ADVERTISEMENT

ಕಾಳಗಿ: ಕೆಸರು ಗದ್ದೆಯಾದ ರಾಜ್ಯ ಹೆದ್ದಾರಿ

ಪಸ್ತಾಪುರ--, -ರುಮ್ಮನಗೂಡ ಮಾರ್ಗ; ಪ್ರಯಾಣಿಕರ ನರಕಯಾತನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 5:17 IST
Last Updated 19 ಜೂನ್ 2024, 5:17 IST
   

ಕಾಳಗಿ: ತಾಲ್ಲೂಕಿನ ಪಸ್ತಾಪುರ-ಮೊಘ-ರುಮ್ಮನಗೂಡ ಮಾರ್ಗದ ರಾಜ್ಯಹೆದ್ದಾರಿ-165 ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಜನಪ್ರತಿನಿಧಿಗಳ ಮಲತಾಯಿ ಧೋರಣೆಯಿಂದ ಪ್ರಯಾಣಿಕರ ಪಾಲಿಗೆ ನರಕಯಾತನೆಯಾಗಿದೆ ಎಂದು ಜನರು ದೂರಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈ ಮಾರ್ಗ ಮೊದಲು ಜಿಲ್ಲಾ ಮುಖ್ಯ ರಸ್ತೆಯಾಗಿತ್ತು. ಸದ್ಯ ರಾಜ್ಯಹೆದ್ದಾರಿ-165 ಆಗಿ ಮಾರ್ಪಟ್ಟು ಸುಲೇಪೇಟ ಸಂಪರ್ಕದ ರಾಜ್ಯ ಹೆದ್ದಾರಿ-32ಕ್ಕೆ ಸೇರಿಕೊಂಡಿದೆ.

ಮೂರುವರ್ಷಗಳ ಹಿಂದೆ ಚೇಂಗಟಾ, ಚಂದನಕೇರಾ ರಸ್ತೆ ಕಾಮಗಾರಿ ನಡೆದಿತ್ತು. ಈ ವೇಳೆ ಇದೇ ಮಾರ್ಗದಿಂದ (ಪಸ್ತಾಪುರ-ರುಮ್ಮನಗೂಡ) ಸಂಚರಿಸಿದ ಟಿಪ್ಪರ್ ಮತ್ತಿತರ ವಾಹನಗಳ ಭಾರಕ್ಕೆ ಈ ಮಾರ್ಗ ನಲುಗಿಹೋಗಿ ತಗ್ಗುಗುಂಡಿ ಬಿದ್ದಿವೆ.

ADVERTISEMENT

ರಾಜ್ಯಹೆದ್ದಾರಿ-165 ಹಾದು ಹೋಗುವ ಪಸ್ತಾಪುರ, ಮೊಘ, ರುಮ್ಮನಗೂಡ ಈ ಮೂರು ಊರುಗಳು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹೊಂದಿವೆ. ಈ ಮೂರು ಪಂಚಾಯಿತಿ ವ್ಯಾಪ್ತಿಯ ನೂರಾರು ಜನರು, ವಿದ್ಯಾರ್ಥಿಗಳು ಒಂದಿಲ್ಲೊಂದು ಕೆಲಸದ ಸಂಬಂಧ ನಿತ್ಯ ಕಾಳಗಿ, ಸುಲೇಪೇಟ ಕಡೆಗೆ ಪ್ರಯಾಣಿಸುತ್ತಾರೆ.

ಆದರೆ ಪ್ರಯಾಣದ ನಡುವಿನ 7 ಕಿ.ಮೀ ಹೆದ್ದಾರಿಯು ಎಲ್ಲೆಂದರಲ್ಲಿ ಕಿತ್ತುಹೋಗಿ ತಗ್ಗು ಗುಂಡಿಗಳು ಬಿದ್ದಿವೆ. ಮಳೆ ಬಂದಾಗ ನೀರು ನಿಂತು, ಕೆಸರಾಗಿ ವಾಹನ ಸಂಚಾರಕ್ಕೆ ಸಂಕಟವಾಗಿದೆ. ಅದರಲ್ಲೂ ಸಣ್ಣ ವಾಹನಗಳ ಸಂಚಾರವಂತೂ ಹೇಳತೀರದಾಗಿ ಅದೇಷ್ಟೊ ಜನರು ಎದ್ದು ಬಿದ್ದು ಹಿಡಿಶಾಪ ಹಾಕುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಊರು ತಲುಪಬೇಕಾದವರು ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಸುತ್ತಿ ಬಳಸಿ ಬರುವ ಸ್ಥಿತಿ ಇಲ್ಲಿಯ ಜನರ ಜತೆ ಸುತ್ತಲಿನ ಹಳ್ಳಿಗಳ ಜನರ ಪಾಡೂ ಆಗಿದೆ.

ಈ ಅವ್ಯವಸ್ಥೆ ಕಳೆದ ಮೂರು ವರ್ಷಗಳಿಂದಲೂ ಕಂಡುಕಾಣದಂತಿರುವ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲೂ ಕ್ಯಾರೇ ಎನ್ನುತ್ತಿಲ್ಲ. ಪರಿಣಾಮ ಈ ಹೆದ್ದಾರಿ ಮೂಲಕ ಚಲಿಸುವ ಜನರ ಗೋಳು ಕೇಳೋರು ಯಾರು? ಎಂಬ ಪ್ರಶ್ನೆ ಮನೆಮಾಡಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಂತೂ ಪಡಬಾರದ ಕಷ್ಟ ಪಡುವಂತಾಗಿ ಸಮಯಕ್ಕೆ ಸರಿಯಾಗಿ ತಲುಪದೆ ಹಾದಿ ಹೈರಾಣಾಗುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.