ಕಲಬುರಗಿ: ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಸಂತ ಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್. ಮಾತನಾಡಿ, ‘ಶ್ರೀಕೃಷ್ಣ ಪರಮಾತ್ಮನ ಪರಮ ಭಕ್ತ ಕನಕದಾಸರು ದಾರ್ಶನಿಕ ಕವಿ, ಸಮಾಜ ಸುಧಾರಕ, ವೈಚಾರಿಕ ಸಂತ, ಕಾಲಜ್ಞಾನಿ, ಕವಿ ಕಲಾತಿಲಕ, ಶ್ರೇಷ್ಠ ದಾಸ, ಮಹಾ ಸಂತ. ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕನ್ನಡ ಸಾಹಿತ್ಯ ಚರಿತ್ರೆಯ ಅದಮ್ಯ ಚೇತನರಾಗಿದ್ದರು’ ಎಂದರು.
ಕೇಂದ್ರ ಕಾರಾಗೃಹದ ಬಂದಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿದರು. ಸಂಸ್ಥೆಯ ಪ್ರಭಾರ ಅಧೀಕ್ಷಕ ಬಿ.ಸುರೇಶ, ಕಚೇರಿ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಜೈಲರ್ ಸುನಂದಾ ವಿ.ಆರ್. ಭಾಗವಹಿಸಿದ್ದರು. ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.