ADVERTISEMENT

36 ಸೆಟ್, 4 ನೆಟ್ ಪರೀಕ್ಷೆ ಪಾಸಾದ ದಾನಯ್ಯ: ಅಕ್ಕಲಕೋಟದ ಕನ್ನಡ ಶಿಕ್ಷಕನ ಸಾಧನೆ

ಮನೋಜ ಕುಮಾರ್ ಗುದ್ದಿ
Published 24 ಆಗಸ್ಟ್ 2024, 6:02 IST
Last Updated 24 ಆಗಸ್ಟ್ 2024, 6:02 IST
ವಿವಿಧ ರಾಜ್ಯಗಳ ಸೆಟ್, ರಾಷ್ಟ್ರಮಟ್ಟದ ನೆಟ್ ಪರೀಕ್ಷೆಯಲ್ಲಿ ಪಾಸಾದ ಪ್ರಮಾಣಪತ್ರಗಳೊಂದಿಗೆ ದಾನಯ್ಯ ಕೌಂಟಗಿಮಠ
–ಪ್ರಜಾವಾಣಿ ಚಿತ್ರ
ವಿವಿಧ ರಾಜ್ಯಗಳ ಸೆಟ್, ರಾಷ್ಟ್ರಮಟ್ಟದ ನೆಟ್ ಪರೀಕ್ಷೆಯಲ್ಲಿ ಪಾಸಾದ ಪ್ರಮಾಣಪತ್ರಗಳೊಂದಿಗೆ ದಾನಯ್ಯ ಕೌಂಟಗಿಮಠ –ಪ್ರಜಾವಾಣಿ ಚಿತ್ರ   

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಅಕ್ಕಲಕೋಟ ನಗರದಲ್ಲಿ ಕೆಎಲ್‌ಇ ಸಂಸ್ಥೆಯ ಮಂಗರೋಳೆ ಕನ್ನಡ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕರಾಗಿರುವ ದಾನಯ್ಯ ಕೌಟಗಿಮಠ ಅವರು  ರಾಷ್ಟ್ರಮಟ್ಟದ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ - ನಾಲ್ಕು ಹಾಗೂ ರಾಜ್ಯಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆ 36 ಸೇರಿದಂತೆ 77- ಶಿಕ್ಷಕರ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ದಾಖಲೆ ಮಾಡಿದ್ದಾರೆ.

ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ‍ಪದವಿ ಪಡೆದಿರುವ ದಾನಯ್ಯ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರೂ ರಾಜ್ಯಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆ ಬರೆಯಬೇಕು ಎಂಬ ಉದ್ದೇಶದಿಂದ ಅಧ್ಯಯನ ಮಾಡಿ ಕರ್ನಾಟಕದಲ್ಲಿಯೇ ಇಂಗ್ಲಿಷ್, ಭಾಷಾಶಾಸ್ತ್ರ, ಮಹಿಳಾ ಅಧ್ಯಯನ, ಜಾನಪದ ಸಾಹಿತ್ಯ ಮತ್ತು ಶಿಕ್ಷಣ ವಿಷಯದಲ್ಲಿ ಸೆಟ್ ಪರೀಕ್ಷೆಗಳನ್ನು ಪಾಸ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ 2018ರಲ್ಲಿ ಆ ರಾಜ್ಯದ ಸೆಟ್ ಪರೀಕ್ಷೆಯನ್ನು ಬರೆದ ದಾನಯ್ಯ, ಇಡೀ ರಾಜ್ಯಕ್ಕೇ ಪ್ರಥಮ ರ‍್ಯಾಂಕ್ ಬಂದಿರುವುದಾಗಿ ಹೇಳಿ ಅಂಕಪಟ್ಟಿಗಳನ್ನು ತೆರೆದು ಮುಂದಿಟ್ಟರು. ಅಖಿಲ ಭಾರತ ಮಟ್ಟದ ಸಹಾಯಕ ಪ‍್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಾದ ಯುಜಿಸಿ ನೆಟ್, ಸಿಬಿಎಸ್‌ಇ ನೆಟ್ ಸೇರಿದಂತೆ ನಾಲ್ಕು ಬಗೆಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೇ, ವಿವಿಧ ರಾಜ್ಯಗಳ ಟಿಇಟಿ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಿ‌ದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ ಯೂನಿಕ್ ವರ್ಲ್ಡ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಸಂಸ್ಥೆಗಳು ಪ್ರಮಾಣಪತ್ರಗಳನ್ನು ನೀಡಿವೆ.

