ಕಲಬುರಗಿ: ತಹಶೀಲ್ದಾರ್, ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಬಾಕಿ ಇರುವ ಆಸ್ತಿ, ಜಮೀನು ಪ್ರಕರಣಗಳು ವಿಚಾರಣೆ ಅಂತ್ಯವಾಗಿ ಪ್ರಕರಣ ವಿಲೇವಾರಿ ಮಾಡಿದ ನಂತರ ನ್ಯಾಯಾಲಯದ ಆದೇಶ ಹೊರಡಿಸಲು ಬಹಳಷ್ಟು ದಿನದಿಂದ ಬಾಕಿ ಇರುವುದನ್ನು ಗಮನಿಸಲಾಗಿದೆ. ವಿಚಾರಣೆ ಅಂತ್ಯವಾದ 15 ದಿನಗಳಲ್ಲಿ ಕಂದಾಯ ನ್ಯಾಯಾಲಯದ ಆದೇಶ ಹೊರಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದರು.
ಸೋಮವಾರ ಕಂದಾಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ಆದೇಶ ಬಾಕಿ ಉಳಿಸಿಕೊಂಡಲ್ಲಿ ಮತ್ತೆ ಸಾರ್ವಜನಿಕರು ಕಚೇರಿಗೆ ತಿರುಗಾಡಬೇಕಿದೆ. ಇದು ಅನಗತ್ಯ ಕಿರಿಕಿರಿಗೆ ಅವಕಾಶ ಮಾಡಿಕೊಡುತ್ತದೆ. ಇದನ್ನು ತಪ್ಪಿಸಬೇಕು ಎಂದರು.
ಕಲಬುರಗಿ ವಿಭಾಗದಲ್ಲಿ ತಹಶೀಲ್ದಾರರ ಹಂತದಲ್ಲಿ 6 ತಿಂಗಳಿನಿಂದ 5 ವರ್ಷ ಮೇಲ್ಪಟ್ಟ 3,307 ಪ್ರಕರಣಗಳು ಬಾಕಿ ಇವೆ. ಕಾಲಂ 6ರಿಂದ 10ರವರೆಗಿನ ಪ್ರಕರಣಗಳನ್ನು ತಹಶೀಲ್ದಾರರು ಆಂದೋಲನ ರೂಪದಲ್ಲಿ ಮುಂದಿನ 1 ತಿಂಗಳಿನಲ್ಲಿ ವಿಲೇವಾರಿಗೊಳಿಸಿ ಭೂಮಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು. ಅದೇ ರೀತಿ ಸಹಾಯಕ ಆಯುಕ್ತರು ತಮ್ಮ ಹಂತದಲ್ಲಿನ ಪ್ರಕರಣಗಳು ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಟಾರಿಯಾ ಮಾತನಾಡಿ, ಕಂದಾಯ ನ್ಯಾಯಾಲಯ ಅದೇಶಗಳು ಸ್ಪಷ್ಟ ಮತ್ತು ಪ್ರಕರಣಗಳ ವಿಷಯಕ್ಕೆ ಸೀಮಿತವಾಗಿರಬೇಕು. ಕೆಲವೊಮ್ಮೆ ಈ ಆದೇಶಗಳು ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇರುವುದರಿಂದ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಹೀಗಾಗಿ ತಹಶೀಲ್ದಾರ್, ಸಹಾಯಕ ಆಯುಕ್ತರು ಇಂತಹ ಪ್ರಕರಣಗಳ ದಾಖಲಾತಿಗಳನ್ನು ತಮ್ಮ ಕಚೇರಿಯಲ್ಲಿ ಸರಿಯಾಗಿ ಇಟ್ಟುಕೊಳ್ಳಬೇಕು ಎಂದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಹಶೀಲ್ದಾರ್ ಕಚೇರಿಯಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇರುವ ಬಗ್ಗೆ ವಿಚಾರಿಸಿದಾಗ, ಗುರುಮಠಕಲ್ ತಹಶೀಲ್ದಾರ್ ಮಾತನಾಡಿ, 2013ರಿಂದ ಸುಮಾರು 85 ಪ್ರಕರಣಗಳ ಕಡತ ಕಚೇರಿಯಲ್ಲಿ ಲಭ್ಯ ಇಲ್ಲ. ಹೀಗಾಗಿ ಅವು ಬಾಕಿ ಇವೆ ಎಂದರು.
