ಕಲಬುರಗಿ: ಹಗಲಿನಲ್ಲಿ ದೇವರ ಸೇವೆ ಹೆಸರಲ್ಲಿ ಓಡಾಟ, ರಾತ್ರಿ ವೇಳೆ ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ಅಶೋಕ ನಗರ ಠಾಣೆಯ ಪೊಲೀಸರು ಬುಧವಾರ ಬೆಳಿಗ್ಗೆ ಗುಂಡಿನ ದಾಳಿ ನಡೆಸಿ, ಬಂಧಿಸಿದ್ದಾರೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರ ತಾಲ್ಲೂಕಿನ ಝಳಕೋಳ ಗ್ರಾಮದ ಲವಾ ಮತ್ತು ದೇವಿದಾಸ ಬಂಧಿತರು. ಇಬ್ಬರ ಕಾಲಿಗೂ ಗುಂಡು ತಗುಲಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶೋಕ ನಗರ ಠಾಣೆಯ ಕಾನ್‌ಸ್ಟೆಬಲ್ ಶಿವಶರಣಪ್ಪ ಅವರಿಗೆ ಗಾಯಗಳಾಗಿದ್ದು, ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಹಗಲು ಹೊತ್ತಿನಲ್ಲಿ ದೇವರ ಮೂರ್ತಿಯನ್ನು ವಾಹನದಲ್ಲಿ ಇಟ್ಟುಕೊಂಡು ಭಕ್ತರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದ ಆರೋಪಿಗಳು ರಾತ್ರಿ ಕಳ್ಳತನ ಮಾಡುತ್ತಿದ್ದರು. ಮಂಗಳವಾರ ರಾತ್ರಿ ರಾತ್ರಿ ಕಲಬುರಗಿಯ ಬಿದ್ದಾಪುರ ಕಾಲೊನಿಯಲ್ಲಿ ಮನೆಗಳವು ಜೊತೆಗೆ ಕೆಲವರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಜನರು ನೋಡಿದರು. ಅದರಲ್ಲಿ ಇಬ್ಬರನ್ನು ಹಿಡಿದು ತಂದು ಠಾಣೆಗೆ ಒಪ್ಪಿಸಿದರು. ಇನ್ನಿಬ್ಬರು ಪರಾರಿಯಾದರು' ಎಂದು ಪೊಲೀಸರು ತಿಳಿಸಿದ್ದಾರೆ.
'ನಾಪತ್ತೆಯಾಗಿದ್ದ ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದೆವು. ಒಬ್ಬ ಆರೋಪಿ ಕಲಬುರಗಿ ನಗರದ ಹೊರವಲಯದಲ್ಲಿ ಇರುವ ಮಾಹಿತಿ ಸಿಕ್ಕಿತು. ಈಗಾಗಲೇ ಬಂಧಿತ ಆರೋಪಿಗಳನ್ನು ಕರೆದುಕೊಂಡು ಇನ್ನಿಬ್ಬರನ್ನು ಬಂಧಿಸಲು ಹೋದೆವು. ಆಗ ನಗರದ ಹೊರವಲಯದ ಬಬಲಾದ್ ಕ್ರಾಸ್ ಬಳಿ ಬಂಧಿತರು, ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಮುಂದಾದರು. ಹೀಗಾಗಿ ಆತ್ಮರಕ್ಷಣೆಗಾಗಿ ಪಿಐ ಪಂಡಿತ್ ಸಗರ್ ಅವರು ಇಬ್ಬರ ಕಾಲಿಗೆ ಗುಂಡು ಹೊಡೆದರು' ಎಂದು ಪೊಲೀಸರು ತಿಳಿಸಿದ್ದಾರೆ.
ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.