ ನೀರು ಬಂದಿಲ್ಲ. ಸಂಪೂರ್ಣ ಬೋಗಸ್‌ ಬಿಲ್‌ ಎತ್ತಿಹಾಕಿದ್ದಾರೆ’ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಧನಸಿಂಗ್‌ ಪವಾರ ಆರೋಪಿಸಿದರು.

‘ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಮಲಾಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಇದುವರೆಗೆ ಸ್ಪಂದಿಸಿಲ್ಲ. ತಾಂಡಾದಲ್ಲಿ ಹಿಂದಿನಿಂದಲೂ ನೀರಿನ ಸಮಸ್ಯೆ ಇದೆ. ಮೂರು ದಿನಗಳಿಗೊಮ್ಮ ನೀರು ಸರಬರಾಜಾಗುತಿತ್ತು. ಈಗ ಅದೂ ಇಲ್ಲ. ನೀರಿನ ಸಮಸ್ಯೆಯಿಂದ ತಾಂಡಾ ನಿವಾಸಿಗಳು ನಗರಗಳಿಗೆ ತೆರಳುತ್ತಿದ್ದಾರೆ. ಕೂಡಲೇ ಇನ್ನೊಂದು ಬೋರವೆಲ್‌ ಕೊರೆಯಿಸಿ ನೀರೊದಗಿಸಬೇಕು. ಸ್ಪಂದಿಸದಿದ್ದರೆ ಖಾಲಿ ಕೊಡಗಳೊಂದಿಗೆ ಕಮಲಾಪುರ ಪಟ್ಟಣ ಪಂಚಾಯಿತಿ ಎದುರು ಧರಣಿ ನಡೆಸಲಾಗುವುದು’ ಎಂದು ತಾಂಡಾ ನಿವಾಸಿಗಳು ಎಚ್ಚರಿಸಿದ್ದಾರೆ.

‘ಸಮಸ್ಯೆ ಶಾಶ್ವತ ಪರಿಹಾರಕ್ಕೆ ಬೆಳಕೋಟಾ ಜಲಾಶಯದಿಂದ ನೀರು ಸರಬರಾಜು ಮಾಡಲು ಯೋಜನೆ ಹಾಕಿಕೊಳ್ಳಬೇಕು’ ಎಂದು ದೇವಲು ನಾಯಕ ತಾಂಡಾದಾ ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.