ಕಮಲಾಪುರ: ಸೇತುವೆ ಹಳ್ಳದಲ್ಲಿ ಬಿದ್ದು ಸುಟ್ಟು ಕರಕಲಾಗಿ 7 ಜನರನ್ನು ಬಲಿ ತೆಗೆದುಕೊಂಡ ಖಾಸಗಿ ಸ್ಲೀಪರ್ ಬಸ್ ಮೇಲೆತ್ತಲು ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು.
ಸಂಪೂರ್ಣವಾಗಿ ಸುಟ್ಟು ಎಂಜಿನ್ ಮತ್ತು ಕಬ್ಬಿಣದ ಜೋಡಣೆಗಳಿಂದ 16 ಅಡಿಯ ಹಳ್ಳದಲ್ಲಿ ಬಸ್ ಬಿದ್ದಿತ್ತು. ಒಂದು ಬದಿಯಲ್ಲಿ ಸೇತುವೆ ಇದ್ದರೆ, ಉಳಿದ ಮೂರೂ ಬದಿಗಳಲ್ಲಿ ಎತ್ತರದ ಮಣ್ಣಿನ ಗುಡ್ಡಿಗಳಿದ್ದವು.
ಬಸ್‌ನ ಶೇ 90ರಷ್ಟು ಭಾಗಿ ತಗ್ಗಿನಲ್ಲಿ ಚಾಚಿಕೊಂಡಿತ್ತು. ಬೆಳಿಗ್ಗೆ 11.25ರಿಂದ ಆರಂಭವಾದ ಕಾರ್ಯಾಚರಣೆ ಸುಮಾರು 45 ನಿಮಿಷ ತೆಗೆದುಕೊಂಡಿತು.
ಆರಂಭದಲ್ಲಿ ಒಂದು ಕ್ರೇನ್ ಬಳಸಿ ಬಸ್ ಅನ್ನು ಹಿಂದಕ್ಕೆ ಎಳೆಯಲು ಪ್ರಯತ್ನಿಸಲಾಯಿತು. ಆದರೆ, ಅದು ಜಾಗ ಬಿಟ್ಟು ಕದಲಿಲ್ಲ. ಸ್ವಲ್ಪ ಹೊತ್ತಿನ ನಂತರ ಇನ್ನೊಂದು ದೊಡ್ಡ ಕ್ರೇನ್ ತರಲಾಯಿತು. ಚಿಕ್ಕ ಕ್ರೇನ್ ಎಂಜಿನ್ ಬಾರ ಎತ್ತಿದ್ದರೇ ದೊಡ್ಡ ಕ್ರೇನ್ ಹಿಂಬದಿಯಿಂದ ಮೇಲಕ್ಕೆ ಎಳೆಯಿತು. ಹಂತ ಹಂತವಾಗಿ ಮೇಲೆತ್ತುತ್ತಿದ್ದಂತೆ ಬಸ್ ಒಳಗಿನ ಸುಟ್ಟ ದೇಹಗಳು ಕೆಳ ಬಿದ್ದವು.
ಸಾವಿರಾರು ಜನರು ಬಸ್ ಸುತ್ತ ನೆರೆದು ಕ್ರೇನ್ ಕಾರ್ಯಾಚಾರಣೆಯ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದರು. ಕೆಲವರು ತೀರ ಹತ್ತಿರದಲ್ಲಿ ಹೋಗಿ ವಿಡಿಯೊ ಮಾಡಲು ಯತ್ನಿಸಿದಾಗ ಪೊಲೀಸರು ಅವರನ್ನು ಗದರಿಸಿ ಚದುರಿಸಿದರು. ಕಾರ್ಯಾಚರಣೆ ಮುಗಿಯುವವರೆಗೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಂಡುಬಂತು.
ಸ್ಥಳಕ್ಕೆ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವಭಗವಂತ ಖೂಬಾ, ಬಿಜೆಪಿ ಮುಖಂಡ ಗೋರಖನಾಥ ಶಾಕಾಪುರೆ, ಎಸ್‌ಪಿ ಇಶಾ ಪಂತ್, ಎಎಸ್‌ಪಿ ಪ್ರಸನ್ನ ದೇಸಾಯಿ, ತಹಶೀಲ್ದಾರ್ ಸುರೇಶ ವರ್ಮಾ, ಡಿವೈಎಸ್‌ಪಿ ಶೀಲವಂತ ಎಸ್‌ಎಚ್, ಸಿಪಿಐ ಶ್ರೀಮಂತ ಇಲ್ಲಾಳ, ಪಿಎಸ್‌ಐ ಶಿವಶಂಕರ ಸುಬ್ಬೇದಾರ, ಟಿಎಚ್‌ಒ ಮಾರುತಿ ಕಾಂಬಳೆ, ವಿಜಯ ಶಾಮುವೆಲ್ ಸ್ಥಳಕ್ಕೆ ಭೇಟಿ ನೀಡಿದರು.
ಶವ ಗುರುತು ಪತ್ತೆ ಸವಾಲು: ಮೃತ ದೇಹಗಳೆಲ್ಲ ಸುಟ್ಟು ಕರಕಲಾಗಿ ಮಾಂಸದ ಮುದ್ದೆಗಳಂತೆ ಆಗಿದ್ದವು. ಯಾವ ಶವ ಯಾರದ್ದು ಎಂದು ಪತ್ತೆ ಮಾಡಲು ಪೊಲೀಸರು, ವೈದ್ಯಾಧಿಕಾರಿಗಳು ಹರಸಾಹಸ ಪಟ್ಟರು.ಮೃತ ದೇಹದ ಮೇಲಿದ್ದ ಕೊರಳ ಚೈನ್‌ನಂತಹ ಸಾಮಗ್ರಿಗಳಿಂದ ತಕ್ಕ ಮಟ್ಟಗಿ ಗುರುತು ಪತ್ತೆ
ಮಾಡಲಾಯಿತು.
ಅಗ್ನಿ ಶಾಮಕ ಕಚೇರಿ ಸ್ಥಾಪನೆಗೆ ಒತ್ತಾಯ: ‘ಕಮಲಾಪುರ ಪಟ್ಟಣದಲ್ಲಿ ಅಗ್ನಿ ಶಾಮಕದಳ ಕಚೇರಿ ಇಲ್ಲ. ಅಗ್ನಿ ಅವಘಡ ಸಂಭವಿಸಿದರೆ ಕಲಬುರಗಿ, ಇಲ್ಲವೇ ಹುಮನಾಬಾದ್‌ನಿಂದ ಕರೆಯಿಸಬೇಕು. ಎರಡೂ 35 ಕಿ.ಮೀ ಅಂತರದಲ್ಲಿ ಇವೆ. ಸಿಬ್ಬಂದಿ ಬರುವಷ್ಟರಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುತ್ತದೆ. ಪಟ್ಟಣದಲ್ಲಿ ಅಗ್ನಿ ಶಾಮಕ ದಳ ಕಚೇರಿ ಇದರೇ ಈ ದುರ್ಘಟನೆ ತಪ್ಪಿಸಬಹುದಿತ್ತು. ಕೂಡಲೇ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಅಗ್ನಿಶಾಮದಳ ಕಚೇರಿ ಸ್ಥಾಪನೆಗೆ ಮುಂದಾಗಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.