ಕಲಬುರಗಿ: ಪರೀಕ್ಷಾ ಕೇಂದ್ರದ ಒಳಗೆ ಬ್ಲೂಟೂತ್ ಉಪಕರಣ ಒಯ್ಯುವುದು ಹೇಗೆ? ಅದನ್ನು ಎಲ್ಲಿ, ಹೇಗೆ ಇಟ್ಟುಕೊಳ್ಳಬೇಕು, ಅನುಮಾನ ಬಂದರೆ ಯಾವ ರೀತಿ ಶಬ್ದ ನೀಡಬೇಕು, ಉತ್ತರ ಸ್ಪಷ್ಟವಾಗಿ ಕೇಳಿಸುವಂತೆ ಹೊರಗಿನವರು ಹೇಳುವುದು ಹೇಗೆ?... ಹೀಗೆ ಎಲ್ಲ ರೀತಿಯ ತರಬೇತಿಯನ್ನೂ ಅಭ್ಯರ್ಥಿಗಳಿಗೆ ನೀಡಲಾಗಿತ್ತು!
ಹೌದು. ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಆರೋಪದಡಿ ಸಿಕ್ಕಿಕೊಂಡ ಅಭ್ಯರ್ಥಿಗಳೇ ಈ ವಿಷಯ ಬಾಯಿ ಬಿಟ್ಟಿದ್ದಾರೆ. ಬ್ಲೂಟೂತ್ ಬಳಸುವ ಬಗ್ಗೆ ಮುಂಚಿತವಾಗಿಯೇ ರುದ್ರಗೌಡ ಡಿ. ಪಾಟೀಲ ತಂಡ ತರಬೇತಿ ಕೂಡ ನೀಡುತ್ತಿತ್ತು.
ಅಭ್ಯರ್ಥಿಗಳು ಒಳಉಡುಪಿನಲ್ಲಿ ಬ್ಲೂಟೂತ್ ಉಪಕರಣ ಇಟ್ಟುಕೊಂಡು ಹೋಗಿದ್ದರು. ಪರೀಕ್ಷೆ ಆರಂಭವಾದ ಮೇಲೆ ಒಮ್ಮೆ ಕೆಮ್ಮಿದರೆ ಅವರಿಗೆ ಉತ್ತರ ಕೇಳಿಸುತ್ತದೆ ಎಂದರ್ಥ. ಆಗ ಹೊರಗೆ ಮೊಬೈಲ್, ಪ್ರಶ್ನೆ ಪತ್ರಿಕೆ ಇಟ್ಟುಕೊಂಡು ಕುಳಿತಿರುತ್ತಿದ್ದ ವ್ಯಕ್ತಿ ಉತ್ತರ ಹೇಳಲು ಶುರು ಮಾಡಬೇಕು. ಮಧ್ಯದಲ್ಲಿ ಏನಾದರೂ ವ್ಯತ್ಯಾಸವಾದರೆ ಮತ್ತೆ ಕೆಮ್ಮಬೇಕು. ಆ ಶಬ್ದ ಕೇಳಲಿಸಿದ ತಕ್ಷಣ ಹೊರಗಿನ ವ್ಯಕ್ತಿ ಮತ್ತೆ ಸರಿಯಾಗಿ ಹೇಳಬೇಕು. ಪ್ರತಿಯೊಂದು ಪ್ರಶ್ನೆಯ ಸಂಖ್ಯೆಯನ್ನು ಮೂರು ಬಾರಿ, ಅದರ ಉತ್ತರವನ್ನೂ ಮೂರು ಬಾರಿ ಹೇಳುವುದನ್ನು ಚಾಚೂತಪ್ಪದಂತೆ ಪಾಲಿಸಬೇಕು ಎಂಬುದನ್ನು ತರಬೇತಿ ವೇಳೆ ಹೇಳಿಕೊಡಲಾಗಿತ್ತು.
ಪರೀಕ್ಷೆ ಮುಗಿದ ಬಳಿಕ ಉಪಕರಣಗಳನ್ನು ನಾಶ ಮಾಡಬೇಕು. ಪರೀಕ್ಷೆ ಅವಧಿಯಲ್ಲಿ ಅಭ್ಯರ್ಥಿಗಳ ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕು. ಬೇರೆ ಇಬ್ಬರು ವ್ಯಕ್ತಿಗಳ ಎರಡು ಮೊಬೈಲ್‌ಗಳನ್ನು ತಂದು ಕೊಡಬೇಕು ಎಂಬುದು ಕಡ್ಡಾಯವಾಗಿತ್ತು.
ಬ್ಲೂಟೂತ್ ಮೂಲಕ ಉತ್ತರ ರವಾನಿಸಲು ಎರಡು ಮೊಬೈಲ್ ಅನಿವಾರ್ಯವಾದ್ದರಿಂದ ಈ ಉಪಾಯ ಮಾಡಿದ್ದರು. ಒಂದು ವೇಳೆ ಸಿಕ್ಕಿಬಿದ್ದರೂ ಮೊಬೈಲ್ ತಮ್ಮದಲ್ಲ ಎಂದು ಹೇಳಿ ಜಾರಿಕೊಳ್ಳುವುದು ಇದರ ಹಿಂದಿನ ಉದ್ದೇಶ.
ಇಷ್ಟೆಲ್ಲ ತರಬೇತಿ ನೀಡಿ ತಂಡ ಸಿದ್ಧಗೊಳಿಸಿದ ಮೇಲೆ ರುದ್ರಗೌಡ ಡಿ. ಪಾಟೀಲ ಹೊರರಾಜ್ಯದತ್ತ ಪ್ರವಾಸಕ್ಕೆ ಹೋಗುತ್ತಿದ್ದರು. ಒಂದು ವೇಳೆ ಅಭ್ಯರ್ಥಿ ಸಿಕ್ಕಿಬಿದ್ದರೆ ಅದಕ್ಕೂ ತನಗೂ ಸಂಬಂಧವಿಲ್ಲ, ತಾನು ರಾಜ್ಯದಲ್ಲೇ ಇರಲಿಲ್ಲ ಎಂಬುದನ್ನು ದಾಖಲೆ ಸಮೇತ ಹೇಳಲು ಈ ಚಾಲಾಕಿತನ ಮಾಡಿದ್ದರು.
ಅಕ್ರಮದ ಬಗ್ಗೆ ಯಾರೊಂದಿಗೆ ಏನೇ ಮಾತನಾಡಿದರೂ ಸತ್ತ ವ್ಯಕ್ತಿಯ ಮೊಬೈಲ್ ಬಳಸಿಯೇ ಮಾತನಾಡುತ್ತಿದ್ದ ರುದ್ರಗೌಡ, ಇಂಥ ಅಕ್ರಮದಲ್ಲಿ ಪಳಗಿದ್ದಾರೆ ಎನ್ನುತ್ತವೆ ಮೂಲಗಳು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.