ADVERTISEMENT

ತಮ್ಮ ಸಾಧನೆಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ದಾನಯ್ಯ ಕೌಟಗಿಮಠ, ‘ಹತ್ತು ವರ್ಷಗಳ ಹಿಂದೆ ಕುಟುಂಬದಲ್ಲಿ ನಡೆದ ಕೆಲ ಬೆಳವಣಿಗೆಗಳಿಂದ ಬೇಸರವಾಗಿತ್ತು. ಆ ನೋವಿನಿಂದ ಹೊರಬರಲು ಆರಿಸಿಕೊಂಡ ಮಾರ್ಗವೇ ಸೆಟ್ ಪರೀಕ್ಷೆಗಾಗಿ ಅಧ್ಯಯನ ಮಾಡುವುದು. ಮೊದಲ ಹಂತದಲ್ಲಿ ಕರ್ನಾಟಕದ ಸೆಟ್ ಪರೀಕ್ಷೆ ಪಾಸ್ ಆದೆ. ನಂತರ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಸೆಟ್ ಪರೀಕ್ಷೆಗಳನ್ನು ಬರೆದು ಪಾಸಾದೆ. ನಂತರ ನೆಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣನಾದೆ’ ಎಂದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಆದರೆ, ನಾನು ಪಟ್ಟು ಬಿಡದೇ ಇದ್ದಾಗ ಅಧಿಕಾರಿಗಳು ಯುಜಿಸಿಗೆ ಪತ್ರ ಬರೆದು ಅನುಮತಿ ಕೇಳಿದ್ದರು. ಯುಜಿಸಿ ಸೂಚನೆ ಮೇರೆಗೆ ನನಗೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿತು’ ಎಂದು ಹೇಳಿದರು.

ನೆಟ್ ಸೆಟ್ ಆಕಾಂಕ್ಷಿಗಳಿಗೆ ಮಾರ್ಗದರ್ಶನ
ದೇಶದ ಹಲವು ಸೆಟ್ ಪರೀಕ್ಷೆಗಳಲ್ಲಿ ಪಾಸಾಗಿರುವ ಕನ್ನಡಿಗ ದಾನಯ್ಯ ಕೌಟಗಿಮಠ ಅವರು ತಾವು ಗಳಿಸಿದ ವಿದ್ಯೆಯನ್ನು ಧಾರೆ ಎರೆಯಲು ಮುಂದಾಗಿದ್ದು ಪರೀಕ್ಷೆಯಲ್ಲಿ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳ ಬಗ್ಗೆ ಕಿರುಪುಸ್ತಕಗಳನ್ನು ಹೊರತಂದಿದ್ದಾರೆ. ಅಲ್ಲದೇ NET SET TET by DGK Sir ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಉಚಿತವಾಗಿ ಪರೀಕ್ಷೆ ಪಾಸಾಗುವ ವಿಧಾನಗಳನ್ನು ಹೇಳಿಕೊಡುತ್ತಿದ್ದಾರೆ. ‘ನನ್ನ ಪಾಠಗಳನ್ನು ಕೇಳಿದ 270 ಕರ್ನಾಟಕದ ವಿದ್ಯಾರ್ಥಿಗಳು ಹಾಗೂ 36 ಮಹಾರಾಷ್ಟ್ರದ ವಿದ್ಯಾರ್ಥಿಗಳು ಸೆಟ್ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ’ ಎನ್ನುತ್ತಾರೆ ದಾನಯ್ಯ. ವಿದ್ಯಾರ್ಥಿಗಳು ಮಾಹಿತಿಗೆ ದಾನಯ್ಯ ಅವರ ಮೊಬೈಲ್ ಸಂಖ್ಯೆ 73978 47907ಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.