ADVERTISEMENT

ಕಲಬುರಗಿ ಲೋಕಸಭಾ ಕ್ಷೇತ್ರ | ಮೊದಲ ಬಾರಿ ಕಣದಲ್ಲಿ ಇಬ್ಬರು ಮಹಿಳೆಯರು

ಲೋಕಸಭೆಯ 19 ಚುನಾವಣೆ: ಮೂರು ಬಾರಿ ಮಾತ್ರ ನಾರಿಯರು ಸ್ಪರ್ಧೆ

ಮಲ್ಲಿಕಾರ್ಜುನ ನಾಲವಾರ
Published 27 ಏಪ್ರಿಲ್ 2024, 5:54 IST
Last Updated 27 ಏಪ್ರಿಲ್ 2024, 5:54 IST
ಲೋಕಸಭಾ ಚುನಾವಣೆ 
ಲೋಕಸಭಾ ಚುನಾವಣೆ    

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಎರಡು ಉಪಚುನಾವಣೆಗಳು ಸೇರಿ ಇಲ್ಲಿಯವರೆಗೆ 19 ಚುನಾವಣೆಗಳು ನಡೆದಿವೆ. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಬ್ಬರು ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಕದನದಲ್ಲಿ ತಾರಾಬಾಯಿ ವಿಶ್ವೇಶ್ವರಯ್ಯ ಭೋವಿ ಹಾಗೂ ಜ್ಯೋತಿ ರಮೇಶ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಣದಲ್ಲಿ ಒಟ್ಟು 14 ಅಭ್ಯರ್ಥಿಗಳಿದ್ದಾರೆ.

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ದಶಕಗಳಿಂದಲೂ ಮಹಿಳೆಯರ ಚುನಾವಣಾ ಸ್ಪರ್ಧೆಯು ಗೌಣವಾಗಿದೆ. ಈವರೆಗೆ ಸ್ಪರ್ಧಿಸಿರುವ ಮಹಿಳೆಯರಿಗೆ ಕನಿಷ್ಠ 10 ಸಾವಿರ ಮತಗಳು ಸಹ ಪಡೆಯಲು ಸಾಧ್ಯವಾಗಿಲ್ಲ.

ADVERTISEMENT

ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಎಎಪಿ ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿಲ್ಲ. 19 ಚುನಾವಣೆಗಳ ಪೈಕಿ 1991, 2014 ಹಾಗೂ 2024ರ ಚುನಾವಣೆಯಲ್ಲಿ ಮಹಿಳೆಯರು ಸ್ಪರ್ಧಿಸಿದ ದಾಖಲೆ ಇದೆ.

ಸ್ವಾತಂತ್ರ್ಯ ಬಂದು ಹೈದರಾಬಾದ್ ನಿಜಾಮನ ಆಡಳಿತದಿಂದ ಬಿಡುಗಡೆ ಪಡೆದು ನಾಲ್ಕು ದಶಕಗಳು ಕಳೆದರೂ ಒಬ್ಬ ಮಹಿಳೆಯೂ ಮುಂದೆ ಬಂದು ನಾಮಪತ್ರ ಸಲ್ಲಿಕೆ ಮಾಡಲಿಲ್ಲ. ಮಹಿಳೆಯರು ಕೇವಲ ಮತದಾನಕ್ಕೆ ಸೀಮಿತವಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 1991ರಲ್ಲಿ ಸುಜಾತಾ ಪರಮೇಶ್ವರಿ ಅವರು ಆರ್‌ಪಿಕೆ ಪಕ್ಷದಿಂದ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದರು. ಕಲಬುರಗಿ ‘ಲೋಕ’ ಕಣಕ್ಕೆ ಸ್ಪರ್ಧಿಸಿದ್ದ ಮೊದಲ ಹೆಗ್ಗಳಿಕೆಯೂ ಸುಜಾತಾ ಅವರದ್ದಾಯಿತು.

1991ರಲ್ಲಿನ 10,42,161 ಮತದಾರರ ಪೈಕಿ 2,51,669 ಪುರುಷ ಹಾಗೂ 1,74,789 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾ ಪಕ್ಷದ ಅಭ್ಯರ್ಥಿಗಳೇ ಮತ ಗಳಿಕೆಯ ಸಿಂಹಪಾಲು ಪಡೆದಿದ್ದರು. ಅವರ ನಡುವೆ ಸುಜಾತಾ ಅವರು 1,284 (ಶೇ 0.31ರಷ್ಟು) ಮತ ಗಳಿಸಿಕೊಂಡು, 15 ಅಭ್ಯರ್ಥಿಗಳಲ್ಲಿ 10ನೇ ಸ್ಥಾನ ಪಡೆದಿದ್ದರು.

