ADVERTISEMENT

ಶಿವರಾತ್ರಿ: ದರ್ಗಾ ಪ್ರವೇಶಕ್ಕೆ ಮುನ್ನ ಶ್ರೀರಾಮ ಸೇನೆಯಿಂದ ಲಿಂಗ ಪೂಜೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 8:26 IST
Last Updated 18 ಫೆಬ್ರುವರಿ 2023, 8:26 IST
   

ಆಳಂದ (ಕಲಬುರಗಿ ಜಿಲ್ಲೆ): ಇಲ್ಲಿನ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಸಲ್ಲಿಸಲು ಹೈಕೋರ್ಟ್‌ನಿಂದ ಅನುಮತಿ ಪಡೆದಿರುವ ಶ್ರೀರಾಮ ಸೇನೆಯು ಅದಕ್ಕೂ‌ ಮೊದಲು ಪಟ್ಟಣದ ಹೊರವಲಯದಲ್ಲಿ ಶಿವರಾತ್ರಿ ‌ಮಹಾಸಂಗಮ ಹೆಸರಿನಲ್ಲಿ ಶಿವಲಿಂಗಪೂಜೆ ನಡೆಸುತ್ತಿದೆ.

ಬ್ಯಾನರ್‌ನಲ್ಲಿ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗದ ಚಿತ್ರವನ್ನು ಮುದ್ರಿಸಲಾಗಿದ್ದು, ಮುಚ್ಚಿಟ್ಟ ಸತ್ಯದ ಅನಾವರಣ ಎಂದು ಬರೆಯಲಾಗಿದೆ.

ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಹರ್ಷಾನಂದ ಗುತ್ತೇದಾರ ನೇತೃತ್ವದಲ್ಲಿ ಪೂಜೆ ನಡೆಯುತ್ತಿದ್ದು, ಜಿಲ್ಲೆಯ ವಿವಿಧೆಡೆಯಿಂದ ಬಂದಿರುವ ಶ್ರೀರಾಮಸೇನೆ ಹಾಗೂ ಬಿಜೆಪಿ ಕಾರ್ಯಕರ್ತರು ಕೇಸರಿ ಪಂಚೆ, ಕೇಸರಿ ಧರಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ADVERTISEMENT

ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಶ್ರೀರಾಮಸೇನೆ ರಾಜ್ಯ ಅಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ, ಕಡಗಂಚಿಯ ವೀರಭದ್ರ ಸ್ವಾಮೀಜಿ, ಗೊಬ್ಬರವಾಡಿಯ ಬಳಿರಾಮ ಮಹಾರಾಜ, ಕೇಂದ್ರ ಸಚಿವ ಭಗವಂತ ‌ಖೂಬಾ, ಸಂಸದ ಡಾ.ಉಮೇಶ್ ಜಾಧವ, ಶಾಸಕರಾದ ದತ್ತಾತ್ರೇಯ ‌ಪಾಟೀಲ‌ ರೇವೂರ, ರಾಜಕುಮಾರ್ ‌ಪಾಟೀಲ ತೇಲ್ಕೂರ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ‌ ಸೇರಿದಂತೆ 15 ಜನರಿಗೆ ದರ್ಗಾ ಪ್ರವೇಶಿಸಲು ಅನುಮತಿ ನೀಡಲಾಗಿದೆ.

ಆಕ್ಷೇಪ: ದರ್ಗಾ ಪ್ರವೇಶ ವಿವಾದವು ಹೈಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದ್ದು, ಈಗಲೂ ಪಟ್ಟಣದಲ್ಲಿ ಸೂಕ್ಷ್ಮ ಪರಿಸ್ಥಿತಿ ‌ಇರುವುದರಿಂದ ನಿಷೇಧಾಜ್ಞೆ ವಿಧಿಸಲಾಗಿದೆ. ನಿಷೇಧಾಜ್ಞೆ ‌ಇದ್ದರೂ ಶ್ರೀರಾಮಸೇನೆಯವರಿಗೆ ಸಾವಿರಾರು ‌ಜನರನ್ನು ಸೇರಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಿದ್ದೇಕೆ‌ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.

ಯಾರಾದರೂ ಪ್ರಚೋದನೆ ನೀಡಿ ಗಲಭೆ ಎಬ್ಬಿಸಿದರೆ ಯಾರು ಹೊಣೆ ‌ಎಂದು ಪ್ರಶ್ನಿಸಿದರು.

ಈ ಕುರಿತು 'ಪ್ರಜಾವಾಣಿ'ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ನಿಷೇಧಾಜ್ಞೆ ‌ಆಳಂದ ಪಟ್ಟಣ ವ್ಯಾಪ್ತಿಯಲ್ಲಿ ‌ಮಾತ್ರ ಜಾರಿಯಲ್ಲಿದೆ. ಹೊರವಲಯದಲ್ಲಿ ‌ನಿಷೇಧಾಜ್ಞೆ ಅನ್ವಯವಾಗುವುದಿಲ್ಲ. ಹಾಗಾಗಿ ಸಭೆ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.