ಕಮಲಾಪುರ: ಬೆಳಕು ಹರಿಯುವುದರ ಒಳಗೆ ದೇವರ ಸನ್ನಿಧಿ ತಲುಪಿ ದರ್ಶನ ಪಡೆಯಬೇಕಿದ್ದವರು ಜವರಾಯನ ಅಟ್ಟಹಾಸದಿಂದ ಸೀದಾ ದೇವರ ಪಾದ ಸೇರಿದ್ದಾರೆ.
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನಕ್ಕೆ ತೆಲಂಗಾಣದಿಂದ ತೆರಳುತ್ತಿದ್ದ ನಾಲ್ವರು ಶನಿವಾರ ನಸುಕಿನ ಜಾವ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
‘ದರ್ಶನಕ್ಕೆ ಹೊರಟವರು ದೇವರ ಪಾದ ಸೇರಿದರು. ದೇವರೇ ತನ್ನತ್ತ ಕರೆದುಕೊಂಡ’ ಎಂದು ಅಪಘಾತವಾದ ಸ್ಥಳದಲ್ಲಿ ಸೇರಿದ್ದ ಜನರು ಮರುಗಿದ ದೃಶ್ಯ ಕಂಡುಬಂತು.
ಕಮಲಾಪುರ ತಾಲ್ಲೂಕಿನ ಮರಗುತ್ತಿ ಕ್ರಾಸ್ ಆನಂದ ಶಾಲೆ ಸಮೀಪದ ಬಂಜಾರಾ ಹಿಲ್ಸ್ ದಾಬಾ ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಮಹೀಂದ್ರಾ ಪಿಕಪ್ ಗೂಡ್ಸ್ ವಾಹನದ ನಡುವೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ.
ಗೂಡ್ಸ್ ವಾಹನ ಚಾಲಕ ಸುರೇಶ ಹಲ್ಲಿರಾಮ ರಾಜಸ್ಥಾನ ಮೂಲದವನಾಗಿದ್ದಾನೆ ಎಂದು ತಿಳಿದು ಬಂದಿದ್ದು ಸಣ್ಣಪುಟ್ಟ ಗಾಯಗಳಾಗಿವೆ.
ಬಿಡಿಎಲ್ ಕಂಪನಿಯಲ್ಲಿ ಮುಖ್ಯ ಮೆಕಾನಿಲ್ ಟೆಕ್ನಿಶಿಯನ್ ಆಗಿದ್ದ ಶ್ರೀನಿವಾಸ ಭಾರ್ಗವಕೃಷ್ಣ ಹಾಗೂ ಪತ್ನಿ ಸಂಗೀತಾಲಕ್ಷ್ಮೀ ಒಂದು ವಾರದ ಮುಂಚೆಯೇ ದತ್ತನ ದರ್ಶನಕ್ಕೆ ತೆರಳಲು ನಿಶ್ಚಯಿಸಿದರು. ಆದರೆ ಅದು ಕೈಗೂಡಲಿಲ್ಲ. ಈ ಶನಿವಾರ ದರ್ಶನ ಪಡೆಯಬೇಕು ಎಂದು ನಿಶ್ಚಯಿಸಿ ಸ್ನೇಹಿತನ ಕಾರಿನಲ್ಲಿ ತೆರಳಿದ್ದರು.
‘ಶ್ರೀನಿವಾಸ ಭಾರ್ಗವಕೃಷ್ಣ ಎಲ್ಲೇ ಹೋಗಬೇಕಾದರೂ ಕಾರು ಚಾಲನೆಗೆ ತನ್ನ ಸ್ನೇಹಿತ ರಾಘವೇಂದ್ರಗೌಡ ಅವರನ್ನೇ ಕರೆದುಕೊಂಡು ಹೋಗುತ್ತಿದ್ದರು. ಈ ಬಾರಿಯೂ ರಾಘವೇಂದ್ರಗೌಡ ಅವರೇ ಕಾರು ಚಾಲನೆ ಮಾಡುತ್ತಿದ್ದರು. ಜತೆಗೆ ಬಿಡಿಎಲ್ ಕಂಪನಿಯಲ್ಲೆ ಶ್ರೀನಿವಾಸ ಭಾರ್ಗವಕೃಷ್ಣ ಅವರ ಕೈಕೆಳಗೆ ಕಾರ್ಮಿಕನಾಗಿದ್ದ ಭಾನುಪ್ರಸಾದನನ್ನು ಕೆರೆದುಕೊಂಡು ಹೋಗಿದ್ದರು. ಅಫಘಾತದಲ್ಲಿ ನಾಲ್ವರೂ ಒಟ್ಟಿಗೆ ಮೃತಪಟ್ಟಿದ್ದಾರೆ’ ಎಂದು ಸಂಬಂಧಿಕರು ಕಣ್ಣೀರು ಸುರಿಸಿದರು.
ಬೆಳಿಗ್ಗೆ ಮೃತದೇಹಗಳನ್ನು ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ತೆಲಂಗಾಣದಿಂದ ಸಂಬಂಧಿಕರು ಆಗಮಿಸಿದ ಬಳಿಕ ಪ್ರಕರಣ ದಾಖಲಿಸಿ ಶವಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಯಿತು.
ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಎಎಸ್‌ಪಿ ಬಿಂದುಮಣಿ, ಶ್ರೀನಿಧಿ, ಸಿಪಿಐ ಶಿವಶಂಕರ ಸಾಹು, ಪಿಎಸ್‌ಐ ಸಂಗೀತಾ ಸಿಂಧೆ, ಆಶಾ ರಾಠೋಡ್, ಶಿವಶಂಕರ ಸುಬೇದಾರ, ಕುಪೇಂದ್ರ, ಕಿಶನ ಜಾಧವ್, ಹುಸೇನ ಪಟೇಲ, ರಾಜಶೇಖರ ಮತ್ತಿತರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗೂಡ್ಸ್ ವಾಹನ ಚಾಲಕನ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.