ಕಲಬುರಗಿ: ‘ಕೀರ್ತನೆಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದವರು ಕನಕರು. ಅವರು ಇತರರಂತೆ ಬರೀ ಕಿವಿಗೆ ಮಧುರವಾದ ಸಾಹಿತ್ಯ, ಸಂಗೀತ ನೀಡಿದವರಲ್ಲ. ಮನಸಿಗೆ ಆನಂದವಾಗುವಂಥ ಸಾಹಿತ್ಯ–ಸಂಗೀತ ನೀಡಿದವರು. ಆ ಮೂಲಕ ಮನದ ಕಲ್ಮಶ ತೊಳೆಯುವ ಸಂದೇಶ ಸಾರಿದವರು’ ಎಂದು ಹುಲಿಜಂತಿ ಪಟ್ಟದ ಮಾಳಿಂಗರಾಯ ಮಹಾರಾಯ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ನಮಗೆಲ್ಲ ಮುತ್ತಜ್ಜ, ಅವರಜ್ಜರ ಹೆಸರು ಗೊತ್ತಿರಲಿಕ್ಕಿಲ್ಲ. ಆದರೆ, ಶತಮಾನಗಳ ಹಿಂದೆ ಬದುಕಿದ್ದ ಸಂತ ಕನಕದಾಸರು ಎಲ್ಲರಿಗೂ ಗೊತ್ತು. ಬುದ್ಧ, ಬಸವ, ಅಂಬೇಡ್ಕರ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಭಗತ್‌ಸಿಂಗ್, ವೀರರಾಣಿ ಕಿತ್ತೂರು ಚನ್ನಮ್ಮ ಅವರೆಲ್ಲ ಯಾರೆಂಬುದು ತಿಳಿದಿದೆ. ಅದಕ್ಕೆ ಕಾರಣ ನಮ್ಮ ಮುತ್ತಜ್ಜ, ಅವರಜ್ಜರು ಕೇವಲ ಕುಟುಂಬ, ಸಂಸಾರಕ್ಕೆ ಸೀಮಿತವಾಗಿ ಬದುಕಿದ್ದರು. ಆದರೆ, ಕನಕ, ಬುದ್ಧ, ಬಸವ, ಅಂಬೇಡ್ಕರ್ ಅವರಂಥ ಮಹನೀಯರು ಕೇವಲ ತಮ್ಮ ಕುಟುಂಬ, ಜಾತಿಗಾಗಿ ಬದುಕಲಿಲ್ಲ. ಸಕಲ ಮಾನವಕುಲದ ಹಿತಕ್ಕಾಗಿ ಬದುಕಿದರು. ಅವರೆಲ್ಲ ಕಾರ್ಯಕ್ರಮಗಳನ್ನು ಜಾತಿ–ಕುಲ–ಮತಗಳ ಭೇದವಿಲ್ಲದೇ ಆಚರಿಸಿದರೆ, ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಆಗುತ್ತದೆ’ ಎಂದರು.
‘ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರವಾದದ್ದು. ಅದರಲ್ಲಿ ಹೆಪ್ಪು ಹಾಕುವವರಿಗಿಂತ ಉಪ್ಪು ಹಾಕುವವರೇ ಹೆಚ್ಚು. ಹೆಪ್ಪು ಹಾಕಿದರೆ ಮೊಸರು ಸಿಗುತ್ತೆ. ಶ್ರಮ ಹಾಕಿದರೆ ಅದನ್ನು ತಿಳಿ ತುಪ್ಪವಾಗಿಸಬಹುದು. ಉಪ್ಪು ಹಾಕಿದರೆ, ಹಾಲು ಪ್ರಯೋಜನಕ್ಕೆ ಬಾರದು. ಹಾಲುಮತದವರೆಲ್ಲ ಹಣೆಗೆ ಹಚ್ಚುವ ಭಂಡಾರ, ಹೆಗಲ ಮೇಲಿನ ಕಂಬಳಿ, ನುಡಿಸುವ ಡೊಳ್ಳಿನ ಮಹತ್ವ ಅರಿಯಬೇಕಿದೆ’ ಎಂದು ಸಲಹೆ ನೀಡಿದರು.
‘ಕನಕದಾಸರ ಚಿತ್ರದ ಮೆರವಣಿಗೆಯ ಡಿ.ಜೆ ಮುಂದೆ ಕುಣಿಯಲು, ಬೆಳಿಗ್ಗೆ ಬೈಕ್ ರ‍್ಯಾಲಿ ವೇಳೆ ಬಹಳಷ್ಟು ಯುವಕರಿದ್ದರು. ದಾಸರ ಸಂದೇಶ ಆಲಿಸಲು ಅವರೆಲ್ಲ ಕಾಣುತ್ತಿಲ್ಲ. ಸಂಗೊಳ್ಳಿ ರಾಯಣ್ಣನ ಆದರ್ಶ ನಮ್ಮೆಲ್ಲ ಯುವಕರಿಗೆ ಅಗತ್ಯವಿದೆ. ಆತನ ಆದರ್ಶಗಳನ್ನು ಎದೆಯಲ್ಲಿಟ್ಟು ಗೌರವಿಸಿದರೆ, ಮಾನವರಾಗಿ ಹುಟ್ಟಿದ್ದಕ್ಕೂ ಸ್ವಾರ್ಥಕವಾಗುತ್ತದೆ’ ಎಂದರು.
ಇದಕ್ಕೂ ಮೊದಲು ಉಪನ್ಯಾಸಕ ಬಾಬುರಾವ ಈ. ಪೂಜಾರಿ ಅವರು ಕನಕದಾಸರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುನಾಥ ಪೂಜಾರಿ, ಜಿಲ್ಲಾ ಪಂಚಾಯಿತಿ ಅಧಿಕಾರಿ ಜಗದೇವಪ್ಪ, ಡಿಡಿಪಿಐ ಸೂರ್ಯಕಾಂತ ಮದಾನೆ, ಕನಕವೇಷಧಾರಿ ಬಾಲಕ ಸೃಜನ ಎಸ್. ಕಮಠಾಣ ವೇದಿಕೆಯಲ್ಲಿದ್ದರು.
ತಿಮ್ಮಪ್ಪನಾಗಿ ಹುಟ್ಟಿ ಸಾಮಾನ್ಯರಾಗಿ ಬೆಳೆದು ನಾಯಕರಾಗಿ ದುಡಿದು ದಾಸ ಶ್ರೇಷ್ಠರಾಗಿ ಹೊರಹೊಮ್ಮಿದ ಮಹನೀಯರು ಕನಕದಾಸರು. ಅವರು ಮನುಕುಲದ ಶ್ರೇಷ್ಠ ಸಂತ.ಅಲ್ಲಮಪ್ರಭು ಪಾಟೀಲ ಶಾಸಕ
ಮುಂದಿನ ಎರಡು ತಿಂಗಳಲ್ಲಿ ಕಲಬುರಗಿ ಬೆಳಗಾವಿ ಮೈಸೂರು ವಿಭಾಗದಲ್ಲಿ ಕುರುಬ ಸಮಾಜದ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆದೇವಿಂದ್ರಪ್ಪ ಮರತೂರ ಅಧ್ಯಕ್ಷ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.