ಕಾಳಗಿ: ತಾಲ್ಲೂಕಿನ ತಾಂಡಾಗಳ ಸರ್ಕಾರಿ ಶಾಲೆಗಳು ಕರ್ತವ್ಯದ ದಿನಗಳಲ್ಲಿ ಅವಧಿ ಪೂರ್ತಿ ತೆರೆಯದೇ ಬಹುತೇಕ ಮಧ್ಯಾಹ್ನವೇ ಖಾಲಿಯಾಗುತ್ತವೆ ಎಂಬ ಮಾತು ಜನವಲಯದಲ್ಲಿ ಕೇಳಿ ಬರತೊಡಗಿದೆ.
ಪೂರಕವೆಂಬಂತೆ ಕಾಳಗಿ ಹೊರವಲಯದ 2 ಕಿ.ಮೀ ಅಂತರದ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೋಮವಾರ (ಜು.31) ಮಧ್ಯಾಹ್ನವೇ ಖಾಲಿ ಇರುವುದು ಕಂಡುಬಂದಿದೆ.
‘1ರಿಂದ 5ನೇ ತರಗತಿಯವರೆಗಿನ ಶಾಲೆಯಲ್ಲಿ 26–27 ಮಕ್ಕಳಿದ್ದಾರೆ. ಇಬ್ಬರು ಕಾಯಂ ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಮಕ್ಕಳಿಗೆ ಚೆನ್ನಾಗಿ ಅಭ್ಯಾಸ ಮಾಡಿಸುವುದನ್ನು ಬಿಟ್ಟು ಶಿಕ್ಷಕರು ಹೊಂದಾಣಿಕೆ ಮೇಲೆ ಶಾಲೆಗೆ ಚೆಕ್ಕರ್ ಹೊಡೆಯುತ್ತಾರೆ’ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಶಾಲೆಯ ದೈನಂದಿನ ಸಮಯ (ಶನಿವಾರ ಹೊರತುಪಡಿಸಿ) ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.15ರವರೆಗೆ ಇದೆ. ಆದರೆ ಸೋಮವಾರ ಮಧ್ಯಾಹ್ನ 3.35ರ ಹೊತ್ತಿಗೆ ಶಾಲೆಗೆ ಭೇಟಿ ನೀಡಿದ ‘ಪ್ರಜಾವಾಣಿ’ ಪ್ರತಿನಿಧಿಗೆ ಇಲ್ಲಿ ಯಾರೊಬ್ಬರು ಶಿಕ್ಷಕರು ಕಾಣದೆ ಎಲ್ಲಾ ಕೊಠಡಿಗಳಿಗೆ ಬೀಗ ಬಿದ್ದಿರುವುದನ್ನು ಕಂಡುಬಂತು.
ಆಟವಾಡುತ್ತಿದ್ದ ನಾಲ್ಕೈದು ಮಕ್ಕಳಿಗೆ ವಿಚಾರಿಸಿದ್ದಾಗ ‘ಶಾಲೆ ಸಾಡೇ ಮೂರ’ಕ್ಕೆ (ಮಧ್ಯಾಹ್ನ 3.30) ಬಿಟ್ಟಿದೆ ಎಂದು ತಿಳಿಸಿದರು. ಶಿಕ್ಷಕರೊಬ್ಬರು ಕುಡಿದು ಬರ್ತಾರೆ. ಅವರು ಸರಿಯಾಗಿ ಶಾಲೆಗೂ ಬರುವುದಿಲ್ಲ. ಅವರನ್ನು ಇಲ್ಲಿಂದ ತೆಗೆಯಿರಿ ಎಂದು ಡಿಸಿ ಅವರಿಗೆ ಮನವಿಪತ್ರ ನೀಡಿದ್ದೇವೆ ಎಂದು ಸ್ಥಳೀಯರೊಬ್ಬರು ಹೇಳಿದರು.
‘ನಾನು ಮಧ್ಯಾಹ್ನ 2.10ರ ವರೆಗೆ ಮಕ್ಕಳಿಗೆ ಬಿಸಿಯೂಟ ಕೊಡಿಸಿ ತಾಲ್ಲೂಕಿನ ಮೊಘ ಗ್ರಾಮದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. 3.10ಕ್ಕೆ ಇಲ್ಲಿನ ಶಿಕ್ಷಕರಿಗೆ ಮೊಬೈಲ್ ಕರೆ ಮಾಡಿದ್ದಾಗ ಅವರು ಶಾಲೆಯಲ್ಲೇ ಇದ್ದಿರುವುದಾಗಿ ತಿಳಿಸಿದರು. ಆಮೇಲೆ ಶಾಲೆ ಬೇಗ ಬಿಟ್ಟಿರುವಂತೆ ಕಾಣಿಸುತ್ತಿದೆ’ ಎಂದು ಮುಖ್ಯಶಿಕ್ಷಕ ನಾಗೇಂದ್ರಪ್ಪ ಮುಚ್ಚೆಟ್ಟಿ ಪ್ರತಿಕ್ರಿಯಿಸಿದರು.
‘ಈ ಮೊದಲು ಸುಬ್ಬುನಾಯಕ ತಾಂಡಾದ ಶಾಲಾ ಶಿಕ್ಷಕರು ಹೀಗೆ ಮಾಡ್ತಿದ್ರು, ಅವರಿಗೆ ನೋಟಿಸ್ ಕೊಟ್ಟು ಸರಿಪಡಿಸಲಾಗಿದೆ. ಈಗ ಇವರಿಗೂ ನೋಟಿಸ್ ನೀಡುವುದಾಗಿ’ ಸಿ.ಆರ್.ಸಿ ಬಾಳಮ್ಮ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಇದೇ ಶಾಲಾ ಆವರಣದಲ್ಲಿ ಅಂಗನವಾಡಿ ಕೇಂದ್ರ ಸಹ ಇದ್ದು ಅದು ಕೂಡ ಈ ವೇಳೆ ಮುಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.