ADVERTISEMENT

ಕಮಲಾಪುರಕ್ಕೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರು

ತಾಲ್ಲೂಕು ಮಟ್ಟದ ಜನಸ್ಪಂದನ ಸಭೆ: ಜಿಲ್ಲಾಧಿಕಾರಿ ಫೌಜಿಯಾ ತರನುಮ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:31 IST
Last Updated 23 ಜುಲೈ 2024, 14:31 IST
ಕಮಲಾಪುರದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಸರ್ಕಾರಿ ಪ್ರಾಯೋಗಿಕ ಶಾಲೆ ಮಕ್ಕಳು ತಯ್ಯಾರಿಸಿದ ಕರಕುಶಲ ವಸ್ತು ಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದರು. ಎಸ್‌ಪಿ ಅಡ್ಡೂರು ಶ್ರೀನಿವಾಸಲು, ರೂಪಿಂದರ ಕೌರ, ಬಿಂದುಮಣಿ, ಶಿಕ್ಷಕಿ ನೇತ್ರಾ ರಾಂಪೂರ, ಅಂಬಿಕಾ ಉಪ್ಪಿನ ಹಾಜರಿದ್ದರು ಹಾಜರಿದ್ದರು
ಕಮಲಾಪುರದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಸರ್ಕಾರಿ ಪ್ರಾಯೋಗಿಕ ಶಾಲೆ ಮಕ್ಕಳು ತಯ್ಯಾರಿಸಿದ ಕರಕುಶಲ ವಸ್ತು ಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದರು. ಎಸ್‌ಪಿ ಅಡ್ಡೂರು ಶ್ರೀನಿವಾಸಲು, ರೂಪಿಂದರ ಕೌರ, ಬಿಂದುಮಣಿ, ಶಿಕ್ಷಕಿ ನೇತ್ರಾ ರಾಂಪೂರ, ಅಂಬಿಕಾ ಉಪ್ಪಿನ ಹಾಜರಿದ್ದರು ಹಾಜರಿದ್ದರು   

ಕಮಲಾಪುರ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಆದೇಶಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನುಮ್‌ ಹೆಳಿದರು.

ಕಮಲಾಪುರ ಕೋಹಿನೂರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.

ಕಮಲಾಪುರ ಜನಸಂಖ್ಯೆ ಹೆಚ್ಚಾಗಿದೆ. ಪ್ರಥಮಿಕ ಆರೋಗ್ಯ ಕೇಂದ್ರದಿಂದ ಸೂಕ್ತ ಸೇವೆ ಒದಗಿಸಲಾಗುವುದಿಲ್ಲ. ಹೀಗಾಗಿ ಸದ್ಯ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ADVERTISEMENT

ಸೂಕ್ತ ಸಮಯಕ್ಕೆ ಹಾಜರಾಗಿ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ನಿಮ್ಮ ಇಲಾಖೆ ಹಾಗೂ ಕಚೇರಿ ಗೌರವ ಹೆಚ್ಚಿಸಿ. ತಾಲ್ಲೂಕು ಆಡಳಿತದಲ್ಲಿ ಪಾರದರ್ಶಕತೆ, ಜನರ ಸಮಸ್ಯೆ ಪರಿಹಾರದಲ್ಲಿ ವೇಗ ಒದಗಿಸುವುದುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಲ್ಲಿ ಸ್ವೀಕೃತವಾದ ಅಹವಾಲುಗಳು ಸಂಬಂಧಪಟ್ಟವರಿಗೆ ವಿಲೆವಾರಿಯಾಗಬೇಕು. ಜನರಿಗೆ ಪರಿಹಾರ ಕಲ್ಪಿಸಬೇಕು. ತಿಂಗಳ ನಂತರ ಸ್ವೀಕೃತ ಅರ್ಜಿಗಳ ಸ್ಥಿತಿಗತಿ ಮರು ಪರಿಶೀಲಿಸಲಾಗುವುದು. ಬ್ಯಾಂಕಗಳ ಅವ್ಯವಸ್ಥೆ ಕುರಿತು ಹೆಚ್ಚು ದೂರುಗಳಿವೆ. ಸರ್ಕಾರದ ಯೋಜನೆಗಳನ್ನು ಸಕಾರಗೊಳಿಸಲು ಬ್ಯಾಂಕ್ ಅಧಿಕಾರಿಗಳು ಜನರೊಂದಿಗೆ ಸಕಾರಾತ್ಮಕವಾಗಿ ನಡೆದುಕೊಳ್ಳಬೇಕು ಎಂದರು.

