ADVERTISEMENT

ಕಲಬುರ್ಗಿ ನಿಜವಾದ ಕಲ್ಯಾಣಕ್ಷೇತ್ರ: ಎಚ್. ಎಸ್‌. ವೆಂಕಟೇಶಮೂರ್ತಿ

ಬಿಸಿಲುನಾಡಲ್ಲ; ಹೊಂಬಿಸಿಲ ನಾಡು

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಫೆಬ್ರುವರಿ 2020, 6:21 IST
Last Updated 5 ಫೆಬ್ರುವರಿ 2020, 6:21 IST
ಎಚ್‌.ಎಸ್‌.ವೆಂಕಟೇಶಮೂರ್ತಿ
ಎಚ್‌.ಎಸ್‌.ವೆಂಕಟೇಶಮೂರ್ತಿ   

ಕಲಬುರ್ಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬುಧವಾರದಿಂದ ಆರಂಭವಾಗಲಿದೆ. ಸಮ್ಮೇಳನಾಧ್ಯಕ್ಷ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಕಲಬುರ್ಗಿಗೂ ತಮಗೂ ಇರುವ ಸ್ನೇಹಬಾಂಧವ್ಯವನ್ನು‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿಮೆಲುಕು ಹಾಕಿದ್ದಾರೆ...

* ಸಾಮಾನ್ಯವಾಗಿ ಬೆಂಗಳೂರಿನಿಂದ ಕಲಬುರ್ಗಿಗೆ ಬಂದವರಿಗೆ ಇಲ್ಲಿ ಕಾಣುವಂಥದ್ದು ಬಿಸಿಲು, ದೂಳು – ಇಂಥವೇ. ನೀವೂ ಕೂಡ ಇಲ್ಲಿಗೆ ಬೆಂಗಳೂರಿನಿಂದ ಬಂದಿದ್ದೀರಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಗಮಿಸಿದ್ದೀರಿ. ನಿಮ್ಮ ಕಣ್ಣಿಗೆ ಕಲಬುರ್ಗಿ ಹೇಗೆ ಕಾಣುತ್ತಿದೆ?

–ಬಿಸಿಲು, ಬೆಳದಿಂಗಳು – ಇವೆಲ್ಲವೂ ಬಹಿರಂಗದ ಸಂಗತಿಗಳು. ನಮಗೆ ಪ್ರಿಯವಾದ ಜಾಗದಲ್ಲಿಯ ಬಿಸಿಲು ಕೂಡ ನಮಗೆ ಪ್ರಿಯವಾಗುತ್ತದೆ. ನಮ್ಮ ಹಳ್ಳಿಯಲ್ಲಿ ದೊಡ್ಡ ಕಾಡಿಲ್ಲ; ಆದರೆ ಅಲ್ಲಿರುವ ಕುರುಚಲು ಗಿಡಗಳೇ ನಮಗೆ ಪ್ರಿಯವಾಗುತ್ತದೆ. ಅಂದರೆ ಪ್ರೀತಿ ದೊಡ್ಡದು. ಹೀಗಾಗಿ ನಾನು ಇದನ್ನು ಬಿಸಿಲುನಾಡು ಎಂದು ಕರೆಯೋಲ್ಲ, ಹೊಂಬಿಸಿಲ ನಾಡು ಎಂದು ಕರೆಯುತ್ತೇನೆ.

ADVERTISEMENT

* ನಿಮ್ಮನ್ನು ಸಮನ್ವಯದ ಕವಿ ಎಂದೇ ಜನರು ಗುರುತಿಸುತ್ತಾರೆ. ಈ ನೆಲವೂ ಒಂದು ಅರ್ಥದಲ್ಲಿ ಸಮನ್ವಯವನ್ನೇ ಸಾರುತ್ತಿದೆ ಎನ್ನಬಹುದು. ಒಂದು ಕಡೆ ಬಂದಾ ನವಾಜ್‌ ದರ್ಗಾ, ಮತ್ತೊಂದು ಕಡೆ ದತ್ತಾತ್ರೇಯನ ಕ್ಷೇತ್ರ ಗಾಣಗಾಪುರ; ಈ ಕಡೆ ಶರಣ ಬಸವೇಶ್ವರ ದೇವಸ್ಥಾನ, ಆ ಕಡೆ ಬುದ್ಧ ವಿಹಾರ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?

