ADVERTISEMENT

ಕಲ್ಯಾಣ ಕರ್ನಾಟಕ | ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ: ಹಲವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 6:57 IST
Last Updated 1 ನವೆಂಬರ್ 2024, 6:57 IST
   

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ಯತ್ನಿಸಿದ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

‌ನಗರದ ಕೋರ್ಟ್‌ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಪ್ರತ್ಯೇಕ ರಾಜ್ಯದ ಧ್ವಜವನ್ನು ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಬಂದ ಎಂ.ಎಸ್. ಪಾಟೀಲ, ವಿನೋದ ಕುಮಾರ ಜೆನೇವರಿ, ಲಕ್ಮೀಕಾಂತ ಸ್ವಾದಿ, ಶ್ರವಣಕುಮಾರ ನಾಯಕ, ಶರಣಗೌಡ ಪೊಲೀಸ್ ಪಾಟೀಲ ನರಿಬೋಳ, ಉದಯಕುಮಾರ ಜೇವರ್ಗಿ, ಸೋಮಶೇಖರ ಸ್ವಾಮಿ, ಸಂಗನಗೌಡ ಪಾಟೀಲ, ಸುಮಾ ಕವಲ್ದಾರ, ಅನುರಾಧಾ ಹೂಗಾರ, ಶಮೀನಾ ಬೇಗಂ, ಶಹನಾಜ್ ಶೇಖ್, ವಿಶ್ವರಾಧ್ಯ ಬಡಿಗೇರ, ಸಿದ್ದಣ್ಣ ನಾಯಕ, ನಿಂಗಣ್ಣ ಚಿಗರಹಳ್ಳಿ, ದೌಲತರಾಯ ನೀರಲಕೋಡ, ಸುನಿಲ್ ಶಿರ್ಕೆ, ಶರಣು ಮಳಖೇಡ, ಸಂಗು ಕಾಳನೂರ್, ಚಿದಾನಂದ ಸ್ವಾಮಿ, ಪ್ರಶಾಂತ ಶಿರೂರ ಇತರರನ್ನು ಸ್ಟೇಶನ್ ಬಜಾರ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ, ‘ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರ ಅನ್ಯಾಯವಾಗುತ್ತಿದೆ. 371 (ಜೆ) ಕಲಂ ಸಂಪೂರ್ಣ ಕಾರ್ಯರೂಪಕ್ಕೆ ಬರುತ್ತಿಲ್ಲ. ಸಂಪೂರ್ಣ ಜಾರಿಯಾಗಲು ಕಲ್ಯಾಣ ಕರ್ನಾಟಕ ಹೊರತುಪಡಿಸಿದ ಜನಪ್ರತಿನಿಧಿಗಳು ಹಾಗೂ ಕೆಲ ಕುತಂತ್ರಿ ಅಧಿಕಾರಿಗಳು ಬಿಡುತ್ತಿಲ್ಲ. ನಮ್ಮ ಭಾಗದ ಅದಿಕಾರಿಗಳಿಗೆ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲ. ಅಡಿಕೆ, ರಾಗಿ ಬೆಳೆಗಳಿಗೆ ನೀಡುವ ಪ್ರಾಮುಖ್ಯತೆ ನಮ್ಮ ಪ್ರದೇಶದ ತೊಗರಿ, ಜೋಳಕ್ಕೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ತೆಲಂಗಾಣ ಮಾದರಿ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ADVERTISEMENT

‘ಇಂದು ಸರ್ಕಾರ ಪೊಲೀಸರ ಮುಖಾಂತರ ಹೋರಾಟ ಹತ್ತಿಕ್ಕಿಸುವ ಪ್ರಯತ್ನ ಮಾಡಿದೆ. ಇದು ಖಂಡನೀಯ. ಬಂಧನಕ್ಕೆ ಹೆದರಿ ಹೋರಾಟ ಕೈಬಿಡದೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ‘ ಎಂದು ಹೇಳಿದರು.

ಸ್ಟೇಶನ್ ಬಜಾರ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶಕೀಲ್ ಅಂಗಡಿ ಅವರು ಹೋರಾಟಗಾರರಿಗೆ ನೋಟಿಸ್ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಮನೆಗೆ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.