ರಾಜೆಂದ್ರ ಕುಮಾರ್ ಕಟಾರಿಯಾ ಮಾತನಾಡಿ, ಕಡತ ಇಲ್ಲದಿರುವುದು ಗಂಭೀರ ವಿಷಯ. ಕೂಡಲೇ ಈ ಕುರಿತು 15 ದಿನದಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಒಂದು ವೇಳೆ ಹಿಂದಿನ ಅಧಿಕಾರಿ, ಸಿಬ್ಬಂದಿ ಕಡತ ಒಪ್ಪಿಸದಿದ್ದಲ್ಲಿ ಅವರ ಮೇಲೆ ಕ್ರಮ ವಹಿಸಲಾಗುವುದು ಎಂದರು.
ಸುಳ್ಳು ದಾಖಲೆ ನೀಡಿ ನೋಂದಣಿ ಮಾಡಿಸಿದ ದಸ್ತಾವೇಜು ರದ್ದತಿಗೆ ಅವಕಾಶ
ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಸುಳ್ಳು ಮಾಹಿತಿ ನೀಡಿ, ವಂಚಿಸಿ ಅಥವಾ ಖೊಟ್ಟಿ ದಾಖಲೆ ಸೃಷ್ಟಿಸಿ ದುರಪಯೋಗದ ಮೂಲಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿರುವುದು ಕಂಡುಬಂದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಅಂತಹ ಪ್ರಕರಣಗಳನ್ನು ಕೈಗೆತ್ತಿಕೊಂಡು ಆ ದಸ್ತಾವೇಜನ್ನು ರದ್ದುಪಡಿಸುವ ಅಧಿಕಾರ ಒದಗಿಸುವ ಕುರಿತು ಕಳೆದ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಷ್ಡ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಮುಂದಿನ 3, 4 ತಿಂಗಳಲಿನಲ್ಲಿ ಗೆಜೆಟ್ ರೂಪದಲ್ಲಿ ಆದೇಶ ಹೊರಬೀಳಲಿದೆ. ಇದರಿಂದ ಕಂಡವರ ಅಸ್ತಿ ಕಬಳಿಸುವ ದಲ್ಲಾಳಿಗಳಿಗೆ ಕಡಿವಾಣ ಬೀಳಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಹಿಂದೆಲ್ಲ ಸುಳ್ಳು ದಾಖಲೆ ಸೃಷ್ಟಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಕೊಂಡು ಆಸ್ತಿ ಕಬಳಿಕೆದಾರರು ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುತ್ತಿದ್ದರು. ವಿಜಯಪುರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಿವೆ. ಸುಳ್ಳು ದಾಖಲೆಗಳ ನೋಂದಣಿ ಗೊತ್ತಾದ ನಂತರ ಆಸ್ತಿ ಮಾಲೀಕರು ಸಿವಿಲ್ ನ್ಯಾಯಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್ ಹೀಗೆ 5-6 ವರ್ಷ ನ್ಯಾಯಾಲಯಕ್ಕೆ ತಮ್ಮ ಆಸ್ತಿಗೆ ಅನಗತ್ಯವಾಗಿ ಪರದಾಡಬೇಕಿತ್ತು. ಜಿಲ್ಲಾ ನೋಂದಣಾಧಿಕಾರಿಗಳಿಗೆ ಸುಳ್ಳು ದಸ್ತಾವೇಜು ರದ್ದುಪಡಿಸುವ ಅಧಿಕಾರ ನೀಡಿದ್ದರಿಂದ ಸಾರ್ವಜನಿಕರಿಗೆ ಮುಂದಿನ ದಿನದಲ್ಲಿ ತ್ವರಿತ ನ್ಯಾಯಲಯ ಸಿಗಲು ಅನುಕೂಲವಾಗಲಿದೆ ಎಂದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ್, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ.ಮಂಜುನಾಥ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್. ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಸೇರಿದಂತೆ ವಿಭಾಗದ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು, ತಹಶೀಲ್ದಾರರು, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.