ಇದು ನಿಜವಾಗಲೂ ಕಲ್ಯಾಣಕ್ಷೇತ್ರ. ಜಗತ್ತಿನ ಕಲ್ಯಾಣ ಇರುವುದು ಎಲ್ಲರೂ ಒಟ್ಟಾಗಿ ಬಾಳುವುದರಲ್ಲಿ. ಇಲ್ಲಿ ಬೌದ್ಧಧರ್ಮ, ವೀರಶೈವಧರ್ಮ, ಇಸ್ಲಾಂಧರ್ಮ – ಎಲ್ಲರೂ ಸೇರಿಕೊಂಡು ಅಣ್ಣತಮ್ಮಂದಿರಂತೆ ಬಾಳುತ್ತಿದ್ದಾರೆ. ಇಲ್ಲಿ ಸಂಯುಕ್ತ ಜೀವನಕ್ರಮ ಇದೆ. ಹಲವಾರು ಧರ್ಮಗಳು ಸಮರಸದಿಂದ ಒಂದಾಗಿ ಬದುಕುತ್ತಿರುವಂಥದ್ದನ್ನು ಇಲ್ಲಿ ನೋಡಬಹುದು. ಹೀಗಾಗಿ ಇದು ನಿಜವಾದ ಕಲ್ಯಾಣಕೇಂದ್ರ. ಹಿಂದೆ ಬಸವಣ್ಣನವರ ಕಾಲದಲ್ಲಿದ್ದ ಕಲ್ಯಾಣಕ್ಷೇತ್ರವನ್ನು ಈಗ ಈ ಪ್ರದೇಶ ಪ್ರತಿನಿಧಿಸುತ್ತಿದೆ ಎನ್ನಬಹುದು. ಇಲ್ಲಿ ಕನ್ನಡ ಇದೆ, ಮರಾಠಿ ಇದೆ, ಉರ್ದು ಇದೆ – ಎಲ್ಲರೂ ಪರಸ್ಪರ ಸೌಹಾರ್ದದಿಂದ ವ್ಯವಹರಿಸುತ್ತಿದ್ದಾರೆ. ಇದು ನಮಗೆ ಆದರ್ಶವಾಗಬೇಕು. ಇಂಡಿಯಾದಲ್ಲಿ ಈಗ ನಡೆಯಬೇಕಾದ ದೊಡ್ಡ ಸಂಗತಿ ಇದು. ‘ಬದುಕು, ಬದುಕಲು ಬಿಡು; ಒಟ್ಟಾಗಿ ಬದುಕು’ – ಇದು ಆದರ್ಶವಾಗಬೇಕು. ಇಂಥ ಆದರ್ಶ ಇಲ್ಲಿದೆ.

* ಇಲ್ಲಿಗೆ ನೀವು ಹಿಂದಿನ ಸಲ ಬಂದದ್ದಕ್ಕೂ ಈಗ ಬಂದಿರುವುದಕ್ಕೂ ಏನಾದರೂ ವ್ಯತ್ಯಾಸ ಕಾಣುತ್ತಿದೆಯೆ?

