ಚಿಂಚೋಳಿ (ಕಲಬುರಗಿ ಜಿಲ್ಲೆ): ‘ದೇಶದಲ್ಲಿ ಭ್ರಷ್ಟಾಚಾರದ ಸಾಮ್ರಾಜ್ಯ ಕಟ್ಟಿದ್ದೇ ಕಾಂಗ್ರೆಸ್ ಸರ್ಕಾರ’ ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಇಲ್ಲಿನ ಮೈಲಾರಲಿಂಗೇಶ್ವರ ದೇವಾಲಯದ ಎದುರಿನ ಬಯಲಿನಲ್ಲಿ ಬಿಜೆಪಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಅವರ ಕಲ್ಯಾಣಕ್ಕೆ ಶ್ರಮಿಸಿಲ್ಲ’ ಎಂದು ಟೀಕಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದಾರೆ. ರಷ್ಯಾ–ಉಕ್ರೇನ್ ಯುದ್ದವನ್ನು ನಿಲ್ಲಿಸಿ 70 ಸಾವಿರ ಭಾರತದ ವಿದ್ಯಾರ್ಥಿಗಳನ್ನು ಕರೆ ತಂದ ಶ್ರೇಯಸ್ಸು ನರೇಂದ್ರ ಮೋದಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.
‘ಮನಮೋಹನ್ ಸಿಂಗ್ ಸರ್ಕಾರದ ದುರಾಡಳಿತ, ಭಾರತದ ಘನತೆ ಹೇಗಿತ್ತು ಈಗ ಹೇಗಿದೆ ಎಂಬುದು ನೀವು ತುಲನೆ ಮಾಡಿ ಬಿಜೆಪಿಯ ಅವಿನಾಶ ಜಾಧವ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ‘ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಚಿಂಚೋಳಿ ಶಾಸಕ ಡಾ. ಅವಿನಾಶ ಉಮೇಶ ಜಾಧವ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಮಾಡಿದ ಕೆಲಸಗಳನ್ನು ನೋಡಿ ಮುಂಬರುವ ದಿನಗಳಲ್ಲಿ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಸಂಸದ ಡಾ.ಉಮೇಶ ಜಾಧವ, ಕೆಕೆಆರ್‌ಟಿಸಿ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಸದಸ್ಯರಾದ ಬಾಬುರಾವ್ ಚಿಂಚನಸೂರ, ಸುನೀಲ ವಲ್ಲ್ಯಾಪುರ, ಬಿ.ಜಿ.ಪಾಟೀಲ, ರಘುನಾಥ ಮಲ್ಕಾಪೂರೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಾರುತಿರಾವ್ ಮುಳೆ, ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಮ ಪಾಟೀಲ, ಶರಣಪ್ಪ ತಳವಾರ, ಲಕ್ಷ್ಮಿ ನರಸಿಂಹರೆಡ್ಡಿ, ಈಶ್ವರಸಿಂಗ್ ಠಾಕೂರ, ರವಿರಾಜ ಕೊರವಿ, ಸಂಜಯ ಮಿಸ್ಕಿನ್, ಸಂತೋಷ ಗಡಂತಿ, ವಿಜಯಕುಮಾರ ಚೇಂಗಟಿ, ಗಿರಿರಾಜ ನಾಟಿಕಾರ, ಅಭಿಷೇಕ, ಗೋಪಾಲರೆಡ್ಡಿ ಕೊಳ್ಳೂರು, ಗೌತಮ ಪಾಟೀಲ, ಶಶಿಕಲಾ ಟೆಂಗಳಿ, ಜಗದೇವಿ ಗಡಂತಿ, ಆತೀಶ ಪವಾರ, ಅಲ್ಲಮಪ್ರಭು ಹುಲಿ, ಲೋಕೇಶ ಶೆಳ್ಳಗಿ, ರಮೇಶ ಧುತ್ತರಗಿ, ರಾಮು ರಾಠೋಡ, ರಾಮರಾವ್ ರಾಠೋಡ, ಭೀಮಶೆಟ್ಟಿ ಮುರುಡಾ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.