ಕಲಬುರಗಿ: ಕಲಬುರಗಿಯ ಮಿಸ್ಬಾ ನಗರದಲ್ಲಿ ಬುಧವಾರ ರಾತ್ರಿ ನಾಯಿ ಕಚ್ಚಿದ ಬಾಲಕಿಗೆ ಸೂಕ್ತ ಪರಿಹಾರ ನೀಡಬೇಕು. ನಾಯಿ ಕಡಿತದ ಘಟನೆಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಪಾಲಿಕೆ ಸದಸ್ಯರೇ ಮೇಯರ್, ಶಾಸಕರು ಹಾಗೂ ಆಯುಕ್ತರನ್ನು ತಡೆದು ಪ್ರತಿಭಟನೆ ನಡೆಸಿದರು.
ಹಲವು ತಿಂಗಳ ನಂತರ ಮೇಯರ್ ವಿಶಾಲ ದರ್ಗಿ ಅಧ್ಯಕ್ಷೆಯಲ್ಲಿ ಪಾಲಿಕೆ ಸಾಮಾನ್ಯ ಸಭೆ ಕರೆಯಲಾಗಿದ್ದು, ಬೆಳಿಗ್ಗೆ ನಿಗದಿಯಾದ ಸಭೆಗೆ ಆಯುಕ್ತರು, ಶಾಸಕರು, ಆಯುಕ್ತರು, ಉಪಮೇಯರ್ ಸಭೆಯಲ್ಲಿ ಪಾಲ್ಗೊಳ್ಳಲು ಸಭಾಂಗಣಕ್ಕೆ ಬಂದರು. ಆದರೆ ಪಾಲಿಕೆ ಸದಸ್ಯರು, ಸಭಾಂಗಣದ ಬಾಗಿಲಲ್ಲೇ ತಡೆದು, ನಾಯಿ ಕಡಿತಕ್ಕೆ ಪರಿಹಾರ ನೀಡುವವರೆಗೂ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟಿಸಿದರು.
ಸಭೆಯಲ್ಲಿ ಚರ್ಚಿಸೋಣ- ನಿರ್ಧಾರ ಕೈಗೊಳ್ಳೊಣ ಎಂದು ಮೇಯರ್ ವಿಶಾಲ ದರ್ಗಿ, ಶಾಸಕ ಅಲ್ಲಮಪ್ರಭು ಪಾಟೀಲ್, ಆಯುಕ್ತರ ಭುವನೇಶ ಪಾಟೀಲ್ ಹೇಳಿದರು. ವಾದ - ವಿವಾದ ನಡೆದ ನಂತರ ಸಭೆಗೆ ಅವಕಾಶ ನೀಡಲಾಯಿತು.
ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ನಗರದಲ್ಲಿ ನಾಯಿ ಕಡಿತಕ್ಕೆ ಒಳಗಾದ ಆರು ವರ್ಷದ ಬಾಲಕಿ, ಗಂಭೀರವಾಗಿ ಗಾಯಗೊಂಡಿದ್ದಾಳೆ. ಸದ್ಯ ಐಸಿಯು ವಾರ್ಡ್ ನಲ್ಲಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಹತ್ತು ಲಕ್ಷ ಪರಿಹಾರ ನೀಡಬೇಕೆಂದು ಪಾಲಿಕೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನ ಅಜ್ಮಲ್ ಗೋಲಾ ಒತ್ತಾಯಿಸಿದರು.
ನಾಯಿ ಕಡಿತ ಹಾವಳಿ ಕಳೆದ 6 ತಿಂಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಾಲಿಕೆ ಆರೋಗ್ಯ ಅಧಿಕಾರಿ ಹಾಗೂ ಪರಿಸರ ಎಂಜಿನಿಯರ್ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಮುಂದಿನ ದಿನಗಳಲ್ಲಿ ನಾಯಿ ಕಡಿತ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ನಿಟ್ಟಿನಲ್ಲಿ ಸಹಾಯ ಮಾಡುವುದಾಗಿ ನಗರಾಭಿವೃದ್ಧಿ ಸಚಿವರು ಹೇಳಿದ್ದಾರೆಂದು ಸಭೆ ಗಮನಕ್ಕೆ ತಂದರು.
ಸಭೆಯಲ್ಲಿ ಆರೋಗ್ಯ ವಿಭಾಗದ ಹಾಗೂ ಪರಿಸರ ವಿಭಾಗದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಸದಸ್ಯರೆಲ್ಲರೂ ಒತ್ತಾಯಿಸಿದರು.
ಅಮಾನತು:
ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ನಂತರ ಪಾಲಿಕೆ ಆರೋಗ್ಯಾಧಿಕಾರಿ ಡಾ. ವಿವೇಕಾನಂದ ಅವರನ್ನು ಸಭೆಯಲ್ಲಿ ಅಮಾನತು ನಿರ್ಧಾರವನ್ನು ಆಯುಕ್ತರು ಪ್ರಕಟಿಸಿದರು. ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡುವುದಾಗಿಯೂ ತಿಳಿಸಿದರು.
ಬಾಲಕಿಗೆ ₹ 5 ಲಕ್ಷ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದ ಭರಿಸುವುದಾಗಿ ಮೇಯರ್ ಘೋಷಿಸಿದರು.
ಆಯುಕ್ತ-ಆರೋಗ್ಯಾಧಿಕಾರಿ ಜಟಾಜಟಿ:
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ, ಆರೋಗ್ಯಾಧಿಕಾರಿ ಡಾ.ವಿವೇಕಾನಂದ ಮಧ್ಯೆ ಜಟಾಪಟಿ ನಡೆಯಿತು.
ನನಗೆ ಕೆಲಸ ಮಾಡಲು ಒಬ್ಬ ಜವಾನನನ್ನೂ ಕೊಟ್ಟಿಲ್ಲ ಎಂದು ವಿವೇಕಾನಂದ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಭುವನೇಶ್, ವಿವೇಕಾನಂದ ಅವರು ಸ್ಥಳಕ್ಕೆ ಭೇಟಿ ನೀಡದೇ 300 ಟ್ರೇಡ್ ಲೈಸೆನ್ಸ್ ನೀಡಿದ್ದರು. ಹೀಗಾಗಿ ಅಮಾನತು ಮಾಡಲಾಗಿತ್ತು. ನಂತರ ಕೆಎಟಿಗೆ ಹೋಗಿ ತಡೆಯಾಜ್ಞೆ ತಂದಿದ್ದರು. ಅಲ್ಲದೇ, ನನ್ನ ವಿರುದ್ಧ ಮಾನನಷ್ಟ ಪ್ರಕರಣವನ್ನೂ ದಾಖಲಿಸಿದ್ದರು. ತಡೆಯಾಜ್ಞೆ ತಂದಿದ್ದರಿಂದ ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಯಿತು.
ಆಗ ಮಧ್ಯಪ್ರವೇಶಿಸಿದ ವಿವೇಕಾನಂದ, ಮಾನನಷ್ಟ ಮೊಕದ್ದಮೆಯನ್ನು ವಾಪಸ್ ಪಡೆದಿದ್ದೇನೆ. ಅದನ್ನೂ ಹೇಳಿ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.