ಕಲಬುರಗಿ: ಹೊಸದಾಗಿ ನಿರ್ಮಾಣವಾಗುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದುಬಾರಿ ಚಿಕಿತ್ಸೆಯಾದ ವ್ಯಾಸ್ಕುಲರ್ ಸರ್ಜರಿ ವಿಭಾಗವನ್ನು ಆರಂಭಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿಯೇ ಈ ಸೇವೆ ನೀಡುವ ಆಸ್ಪತ್ರೆಯಾಗಿ ಜಯದೇವ ಹೊರಹೊಮ್ಮಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.
ಜಯದೇವ ಆಸ್ಪತ್ರೆಯ ಕಟ್ಟಡವನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವ್ಯಾಸ್ಕುಲರ್ ಸರ್ಜರಿ ವಿಭಾಗಕ್ಕೆ ಇಬ್ಬರು ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಚಿಕಿತ್ಸೆ ಪಡೆಯಲು ದೂರದ ನಗರಗಳಿಗೆ ಹೋಗಬೇಕಿತ್ತು’ ಎಂದರು.
‘₹ 192 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಆಸ್ಪತ್ರೆಯ ನೂತನ ಕಟ್ಟಡವನ್ನು ಸೆಪ್ಟೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಕಟ್ಟಡದಲ್ಲಿ ಇನ್ನಷ್ಟು ಕೆಲಸಗಳು ಬಾಕಿ ಉಳಿದಿದ್ದು, ಶೀಘ್ರವೇ ಮುಗಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.
ಕಟ್ಟಡಕ್ಕೆ ಹೆಚ್ಚುವರಿಯಾಗಿ ₹ 72 ಕೋಟಿ ನೀಡುವಂತೆ ಪರಿಷ್ಕೃತ ಅಂದಾಜು ಸಲ್ಲಿಸಲಾಗಿದೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. 370 ಹಾಸಿಗೆ ಆಸ್ಪತ್ರೆಯಲ್ಲಿ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ 260 ಬೆಡ್‌ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಹಂತ ಹಂತವಾಗಿ ಎಲ್ಲ 370 ಬೆಡ್‌ಗಳನ್ನು ಚಿಕಿತ್ಸೆಗೆ ಅಣಿಗೊಳಿಸಲಾಗುವುದು. ಪ್ರಸ್ತುತ ಜಿಮ್ಸ್ ಕಟ್ಟಡದಲ್ಲಿರುವ ಜಯದೇವ ಆಸ್ಪತ್ರೆಯಲ್ಲಿ 125 ಬೆಡ್‌ಗಳಷ್ಟೇ ಇವೆ. ನೂತನ ಕಟ್ಟಡದಲ್ಲಿ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
‘₹ 150 ಕೋಟಿ ವೆಚ್ಚದಲ್ಲಿ ಇಂದಿರಾಗಾಂಧಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹೆಲ್ತ್ ಅಲೈಡ್ ಸೈನ್ಸ್ ಕಾಲೇಜು ನಿರ್ಮಾಣಕ್ಕೆ 10 ಎಕರೆ ಭೂಮಿ ಮತ್ತು ₹ 120 ಕೋಟಿ ವೆಚ್ಚದ ಮಲ್ಟಿ ಸ್ಕಿಲ್ ಡೆವಲಪಮೆಂಟ್ ಸೆಂಟರ್ ಸ್ಥಾಪನೆಗೆ 25 ಎಕರೆ ಭೂಮಿ ನೀಡಲು ಗುಲಬರ್ಗಾ ವಿ.ವಿ. ಒಪ್ಪಿಗೆ ಸೂಚಿಸಿದೆ. ಇದರಿಂದ ವಿವಿ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ತರಬೇತಿ ಪಡೆಯಲು ತುಂಬಾ ಅನುಕೂಲವಾಗಲಿದೆ. ಈ ಭೂಮಿಯನ್ನು ಲೀಸ್ ಆಧಾರದಲ್ಲಿ 30 ವರ್ಷಕ್ಕೆ ಪಡೆಯಲಾಗುತ್ತಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಕೆ.ಸಿ.ರವೀಂದ್ರನಾಥ, ಹಣಕಾಸು ಸಲಹೆಗಾರ ಅವಿನಾಶ, ಸಮನ್ವಯಾಧಿಕಾರಿ ಸಂತೋಷ ಇದ್ದರು.
‘ಜಯದೇವದಲ್ಲಿ ನೌಕರಿ ಕೊಡಿಸುವವರ ಬಗ್ಗೆ ಎಚ್ಚರ’
ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ನೌಕರಿ ಕೊಡಿಸುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ರಾಜಶೇಖರ್ ಮತ್ತು ಸಂತೋಷ ಎಂಬುವವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು. ಹೀಗೆ ನೌಕರಿ ಕೊಡಿಸುತ್ತೇನೆ ಎನ್ನುವವರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ನೌಕರಿ ತೆಗೆದುಕೊಳ್ಳಬೇಕಾದರೆ ಜಯದೇವ ಸಂಸ್ಥೆಯು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುತ್ತದೆ. ಅರ್ಹತೆ ಆಧರಿಸಿ ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಮುಂದೆ ನೌಕರಿ ಕೊಡಿಸುವುದಾಗಿ ಹೇಳಿದರೆ ಅಂಥವರ ವಿರುದ್ಧ ದೂರು ನೀಡಬೇಕು ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.