ADVERTISEMENT

ಸಂದರ್ಶನ | ಜನರ ಹಿತವೇ ಎಎಪಿ ಗುರಿ: ಸಿದ್ದು ಪಾಟೀಲ

ರಾಹುಲ ಬೆಳಗಲಿ
Published 7 ಮೇ 2023, 6:04 IST
Last Updated 7 ಮೇ 2023, 6:04 IST
   

ಕಲಬುರಗಿ: ‘ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರವು ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಜನರಿಗೆ ಸೌಲಭ್ಯ ಕಲ್ಪಿಸುವುದು ಮತ್ತು ಸಂಕಷ್ಟದಿಂದ ಪಾರು ಮಾಡುವುದು ಆಮ್‌ ಆದ್ಮಿ ಪಕ್ಷದ (ಎಎಪಿ) ಗುರಿಯಾಗಿದೆ. ಇದಕ್ಕಾಗಿ ನಾನು ಸೇರಿದಂತೆ ಪಕ್ಷದ ಕಾರ್ಯಕರ್ತರು ಶ್ರಮಿಸುವರು’ ಎಂದು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಸಿದ್ದು ಪಾಟೀಲ ತೆಗನೂರ ತಿಳಿಸಿದರು.

ಎಂಜಿನಿಯರ್ ಪದವೀಧರ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಅವರು ಕ್ಷೇತ್ರದಲ್ಲಿನ ರಾಜಕೀಯ ಸ್ಥಿತಿಗತಿ, ಜನರ ಆಶೋತ್ತರ, ಆಗಬೇಕಿರುವ ಅಭಿವೃದ್ಧಿ, ಹಿನ್ನಡೆಗೆ ಉಂಟಾದ ಕಾರಣಗಳ ಬಗ್ಗೆ ತಮ್ಮ ವಿಚಾರ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ.

ಉದ್ಯಮಿ ಆಗಿರುವ ನೀವು ರಾಜಕೀಯ ಕ್ಷೇತ್ರಕ್ಕೆ ಬರಲು ಕಾರಣಗಳೇನು?

ADVERTISEMENT

ರಾಜಕೀಯ ಕ್ಷೇತ್ರಕ್ಕೆ ನಾನು ದಿಢೀರ್‌ನೇ ಬಂದವನಲ್ಲ. ಕಾಲೇಜು ಕಲಿಯುವ ದಿನಗಳಲ್ಲಿಯೇ ನಾನು ರಾಜಕೀಯ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಿದ್ದೆ. ವಿದ್ಯಾರ್ಥಿಗಳ ಸಂಘಟನೆ ಕಟ್ಟಿಕೊಂಡು ವಿವಿಧ ಸ್ವರೂಪಗಳ ಹೋರಾಟಗಳನ್ನು ಕೈಗೊಂಡೆ. ಹಲವು ವರ್ಷ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದ ನಾನು ಕಲಬುರಗಿ ಜಿಲ್ಲೆಯ ಸ್ಥಿತಿಗತಿ ಅರಿಯಲು ಪ್ರಯತ್ನಿಸಿದ್ದೆ. ಜಿಲ್ಲೆ ಹಿಂದುಳಿಯಲು ಕಾರಣಗಳೇನು ಮತ್ತು ಆಬೇಕಿರುವ ಕಾರ್ಯಗಳ ಬಗ್ಗೆ ಆಲೋಚಿಸಿದೆ. ವ್ಯವಸ್ಥೆಯು ಭ್ರಷ್ಟ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತವಾಯಿತು. ಅದನ್ನು ಸಹಿಸಲಾಗದೇ ನಾನೇ ರಾಜಕೀಯ ಕ್ಷೇತ್ರಕ್ಕೆ ಬಂದೆ. ಸಮಾಜಸೇವೆ ಮತ್ತು ಜನರಿಗೆ ನೆರವಾಗುವ ಮೂಲಕ ಕ್ಷೇತ್ರದಲ್ಲಿ ಬದಲಾವಣೆ ತರಲು ವಿವಿಧ ಹಂತಗಳಲ್ಲಿ ಪ್ರಯತ್ನಿಸುತ್ತಿದ್ದೇನೆ.

ಕ್ಷೇತ್ರದಲ್ಲಿ ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಜನರನ್ನು ಭೇಟಿಯಾಗುತ್ತಿದ್ದೀರಿ?