ಏನೂ ಇಲ್ಲ; ಅದೇ ಪ್ರೀತಿ, ಅದೇ ಮುಗ್ಧತೆ, ಅದೇ ಅರಳಿದ ಮುಖಗಳು. ಸ್ನೇಹಶಿಲವಾದ ವಾತಾವರಣದಲ್ಲಿ ಏನೂ ವ್ಯತ್ಯಾಸ ಕಾಣ್ತಾ ಇಲ್ಲ. ಇಲ್ಲಿ ಬಿಸಿಲು ಜೋರಾಗಿದ್ದಾಗ ನನ್ನ ಸ್ನೇಹಿತರು ನನಗೆ ಛತ್ರಿ ಹಿಡಿದರು. ಬಿಸಿಲನ್ನು ಪರಿಹರಿಸುವ ವಾತ್ಸಲ್ಯಭಾವ ಇಲ್ಲಿ ಇದ್ದೇ ಇದೆ. ಇದು ನಮಗೆ ಮುಖ್ಯ. ವಾಸ್ತವ ಕಠೋರವಾಗಿದೆ; ಆದರೆ ಆ ಕಠೋರತೆಯನ್ನು ಸಹ್ಯವನ್ನಾಗಿಸಬಲ್ಲ ಸ್ನೇಹ ಇಲ್ಲಿದೆ. ಅದಕ್ಕೆ ನಾನು ಇದನ್ನು ‘ಹೊಂಬಿಸಿಲಿನ ನಾಡು’ ಎಂದು ಕರೆಯುವೆ.

ಪ್ರೀತಿಯ ವರ್ತುಲ ಹಿಗ್ಗಿಸಿಕೊಳ್ಳಿ

ಆಧುನಿಕ ಜೀವನದ ಒತ್ತಡದ ಕಾರಣದಿಂದ ನಾವು ಸಮುದಾಯವಾಗಿ ಬದುಕುವಂಥ ವಿವೇಕವನ್ನು ಇಂದು ಕಳೆದುಕೊಳ್ಳುತ್ತಿದ್ದೇವೆ. ವ್ಯಕ್ತಿಕೇಂದ್ರಿತ ಸ್ವಾತಂತ್ರ್ಯ ಹೆಚ್ಚಿದಂತೆಲ್ಲ ನಾವು ಕೂಡಿ ಬದುಕುವ ಪ್ರವೃತ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಮನೆಗಳು ಮೊದಲಿನ ಹಾಗೆ ತುಂಬಿಕೊಂಡಿಲ್ಲ; ಗಂಡ–ಹೆಂಡತಿ ಜೊತೆಯಾಗಿದ್ದರೆ ಅದೇ ‘ಜಾಯಿಂಟ್‌ ಫ್ಯಾಮಿಲಿ’ – ಕೂಡು ಕುಟುಂಬ – ಎನ್ನುವಂತಾಗಿದೆ.

ಈಗ ನಾವು ಮತ್ತೆ ಸಾಮರಸ್ಯದ ಬದುಕನ್ನು ಸ್ಥಾಪಿಸಬೇಕಿದೆ. ಈ ಹಿನ್ನೆಲೆಯಲ್ಲಿಯೇ ನಾನು ‘ಶ್ರೀಸಂಸಾರಿ’ ಪದ್ಯವನ್ನು ಬರೆದದ್ದು. ಅಲ್ಲಿ ರಾಮ ಇಡೀ ಕುಟುಂಬವನ್ನು ಒಟ್ಟಾಗಿ ಇಟ್ಟುಕೊಂಡು, ಪೂಜೆಗೊಳ್ಳುತ್ತಾನೆ. ಅದು ರಾಮನ ಪೂಜೆ ಅಲ್ಲ, ಸಂಸಾರದ ಪೂಜೆ. ಅದಕ್ಕೆ ಅವನನ್ನು ಶ್ರೀಸಂಸಾರಿ ಎಂದು ಕರೆದದ್ದು. ಹೀಗೆ ನಮ್ಮ ದೇಶದಲ್ಲಿ ನಡೆಯುವಂಥದ್ದು ಕುಟುಂಬದ ಆರಾಧನೆ. ಕುಟುಂಬ ಭದ್ರವಾದರೆ ಸಮಾಜ ಭದ್ರವಾಗುತ್ತೆ, ಸಮಾಜ ಭದ್ರವಾದರೆ ದೇಶ ಭದ್ರವಾಗುತ್ತೆ. ಸಂಸಾರ ಎನ್ನುವುದು ‘ಬೇಸಿಕ್‌ ಯೂನಿಟ್‌’ – ಮೂಲ ಘಟಕ.

