ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ನಾಯಕತ್ವ ಬಲಹೀನವಾದ ರಾಜ್ಯಗಳಲ್ಲಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಇಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯಪಾಲರ ಕಚೇರಿ ಬಿಜೆಪಿಯವರ ಪ್ರಾದೇಶಿಕ ಕಚೇರಿಯಾಗಿರುವುದು ಹೊಸದಲ್ಲ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ ಸೇರಿ ಕರ್ನಾಟಕದ ರಾಜಭವನಗಳು ದುರುಪಯೋಗ ಆಗುತ್ತಿವೆ. ಕಾನೂನಾತ್ಮಕವಾಗಿ ಸರಿಯಾಗಿದೆ ಎಂದು ಬಿಂಬಿಸಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಮುಖ್ಯಮಂತ್ರಿಗಳ ವಿರುದ್ಧದ ‘ಮುಡಾ’ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಸರ್ಕಾರ ರಾಜ್ಯಭವನದ ಮೂಲಕ ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದೆ. ಸರ್ಕಾರದ ಮುಖ್ಯಕಾರ್ಯದರ್ಶಿ ರಾಜ್ಯಪಾಲರನ್ನು ಭೇಟಿ ಮಾಡಿ 100 ಪುಟಗಳಷ್ಟು ವರದಿ ನೀಡಿದ್ದರು. ಸಲ್ಲಿಸಿದ್ದ ವರದಿಯ ಪುಟಗಳನ್ನು ತಿರಿವಿಯೂ ಹಾಕದೆ 12 ಗಂಟೆಯೊಳಗೆ ಟಿ.ಜೆ.ಅಬ್ರಹಾಂ ನೀಡಿದ ದೂರಿನ ಅನ್ವಯ ಶೋಕಾಸ್ ನೋಟಿಸ್ ನೀಡಿದ್ದಾರೆ. ಈ ಮೂಲಕ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ನಾಯಕತ್ವವನ್ನು ಬಿಜೆಪಿಯ ಮತ್ತೊಂದು ಗುಂಪು ಒಪ್ಪುತ್ತಿಲ್ಲ. ಇಲ್ಲಿ ಪಾದಯಾತ್ರೆ ಮಾಡುವ ಬದಲು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದಿಲ್ಲಿ ಚಲೋ ಮಾಡಿದರೆ ನಾವೇ ಬೆಂಬಲ ಕೊಡುತ್ತೇವೆ’ ಎಂದು ಕುಟುಕಿದರು.
‘ಕೆಕೆಆರ್‌ಡಿಬಿಯಲ್ಲಿನ ಅಕ್ರಮಗಳ ಬಗ್ಗೆ ಪ್ರಾಥಮಿಕ ತನಿಖಾ ವರದಿ ಬಂದಿದೆ. ಕೆಲ ಅಧಿಕಾರಿಗಳು ನಿವೃತ್ತರಾಗಿದ್ದು, ಕರ್ತವ್ಯದಲ್ಲಿರುವ ಐಎಎಸ್ ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು. ಶೀಘ್ರವೇ ಸಿಟಿ ಪೊಲೀಸ್ ಕಮಿಷನರ್ ಹೆಸರನ್ನೂ ಅಂತಿಮಗೊಳಿಸಲಾಗುವುದು’ ಎಂದರು.
‘ತುಂಗಾಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿರುವುದು ತಾಂತ್ರಿಕ ತೊಂದರೆಯಿಂದ. ಬಿಜೆಪಿಯವರು ಇದರಲ್ಲಿ ಸುಖಾಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಅವರ ಅವಧಿಯಲ್ಲಿ ಎಷ್ಟು ಜಲಾಶಯಗಳ ಸಾಮರ್ಥ್ಯವನ್ನು ಪರಿಶೀಲನೆ ಮಾಡಿದ್ದರು ಎಂಬುದನ್ನು ಹೇಳಲಿ. ಅದರ ವರದಿ ಇದ್ದರೆ ಕೊಡಲಿ. ಈಗಾಗಲೇ ಎಲ್ಲ ಜಲಾಶಯಗಳ ಸಾಮರ್ಥ್ಯ ಪರಿಶೀಲನೆಗೆ ಸೂಚಿಸಲಾಗಿದೆ’ ಎಂದು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.