ಕಲಬುರಗಿ: ಭಾರತದ ಪ್ರಜ್ವಲ್ ದೇವ್, ಕರಣ್ ಸಿಂಗ್, ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್, ರಷ್ಯಾದ ಬಾಗ್ದಾನ್ ಬಾಬ್‌ರೋವ್ ಅವರು ಇಲ್ಲಿ ನಡೆಯುತ್ತಿರುವ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಆದರೆ ಮೂರನೇ ಶ್ರೇಯಾಂಕದ ಇಗೊರ್ ಅಗಾಫೋನೊವ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು.
ಬುಧವಾರ ಮೊದಲ ಸುತ್ತಿನ ಪಂದ್ಯದಲ್ಲಿ ಕನ್ನಡಿಗ ಎಸ್.ಡಿ. ಪ್ರಜ್ವಲ್ ದೇವ್ ಅವರು 6–2, 6–3 ರಿಂದ ಜಪಾನಿನ ಕಜುಕಿ ನಿಶಿವಾಕಿ ಅವರನ್ನು ಪರಾಭವಗೊಳಿಸಿದರು. ನಾಲ್ಕನೇ ಶ್ರೇಯಾಂಕದ ಕರಣ್ ಸಿಂಗ್ 7–6, 6–0 ಯಿಂದ ಆದಿತ್ಯ ಬಾಲಶೇಖರ ವಿರುದ್ಧ ಸುಲಭ ಜಯ ಸಾಧಿಸಿದರು.
ಅಗ್ರ ಶೇಯಾಂಕದ ಸುಲ್ತಾನೋವ್ ಅವರು 7–6, 6–1ರಿಂದ ಭಾರತದ ವಿಷ್ಣುವರ್ಧನ್ ವಿರುದ್ಧ ಗೆಲುವು ಪಡೆದರೆ, ಎರಡನೇ ಶ್ರೇಯಾಂಕಿತ ಬಾಗ್ದಾನ್ ಬಾಬ್‌ರೋವ್ 6–2, 6–0ಯಿಂದ ಭಾರತದ ಮನಸ್ ಧಾಮ್ನೆ ವಿರುದ್ಧ ನೇರ ಸೆಟ್‌ಗಳ ಜಯ ಸಾಧಿಸಿದರು.
ಭಾರತದ ಸಿದ್ಧಾರ್ಥ್ ರಾವತ್ ಅವರು 6–2, 2–0ಯಿಂದ ಮೂರನೇ ಶ್ರೇಯಾಂಕದ ರಷ್ಯಾದ ಇಗೋರ್ ಅಗಾಫೋನೊವ್ ವಿರುದ್ಧ ಮುನ್ನಡೆಯಲ್ಲಿದ್ದರು. ಈ ವೇಳೆ ಅಗಾಫೋನೊವ್ ಅವರು ಗಾಯಗೊಂಡು ಪಂದ್ಯದಿಂದ ನಿವೃತ್ತರಾಗಬೇಕಾಯಿತು.
ಇತರ ಪಂದ್ಯಗಳಲ್ಲಿ ಅಮೆರಿಕದ ನಿಕ್ ಚಾಪೆಲ್ 5–7, 6–3, 6–2ರಿಂದ ಪ್ರಣವ್ ಕಾರ್ತಿಕ್ ಅವರನ್ನು, ಇಂಡೋನೇಷ್ಯಾದ ಅಂಥೋನಿ ಸುಸಾಂತೊ 6–1, 6–7, 7–6 ರಿಂದ ಭಾರತದ ಪ್ರಿಯಾಂಶು ಚೌಧರಿ ವಿರುದ್ಧ ಗೆಲುವು ಸಾಧಿಸಿದರು.
ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಕರ್ನಾಟಕದ ರಿಷಿ ರೆಡ್ಡಿ ಅವರು ರಷ್ಯಾದ ಮ್ಯಾಕ್ಸಿಮ್ ಝುಕೊ ಎದುರು 2–6, 5–7 ರಿಂದ ಹಿಮ್ಮೆಟ್ಟಿದರು.
ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಇಂಡೋನೇಷ್ಯಾದ ಎಂ.ಆರ್. ಫಿತ್ರಿಯಾದಿ 6–1, 6–4 ರಿಂದ ಭಾರತದ ಯುವಾನ್ ನಂದಾಳ್ ಅವರನ್ನು; ಭಾರತದ ರಿಷಭ್ ಅಗರವಾಲ್ 6–3, 5–7, 6–3ರಿಂದ ಆದಿಲ್ ಕಲ್ಯಾಣಪುರ ಅವರನ್ನು, ಆದಿತ್ಯ ಗಣೇಶನ್ ಅವರು 6–0, 6–1ರಿಂದ ಮಾನ್ ಕೇಶರ್ವಾನಿ ಅವರನ್ನು; ನಿತಿನ್ ಕುಮಾರ್ ಸಿನ್ಹಾ 6–3, 6–4 ರಿಂದ ಆರ್.ಜೈಸಿಂಘಾನಿ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.