ಆ ನಂತರ ನಡೆದ 1996 ಮತ್ತು 2004ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಮಹಿಳೆಯರು ಬಳಿಕ ಉಮೇದುವಾರಿಕೆ ಹಿಂಪಡೆದರು. 2009ರಲ್ಲಿ ಮಹಿಳೆಯೊಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. ಚುನಾವಣಾ ಕಣದಲ್ಲಿ ನಾರಿಯರ ಸ್ಪರ್ಧೆ ಮತ್ತೆ ಗೌಣವಾಯಿತು.

2014ರಲ್ಲಿ ಎಎಪಿ ನಾಯಕರು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರಿಗೆ ಟಿಕೆಟ್ ನೀಡಿ ಚುನಾವಣೆ ಕಣಕ್ಕೆ ಇಳಿಸಿತ್ತು. ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಂದಿನ ಬಿಜೆಪಿ ಅಭ್ಯರ್ಥಿ, ಈಗಿನ ಕಾಂಗ್ರೆಸ್ ಮುಖಂಡ ರೇವುನಾಯಕ ಬೆಳಮಗಿ, ಆಗ ಜೆಡಿಎಸ್‌ನಲ್ಲಿದ್ದ ಡಿ.ಜಿ. ಸಾಗರ ಸೇರಿದಂತೆ 8 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿ.ಟಿ. ಲಲಿತಾ ನಾಯಕ್ ಅವರು 9,074 (ಶೇ 0.91ರಷ್ಟು) ಮತ ಪಡೆದು 5ನೇ ಸ್ಥಾನ ಗಳಿಸಿದ್ದರು. ಆದರೆ ಲಲಿತಾ ನಾಯಕ್ ಅವರಿಗಿಂತ ಹೆಚ್ಚು ಮತಗಳು (9,888) ನೋಟಾಗೆ ಬಿದ್ದಿದ್ದವು.

ಅಭ್ಯರ್ಥಿಗಳ ಗೆಲುವಿನಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಿದ್ದರೂ ಮಹಿಳೆಯರಿಗೆ ಟಿಕೆಟ್ ಸಿಗುತ್ತಿಲ್ಲ. ಟಿಕೆಟ್ ಪಡೆದುಕೊಳ್ಳುವಲ್ಲಿ ನಾರಿಯರು ಸಹ ಯಶಸ್ಸು ಕಂಡಿಲ್ಲ. ಎರಡೂ ಪ್ರಮುಖ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಹಿಳೆಯರ ಹೆಸರೂ ಕೇಳಿಬರಲಿಲ್ಲ.

ಮಹಿಳೆಯರಿಗೆ ಪಕ್ಷದ ವರಿಷ್ಠರೊಂದಿಗೆ ಚುನಾವಣೆಯ ಪ್ರಚಾರದ ವೇದಿಕೆ ಹಂಚಿಕೊಳ್ಳುವುದೇ ಸವಾಲಾಗಿದೆ. ಇನ್ನು ಪಕ್ಷದ ಬೆಂಬಲ ಪಡೆದು ಟಿಕೆಟ್ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ ಎಂಬುದು ಮಹಿಳಾ ಮತದಾರರ ಅಭಿಪ್ರಾಯ.

ಜ್ಯೋತಿ ರಮೇಶ
ತಾರಾಬಾಯಿ ವಿಶ್ವೇಶ್ವರಯ್ಯ ಭೋವಿ

10.30 ಲಕ್ಷ ಮಹಿಳಾ ಮತದಾರರು ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ 20.65 ಲಕ್ಷ ಮತದಾರರಿದ್ದು 10.34 ಲಕ್ಷ ಪುರುಷ 10.30 ಲಕ್ಷ ಮಹಿಳಾ ಹಾಗೂ 336 ಇತರೆ ಮತದಾರರು ಇದ್ದಾರೆ. ಚಿತ್ತಾಪುರ (121732) ಸೇಡಂ (116184) ಕಲಬುರಗಿ ದಕ್ಷಿಣ (143844) ಹಾಗೂ ಕಲಬುರಗಿ ಉತ್ತರ ಮತ (157020) ಕ್ಷೇತ್ರಗಳಲ್ಲಿ ಪುರುಷರಗಿಂತ ಮಹಿಳಾ ಮತದಾರತರೇ ಹೆಚ್ಚಿದ್ದಾರೆ. ಈ ಕ್ಷೇತ್ರಗಳಲ್ಲಿ ಪುರುಷ ಮತದಾರರು ಕ್ರಮವಾಗಿ 121011 112987 140703 ಮತ್ತು 154825 ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.