ಎಲ್ಲಕ್ಕೂ ಮೂಲವಾದದ್ದು ಕುಟುಂಬ. ಈ ಕುಟುಂಬದ ಕಲ್ಪನೆ ಅಖಂಡವಾಗಿ ವಿಸ್ತಾರವನ್ನು ಪಡೆಯುವಂಥದ್ದು. ಈ ಹಿನ್ನೆಲೆಯಲ್ಲಿಯೇ ‘ವಸುಧೈವ ಕುಟುಂಬಕಮ್‌’ ಕಲ್ಪನೆ ಬಂದದ್ದು; ಇಡೀ ವಿಶ್ವವೇ ಒಂದು ಕುಟುಂಬ ಎನ್ನುವುದು ಇದರ ಆಶಯ. ಕುವೆಂಪು ಅವರು ಕೂಡ ಇದನ್ನೇ ಹೇಳಿದ್ದು ‘ಆಗು ನೀ ಅನಿಕೇತನ’ ಎಂದು. ‘ಕನ್ನಡಿಗನಾಗು’ ಎಂದು ಅವರು ಎಷ್ಟು ದೃಢವಾಗಿ ಹೇಳುತ್ತಾರೋ, ಅಷ್ಟೇ ದೃಢವಾಗಿ ‘ವಿಶ್ವಮಾನವನಾಗು’ ಎಂದೂ ಹೇಳುತ್ತಾರೆ.

ಇದು ಪರಸ್ಪರ ವಿರೋಧವಲ್ಲ, ಪೂರಕ. ಕನ್ನಡಿಗನಾಗಿಯೇ ವಿಶ್ವಮಾನವನಾಗಬೇಕು. ಸಂಸಾರಿಯಾಗಿಯೇ ಸಾರ್ವಜನಿಕ ಜೀವಿಯಾಗಬೇಕು. ನಾನು ಮನೆಯಲ್ಲಿ ಹೇಗೆ ಒಬ್ಬ ಸದಸ್ಯನೋ, ಹಾಗೆಯೇ ಸಮಾಜದಲ್ಲಿಯೂ ಒಬ್ಬ ಸದಸ್ಯ. ಇವೆರಡೂ ಭಿನ್ನವಲ್ಲ; ವರ್ತುಲವನ್ನು ಹಿಗ್ಗಿಸಿಕೊಳ್ಳುವ ಕ್ರಮ. ನಮ್ಮ ಪ್ರೀತಿಯ ವರ್ತುಲವನ್ನು ಹಿಗ್ಗಿಸಿಕೊಂಡು ಅದನ್ನು ವಿಶ್ವದ ತನಕ ವಿಸ್ತರಿಸಿಕೊಳ್ಳಬೇಕು – ಇದು ನಮ್ಮ ದೊಡ್ಡವರ ಆಶಯವಾಗಿತ್ತು, ಕನಸಾಗಿತ್ತು. ಕನಿಷ್ಠ ಪಕ್ಷ ನಾವು ಈ ಆಶಯವನ್ನು ನಮ್ಮ ಬೀದಿಗಾದರೂ ವಿಸ್ತಾರ ಮಾಡಬೇಕಲ್ಲ? ನಮ್ಮ ಹಳ್ಳಿಗಾದರೂ ವಿಸ್ತಾರ ಮಾಡಬೇಕಲ್ಲ? ನಮ್ಮ ನಗರಕ್ಕಾದರೂ ವಿಸ್ತಾರಮಾಡಬೇಕಲ್ಲ? ಇದನ್ನು ನಾನು ಇಂದು ಆಶಿಸುತ್ತಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.