ಕಲಬುರಗಿ: ಈ ಬಾರಿಯ ಕಡು ಬೇಸಿಗೆಯಲ್ಲಿ ಬಿಯರ್ ಮಾರಾಟ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುವ ಮೂಲಕ ಅಬಕಾರಿ ಇಲಾಖೆಗೆ ಭರ್ಜರಿ ವರಮಾನ ತಂದುಕೊಟ್ಟಿದೆ.
ಕಲಬುರಗಿ ಜಿಲ್ಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 42ರಿಂದ 44 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಇತ್ತು. ಈ ವೇಳೆ ಬಿಯರ್ ಮದ್ಯಕ್ಕೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ತಯಾರಾದ ಮದ್ಯದ (ಐಎಂಎಲ್) 1,48,548 ಬಾಕ್ಸ್‌ಗಳಷ್ಟು ಮಾರಾಟವಾಗಿದ್ದರೆ ಇದೇ ಅವಧಿಯಲ್ಲಿ ಬಿಯರ್‌ನ 1,59,275 ಬಾಕ್ಸ್‌ಗಳು ಬಿಕರಿಯಾಗಿದ್ದವು. ಕಳೆದ ವರ್ಷಕ್ಕಿಂತ ಒಟ್ಟಾರೆ ಎರಡೂ ಬಗೆಯ ಮದ್ಯದ 44,946 ಬಾಕ್ಸ್‌ಗಳಷ್ಟು ಹೆಚ್ಚುವರಿಯಾಗಿ ಮಾರಾಟವಾಗಿವೆ.
ಏಪ್ರಿಲ್‌ಗಿಂತಲೂ ಮೇ ತಿಂಗಳಲ್ಲಿ ಬಿಯರ್‌ಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ಐಎಂಎಲ್‌ನ 1,87,894 ಮದ್ಯದ ಬಾಕ್ಸ್‌ಗಳು ಮಾರಾಟವಾಗಿದ್ದರೆ, ಬಿಯರ್‌ನ 1,70,452 ಬಾಕ್ಸ್‌ಗಳು ಮಾರಾಟವಾಗಿವೆ. ಎರಡೂ ಬಗೆಯ ಮದ್ಯ ಕಳೆದ ವರ್ಷಕ್ಕಿಂತ 56,563 ಬಾಕ್ಸ್‌ಗಳಷ್ಟು ಹೆಚ್ಚುವರಿಯಾಗಿ ಮಾರಾಟವಾಗಿವೆ.
ಚುನಾವಣೆ ಎಫೆಕ್ಟ್: ಬಿರು ಬೇಸಿಗೆಯಲ್ಲಿ ಮದ್ಯಪ್ರಿಯರು ಐಎಂಎಲ್ ಮದ್ಯದ ಬದಲು ಬಿಯರ್‌ಗೆ ಪಕ್ಷಾಂತರ ಮಾಡಿದ್ದು ಒಂದೆಡೆಯಾದರೆ ಮತ್ತೊಂದೆಡೆ ಲೋಕಸಭಾ ಚುನಾವಣೆ ಇದ್ದುದೂ ಮದ್ಯಮಾರಾಟ ಹೆಚ್ಚಳಗೊಳ್ಳಲು ಕಾರಣ ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು.
ಉತ್ತರ ಕರ್ನಾಟಕದಲ್ಲಿ ಮೇ 7ರಂದು ಲೋಕಸಭಾ ಚುನಾವಣೆಯ ಮತದಾನ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಸಹ ಧಾಬಾಗಳಲ್ಲಿ ಯಥೇಚ್ಛ ಊಟ ಹಾಗೂ ಮದ್ಯದ ಸಮಾರಾಧನೆ ಮಾಡಿದ್ದವು. ಹೀಗಾಗಿ, ಬಿಯರ್ ಸೇರಿದಂತೆ ಎಲ್ಲ ಬಗೆಯ ಮದ್ಯದ ಮಾರಾಟ ಹೆಚ್ಚಾಯಿತು ಎನ್ನಲಾಗುತ್ತದೆ.
ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿನ ಮದ್ಯ ಮಾರಾಟಕ್ಕಿಂತ ಎಂಎಸ್‌ಐಎಲ್ ಸರ್ಕಾರಿ ಮದ್ಯ ಮಾರಾಟ ಮಳಿಗೆ ಹಾಗೂ ಖಾಸಗಿ ವೈನ್‌ಶಾಪ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಮಾರಾಟ ಕಂಡು ಬಂದಿದೆ. ಚುನಾವಣೆ ಸಂದರ್ಭದಲ್ಲಿ ಹೊರರಾಜ್ಯಗಳಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಮದ್ಯಕ್ಕೆ ಅಬಕಾರಿ ಇಲಾಖೆ ಬ್ರೇಕ್ ಹಾಕಿದ್ದರಿಂದಲೂ ರಾಜ್ಯದಲ್ಲಿನ ಮಳಿಗೆಗಳಲ್ಲಿ ಮದ್ಯ ಮಾರಾಟ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ಕರ್ನಾಟಕದಲ್ಲಿ ಮದ್ಯದ ಮೇಲೆ ತೆಲಂಗಾಣ, ಮಹಾರಾಷ್ಟ್ರಕ್ಕೆ ಹೋಲಿಸಿದರೆ ಅತಿಯಾದ ತೆರಿಗೆ ಇದೆ. ಹೀಗಾಗಿ, ದರವೂ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಮದ್ಯಪ್ರಿಯರು ಕೆಲಸದ ನಿಮಿತ್ತ ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಹೋದಾಗ ಜೊತೆಗೆ ಮದ್ಯದ ಬಾಕ್ಸ್‌ಗಳನ್ನು ತರುವುದು ವಾಡಿಕೆ. ಚುನಾವಣೆಗೆ ಮುನ್ನ ಮೂರೂ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿನ ಅಬಕಾರಿ ಅಧಿಕಾರಿಗಳು ಮದ್ಯ ಅಕ್ರಮ ಸಾಗಾಟಕ್ಕೆ ತಡೆ ಹಾಕಲು ಕ್ರಮ ಕೈಗೊಂಡಿದ್ದರಿಂದ ಅಷ್ಟಾಗಿ ಮದ್ಯ ಸಾಗಾಟ ಸಾಧ್ಯವಾಗಿಲ್ಲ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.