ಕಾಳಗಿ: ಪಟ್ಟಣದ ತಹಶೀಲ್ದಾರ್ ಕಚೇರಿ ಅವ್ಯವಸ್ಥೆಯಿಂದ ಕೂಡಿದೆ ಎಂದು ಚಿತ್ತಾಪುರ ಬಿಜೆಪಿ ಮಂಡಲ ಉಪಾಧ್ಯಕ್ಷೆ ಅಂಜನಾದೇವಿ ಎನ್.ನಾಮದಾರ ದೂರಿದ್ದಾರೆ.
ಈ ಕುರಿತು ಸೋಮವಾರ ಕಂದಾಯ ಸಚಿವರಿಗೆ ಪತ್ರ ಬರೆದು ಕೋವಿಡ್-19 ಉಲ್ಬಣಗೊಂಡು 4 ತಿಂಗಳು ಕಳೆಯುತ್ತಿದ್ದರೂ ಇಲ್ಲಿನ ತಹಶೀಲ್ದಾರರು, ಉಪ ತಹಶೀಲ್ದಾರರು ಮತ್ತು ಶಿರಸ್ತೇದಾರರು ಕಚೇರಿ ಬಿಟ್ಟು ಯಾವ ಹಳ್ಳಿಗೂ ಭೇಟಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ತಾಲ್ಲೂಕಿನ ಮಲಘಾಣ ಗ್ರಾಮದಲ್ಲಿ ವೃದ್ಧರು, ಅನಾಥ ಮಕ್ಕಳು, ಅಂಗವಿಕಲರು, ನಿರ್ಗತಿಕರಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ದಿನಸಿ ಕಿಟ್ ನೀಡಿರುವುದಿಲ್ಲ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ರದ್ದುಗೊಂಡಿರುವ ಬಡ ಜನರು ದಿನಕ್ಕೆ ₹200ರಂತೆ ತಹಶೀಲ್ದಾರ್ ಕಚೇರಿಗೆ ಬಂದು ಪಾಳಿ ನಿಲ್ಲುತ್ತಿದ್ದಾರೆ. ಆದರೆ ಸಿಬ್ಬಂದಿ ಮುಂಜಾನೆ 11.30ರಿಂದ ಮಧ್ಯಾಹ್ನ 1.30ರ ವರೆಗೆ ಕಚೇರಿಗೆ ಬಂದು 3 ಗಂಟೆಗೆ ಮನೆಗೆ ಹೋಗುತ್ತಾರೆ ಎಂದು ಆಪಾದಿಸಿದ್ದಾರೆ.
ಜಾತಿ, ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಜನರಿಗೆ ಸಿಬ್ಬಂದಿ ಹಣ ಕೇಳುತ್ತಿದ್ದಾರೆ. ಅದರಂತೆ ಪ್ರಮಾಣ ಪತ್ರ ಕೊಡುವಾಗಲೂ ಹಣ ನೀಡುವಂತೆ ಸತಾಯಿಸುತ್ತಿರುವ ತಹಶೀಲ್ದಾರ್ ಸಿಬ್ಬಂದಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದಕಾರಣ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇವರಿಗೆ ಬಯೋಮೆಟ್ರಿಕ್ ಹಾಜರಾತಿ ಮಾಡಬೇಕು. ಕೊರತೆಯಿರುವ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು ನೇಮಕ ಮಾಡಬೇಕು. 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ನೌಕರರನ್ನು ಇಲ್ಲಿಂದ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ರೀತಿ ನಮ್ಮಲ್ಲಿ ಯಾವುದೇ ತರಹದ ಅವ್ಯವಸ್ಥೆ ನಿರ್ಮಾಣವಾಗಿರುವುದಿಲ್ಲ. ಈ ದೂರು ಸುಳ್ಳಿನಿಂದ ಕೂಡಿದೆ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.