ಬೆಳೆ ಪರಿಹಾರ ಹಾಗೂ ಬೆಳೆ ವಿಮೆಯಲ್ಲಿ ಜಿಲ್ಲೆಗೆ ಈ ವರ್ಷ 730 ಕೋಟಿ ಅನುದಾನ ಬಂದಿದೆ. ಈ ಬಾರಿ ಸಮರ್ಪಕ ಮಳೆಯಾಗುತ್ತಿದೆ. ಬೆಳೆ ಚೆನ್ನಾಗಿವೆ. ಸಾಂಕ್ರಾಮಿಕ ರೋಗದ ಭೀತಿ ಇದೆ. ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯವರು ನೈರ್ಮಲ್ಯಕ್ಕೆ ಒತ್ತುಕೊಡಬೇಕು. ಆರೋಗ್ಯ ಇಲಾಖೆಯವರು ಜನರಿಗೆ ಅರಿವು ಮೂಡಿಸಬೇಕು ಎಂದರು.

ಎಸ್‌ಪಿ ಅಡ್ಡೂರು ಶ್ರೀನಿವಾಸಲು ಮಾತನಾಡಿ ಮಹಾಗಾಂವ, ಕಮಲಾಪುರ ಪೊಲೀಸ ಠಾಣೆ ಸರಹದ್ದಿನಲ್ಲಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಶಾಲೆ, ಕಾಲೇಜುಗಳ ಬಳಿ ಪುಡಾರಿಗಳು ಸುಳಿಯದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜನರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಜಿಲ್ಲೆಯಲ್ಲಿ, 15 ತುರ್ತು ಸೇವೆ 112 ವಾಹನ ಒದಗಿಸಲಾಗಿದೆ. ಸೈಬರ್‌ ಕ್ರೈಮ ಬಗ್ಗೆ ಎಚ್ಚರದಿಂದಿರಬೇಕು. ನಿಮಗೆ ಯಾಮಾರಿಸಿ ಆನ್ಲೈನ್‌ನಲ್ಲಿ ದುಡ್ಡು ಎಗರಿಸುತ್ತಾರೆ. ನಿಮ್ಮ ದುಡ್ಡು ಬೇರೆಯವರಿಗೆ ವರ್ಗಾವಣೆಯಾದರೆ ಕೂಡಲೇ 1930ಗೆ ಕರೆ ಮಾಡಿ ತಿಳಿಸಬೇಕು ಎಂದರು.

ಗ್ರಾಮಗಳ ರಸ್ತೆ, ಜಮೀನುಗಳ ರಸ್ತೆ, ಬೆಳೆ ಪರಿಹಾರ, ಕುಡಿಯುವ ನೀರು, ಶಾಲಾ ಕಟ್ಟಡ, ಆಸ್ಪತ್ರೆ, ಪ್ರಾಥಮಿಕ ಕೃಷಿ ಪತ್ತಿನ ಸಂಘ, ವಕ್ಫ್ ಮಂಡಳಿ ಆಸ್ತಿವಿವಾದ, ಪುನರ್ವಸತಿ ಕೇಂದ್ರದಲ್ಲಿ ನಿವೇಶನ ಒದಗಿಸವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜನ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು. ಒಟ್ಟು 130 ಅರ್ಜಿಗಳು ಸ್ವೀಕೃತವಾಗಿದ್ದು, ವೃದ್ಧಾಪ್ಯ, ಅಂಗವಿಕಲ, ವಿಧವಾ ಸೇರಿದಂತೆ ವಿವಿಧ ಪಿಂಚಣಿಯ 11ಜನ ಫಲಾನುಭವಿಗಳಿಗೆ ಸ್ಥಳದಲ್ಲೆ ಆದೇಶ ಪ್ರತಿ ನೀಡಲಾಯಿತು.

ಸಹಾಯಕ ಆಯುಕ್ತೆ ರೂಪಿಂದರ ಕೌರ, ಎಎಸ್‌ಪಿ ಬಿಂದುಮಣಿ, ತಹಶೀಲ್ದಾರ ಮೊಹಮ್ಮದ ಮೋಸಿನ ಅಹಮ್ಮದ, ಗಂಗಾಧರ ಪಾಟೀಲ, ಸಿಪಿಐ ವಿ.ನಾರಾಯಣ, ತಾ.ಪಂ. ಇಒ ಅಂಬ್ರೇಶ ಪಾಟೀಲ, ಟಿಎಚ್ಒ ಮಾರುತಿ ಕಾಂಬಳೆ, ಪ.ಪಂ ಮುಖ್ಯಾಧೀಕಾರಿ ಶಾಂತಪ್ಪ ಹಾದಿಮನಿ, ಚಂದ್ರಕಾಂತ ಜೀವಣಗಿ, ಬಿಇಒ ಸೋಮಶೇಖರ ಹಂಚಿನಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕಮಲಾಪುರದಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಅಂಗವಿಕಲ ಬಾಲಕನಿಗೆ ಜಿಲ್ಲಾಧಿಕಾರಿ ಫೌಜಿಯಾ ತರನುಮ್‌ ಸ್ಥಳದಲ್ಲೆ ಪಿಂಚಣಿ ಆದೇಶ ಪ್ರತಿ ವಿತರಿಸಿದರು
ಕಮಲಾಪುರದಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆಯನ್ನು ಜಿಲ್ಲಾಧಿಕಾರಿ ಫೌಜಿಯಾ ತರನುಮ್‌ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.