ಎಎಪಿ ಎಂಬುದು ಇತರ ಪಕ್ಷಗಳಿಗಿಂತ ತುಂಬಾ ಭಿನ್ನವಾದದ್ದು ಮತ್ತು ಅಷ್ಟೇ ಪ್ರಾಮಾಣಿಕತೆಯಿಂದ ಕೂಡಿರುವಂತದ್ದು ಎಂಬುದನ್ನು ಜನರಿಗೆ ತಿಳಿಪಡಿಸುತ್ತಿದ್ದೇನೆ. ದೆಹಲಿ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಎಎಪಿ ಸರ್ಕಾರವು ಮಾಡಿದ ಸಾಧನೆ ಮತ್ತು ಜನರ ಪರ ಕೈಗೊಂಡ ಕಾರ್ಯಗಳನ್ನು ಹೇಳುತ್ತ ಮತ ಯಾಚಿಸುತ್ತಿದ್ದೇನೆ. ಉಚಿತ ಶಿಕ್ಷಣ, ಶುದ್ಧ ನೀರು, ವಸತಿ ವ್ಯವಸ್ಥೆ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳನ್ನು ಎಎಪಿ ಸರ್ಕಾರ ತಂದಿದೆ. ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಲ್ಲಿ, ಎಎಪಿ ಪಕ್ಷದ ಗುರಿ ಮತ್ತು ಸಾಧನೆಯನ್ನು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲೂ ಅನುಷ್ಠಾನಕ್ಕೆ ತರಲು ಪ್ರಯತ್ನಿಸುವೆ.

ಕ್ಷೇತ್ರದಲ್ಲಿ ಗೆಲುವು ಸಾಧಿಸಲು ನೀವು ಎದುರಿಸುತ್ತಿರುವ ಸವಾಲುಗಳೇನು?

ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ನನಗೆ ಯಾವುದೇ ಸವಾಲುಗಳಿಲ್ಲ. ಎಎಪಿ ಬಗ್ಗೆ ಜನರು ಉತ್ತಮ ಅಭಿಪ್ರಾಯ ಹೊಂದಿದ್ದು, ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಿಜೆಪಿಯ ಕುಟುಂಬ ರಾಜಕಾರಣ ಮತ್ತು ಕಾಂಗ್ರೆಸ್‌ನ ನಿರ್ಲಕ್ಷ್ಯ ಧೋರಣೆಯಿಂದ ಜನರು ಬೇಸತ್ತಿದ್ದಾರೆ. ಒಂದೇ ಕುಟುಂಬದವರು 20 ವರ್ಷಗಳಿಂದ ಅಧಿಕಾರದ ಗುತ್ತಿಗೆ ಹಿಡಿದಿರುವುದು ಮತ್ತು ಅದಕ್ಕೆ ಬಿಜೆಪಿ ಬೆಂಬಲಿಸುತ್ತಿರುವುದು ಜನರಿಗೆ ಬೇಸರ ತರಿಸಿದೆ. ಕಾಂಗ್ರೆಸ್‌ ಅಭಿವೃದ್ಧಿ ಕಾರ್ಯದತ್ತ ಆಸಕ್ತಿ ತೋರಿಸದಿರುವುದಕ್ಕೆ ಆಕ್ರೋಶವಿದೆ. ಈ ಎರಡೂ ಪಕ್ಷಗಳ ವಿರುದ್ಧದ ಅಲೆಯೇ ನನಗೆ ವರವಾಗಲಿದೆ. ಜನರು ಎಎಪಿಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ.

ಮತದಾರರು ನಿಮಗೆ ಮತವನ್ನು ಯಾಕೆ ಹಾಕಬೇಕು?

ಕಲಬುರಗಿಯಲ್ಲೇ ಹುಟ್ಟಿ, ಬೆಳೆದ ನನಗೆ ಕಲಬುರಗಿಯ ಪ್ರತಿ ಹಂತವೂ ಗೊತ್ತಿದೆ. ಇಲ್ಲಿ ಆಗಬೇಕಾದ ಮತ್ತು ಆಗದೇ ಉಳಿದಿರುವ ಕೆಲಸಗಳ ಬಗ್ಗೆಯೂ ಮಾಹಿತಿ ಇದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಂಬಂಧಿಸಿದ ಹೋರಾಟ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ 450 ಎಂಜಿನಿಯರ್‌ಗಳ ನೇಮಕಾತಿಗೆ ಒತ್ತಾಯಿಸಿ ಪ್ರತಿಭಟನೆ ಸೇರಿದಂತೆ ಹಲವು ಸ್ವರೂಪದ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ನೇತೃತ್ವ ವಹಿಸಿದ್ದೇನೆ. ಮಾದರಿ ವಿಧಾನಸಭಾ ಕ್ಷೇತ್ರವನ್ನು ಹೇಗೆ ಮಾಡಬೇಕು ಎಂಬ ಸ್ಪಷ್ಟ ಕಲ್ಪನೆ ಹೊಂದಿದ್ದೇನೆ. ಪರಿಸರ ಕಾಳಜಿಯೊಂದಿಗೆ ಹಸಿರು ಕಲಬುರಗಿ ಎಂಬ ಪರಿಸರಸ್ನೇಹಿ ಸಂಘ ಕಟ್ಟಿಕೊಂಡು ಸಸಿಗಳನ್ನು ನೆಟ್ಟಿದ್ದೇನ. ಜನಪರವಾದ ಇನ್ನಷ್ಟು ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶವಿದೆ. ಜನಹಿತಕ್ಕಾಗಿ ಜನರು ಮತ ಹಾಕಬೇಕೆಂದು ಕೋರುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.